ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಅವಶೇಷಗಳ ತಾಣವಾದ ಡಿ.ಜೆ.ಹಳ್ಳಿ ಠಾಣೆ

ಗಾಜುಗಳು ಪುಡಿ ಪುಡಿ–ವಾಹನಗಳು ಜಖಂ * ಪ್ರತಿಭಟನೆ ನಡೆಸುತ್ತಲೇ ಕಲ್ಲು ತೂರಾಟ
Last Updated 12 ಆಗಸ್ಟ್ 2020, 22:25 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮೂರು ವರ್ಷಗಳ ಹಿಂದಷ್ಟೇ ಕಟ್ಟಿಸಿದ್ದ ಠಾಣೆಯ ಕಟ್ಟಡದ ಗಾಜುಗಳು ಪುಡಿ ಪುಡಿ. ಕಟ್ಟಡದ ನೆಲಮಹಡಿಯಲ್ಲಿರುವ ಪಾರ್ಕಿಂಗ್ ಜಾಗ ಹಾಗೂ ಠಾಣೆ ಎದುರಿನ ರಸ್ತೆಯಲ್ಲಿದ್ದ ಕಾರು ಹಾಗೂ ದ್ವಿಚಕ್ರ ವಾಹನಗಳೂ ಬೆಂಕಿಗೆ ಆಹುತಿ. ಎಲ್ಲಿ ನೋಡಿದರಲ್ಲಿ ದೊಡ್ಡ ಗಾತ್ರದ ಕಲ್ಲುಗಳು, ದೊಣ್ಣೆ, ಚಪ್ಪಲಿಗಳು.

ಮಂಗಳವಾರ ರಾತ್ರಿ ಗಲಭೆ ನಡೆದಿದ್ದ ಡಿ.ಜೆ.ಹಳ್ಳಿ ಠಾಣೆ ಹಾಗೂ ಸುತ್ತಮುತ್ತ ಕಂಡುಬಂದ ದೃಶ್ಯಗಳಿವು. ತಡರಾತ್ರಿಯೇ ಗಲಭೆ ನಿಯಂತ್ರಿಸಿದ್ದ ಪೊಲೀಸರು, ಇಡೀ ಪ್ರದೇಶವನ್ನು ಬುಧವಾರ ಬೆಳಿಗ್ಗೆ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸಿದರು. ನಂತರ ಪೊಲೀಸರೇ ವಾಹನಗಳನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದರು. ಅಷ್ಟಾದರೂ ಬೆಂಕಿ ಕಾವು ಆರಿರಲಿಲ್ಲ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ರಸ್ತೆಯುದ್ದಕ್ಕೂ ಕಾವಲು ನಿಂತಿದ್ದ ಪೊಲೀಸರು, ಅನಗತ್ಯವಾಗಿ ಓಡಾಡಿದವರಿಗೆ ಲಾಠಿ ರುಚಿ ತೋರಿಸಿದರು. ಮೂರು ಪ್ರದೇಶದಲ್ಲಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿತ್ತು.

ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಿಡಿಗೇಡಿಗಳಿಂದ ಸುಟ್ಟು ಕರಕಲಾಗಿರುವ ವಾಹನಗಳನ್ನು ಕೆ.ಜಿ.ಹಳ್ಳಿ ಠಾಣೆ ಎದುರು ರಾಶಿ ಹಾಕಲಾಗಿದೆ. ಇದೇ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.

ಕಲ್ಲು ತೂರಾಟ: ಗಲಭೆ ಚಿತ್ರಣವನ್ನು ‘ಪ್ರಜಾವಾಣಿ’ ಎದುರು ತೆರೆದಿಟ್ಟ ಡಿ.ಜೆ.ಹಳ್ಳಿ ಠಾಣೆಯ ಹೆಡ್ ಕಾನ್‌ಸ್ಟೆಬಲೊಬ್ಬರು, ‘ಠಾಣೆ ಎದುರು ಪ್ರತಿಭಟನೆ ನಡೆಸಲು ಸೇರಿದ್ದ ಜನರೇ ಕಲ್ಲು ತೂರಾಟ ನಡೆಸಿದರು. ಠಾಣೆ ಆವರಣಕ್ಕೆ ನುಗ್ಗಿ, ಜೀಪು ಹಾಗೂ ಬೈಕ್‌ಗಳನ್ನು ಸುಟ್ಟರು’ ಎಂದರು.

‘ಕಾವಲ್‌ಭೈರಸಂದ್ರದ ನಿವಾಸಿ ನವೀನ್ ಸಂಜೆ 6 ಗಂಟೆಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದ. ಎಸ್‌ಡಿಪಿಐ ಮುಖಂಡ ಮುಜಾಮ್ಮಿಲ್ ಪಾಷ, ಶಿವಾಜಿನಗರದ ಸೈಯದ್ ಅಜ್ನಾನ್ ಸೇರಿದಂತೆ 15 ಮಂದಿ ರಾತ್ರಿ 7.30ರ ಸುಮಾರಿಗೆ ಠಾಣೆಗೆ ಬಂದರು. ಇನ್‌ಸ್ಪೆಕ್ಟರ್ ಕೇಶವಮೂರ್ತಿ ಮಾತ್ರ ಠಾಣೆಯಲ್ಲಿದ್ದರು. ವಿಷಯ ಗಂಭೀರವಾಗಿದ್ದರಿಂದ ಡಿಸಿಪಿ ಶರಣಪ್ಪ ಹಾಗೂ ಎಸಿಪಿ ರವೀಂದ್ರಪ್ರಸಾದ್‌ ಠಾಣೆಗೆ ಬಂದರು’

‘ದೂರು ಸ್ವೀಕರಿಸಿದ ಡಿಸಿಪಿ ಅವರು ಎಫ್‌ಐಆರ್‌ ದಾಖಲಿಸಲು ಇನ್‌ಸ್ಪೆಕ್ಟರ್‌ಗೆ ಸೂಚಿಸಿದರು. ಆರೋಪಿ ಬಂಧನಕ್ಕೂ ತಂಡ ಕಳುಹಿಸುವಂತೆ ಹೇಳಿದರು. ಅಷ್ಟಕ್ಕೆ ಸುಮ್ಮನಾಗದ ಮುಜಾಮ್ಮಿಲ್, ಈಗಲೇ ಆರೋಪಿಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದರು. ‘ಕಾನೂನಿನ್ವಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಡಿಸಿಪಿ ಹೇಳಿದರು. ಅದಕ್ಕೆ ಒಪ್ಪದ ಮುಖಂಡರು ಠಾಣೆಯಿಂದ ಹೊರಬಂದು ರಸ್ತೆಯಲ್ಲಿ ಪ್ರತಿಭಟನೆ ಆರಂಭಿಸಿದರು’ ಎಂದೂ ತಿಳಿಸಿದರು.

‘ಠಾಣೆ ಎದುರು 2 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. ಠಾಣೆಯ ಮುಖ್ಯ ಗೇಟ್ ಮುಚ್ಚಲಾಗಿತ್ತು. ಗೇಟ್ ಮುರಿದು ಒಳ ನುಗ್ಗಿದ ಕಿಡಿಗೇಡಿಗಳು ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ವಾಹನಗಳಿಗೆ ಬೆಂಕಿ ಹಚ್ಚಿದರು. ಠಾಣೆ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಸುಟ್ಟರು. ಘಟನಾ ಸ್ಥಳಕ್ಕೆ ಬಂದ ಕೆಎಸ್‌ಆರ್‌ಪಿ ವಾಹನ, ಹೊಯ್ಸಳ ಗಸ್ತು ವಾಹನಕ್ಕೂ ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು’ ‘ಕೆಲವರು ಠಾಣೆಗೆ ನುಗ್ಗಲು ಯತ್ನಿಸಿ ಬಂದೂಕು ಕಿತ್ತುಕೊಳ್ಳಲು ಮುಂದಾಗಿದ್ದರು. ಅವಾಗಲೇ ಠಾಣೆ ಬಾಗಿಲು ಬಂದ್ ಮಾಡಿ ಒಳಗಿನಿಂದ ಲಾಕ್‌ ಮಾಡಲಾಯಿತು. ಡಿಸಿಪಿ, ಎಸಿಪಿ ಅವರು ಠಾಣೆಯೊಳಗೆ ಇದ್ದರು.

ಅದೇ ಸಂದರ್ಭದಲ್ಲಿ ಉದ್ರಿಕ್ತರು, ಠಾಣೆ ಕಿಟಕಿ ಬಾಗಿಲಿನ ಗಾಜು ಒಡೆದು ಹಾಕಿದರು. ಡಿಸಿಪಿ ಕಾರಿಗೂ ಬೆಂಕಿ ಇಟ್ಟರು’ ಎಂದೂ ಹೆಡ್‌ ಕಾನ್‌ಸ್ಟೆಬಲ್ ವಿವರಿಸಿದರು.

‘ಪೊಲೀಸರ ಹತ್ಯೆಗೆ ಠಾಣೆಗೆ ಬೆಂಕಿ’
‘ನಗರದಲ್ಲಿ ನಡೆದ ಗಲಭೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರ ಪತ್ತೆ ಹಚ್ಚಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಜತೆ ಗಲಭೆಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಅವರು, ‘ಹಿಂಸಾಚಾರದ ನಂತರದ ದೃಶ್ಯಗಳನ್ನು ನೋಡಿದರೆ, ಯಾವ ರೀತಿಯಲ್ಲಿ ಸಂಚು ರೂಪಿಸಿ ಠಾಣೆ ಮೇಲೆ ದಾಳಿ ಮಾಡಲಾಗಿದೆ ಎಂದು ಗೊತ್ತಾಗುತ್ತದೆ’ ಎಂದರು.

‘ಪೊಲೀಸರನ್ನು ಕೊಲ್ಲುವ ದುರುದ್ದೇಶ ಇಟ್ಟುಕೊಂಡೇ ಗಲಾಟೆ ಮಾಡಲಾಗಿದೆ. ಗಲಭೆ ಮಾಡಿ ಬಿಲಗಳಲ್ಲಿ ಅಡಗಿಕುಳಿತಿರುವ ಎಲ್ಲ ಇಲಿಗಳನ್ನು ಹೊರಗೆಳೆದು ಶಿಕ್ಷಿಸುತ್ತೇವೆ’ ಎಂದು ಗುಡುಗಿದರು.

‘ಮುಸ್ಲಿಂ ಹುಡುಗರು ರಕ್ಷಿಸಿದರು’
ಬೆಂಗಳೂರು:
‘ಕಾವಲ್ ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ವೇಳೆ ಸ್ಥಳೀಯ ಮುಸ್ಲಿಂ ಯುವಕರು ನನ್ನನ್ನು ರಕ್ಷಿಸಿದರು’ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕಹಾಗೂ ಬಂಧಿತ ಆರೋಪಿ ಪಿ.ನವೀನ್‌ನ ತಾಯಿ ಆರ್.ಜಯಂತಿ ತಿಳಿಸಿದರು.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮಂಗಳವಾರ ರಾತ್ರಿ ಸುಮಾರು 8.30 ವೇಳೆಗೆ ಯುವಕರ ದೊಡ್ಡ ಗುಂಪೊಂದು ಕಾವಲ್‍ಭೈರಸಂದ್ರದಲ್ಲಿರುವ ನಮ್ಮ ಮನೆಯ ಮುಂದೆ ಸಾಗಿತು. ಬಹುತೇಕರು 15ರಿಂದ 20ದೊಳಗಿನ ವಯೋಮಾನದವರು. ಅವರು ಈ ಜಾಗಕ್ಕೆ ಹೊಸಬರಂತೆ ಕಂಡರು. ಏನೆಂದು ಕೇಳುವಷ್ಟರಲ್ಲಿ ಗುಂಪಾಗಿ ಅಕ್ಕಪಕ್ಕದ ಮನೆಗಳ ಮೇಲೆ ದಾಳಿ ಮಾಡಿದರು’ ಎಂದು ವಿವರಿಸಿದರು.

‘ಬಾಡಿಗೆ ಮನೆಯವರ ವಾಹನಗಳನ್ನು ಧ್ವಂಸ ಮಾಡಿ, ಬೆಂಕಿ ಹಚ್ಚಿದರು. ಇದೇ ವೇಳೆ ಸ್ಥಳಕ್ಕೆ ಬಂದ ಪರಿಚಿತ ಮುಸ್ಲಿಂ ಹುಡುಗರು, 'ಅಮ್ಮಾ ನೀವು ಇಲ್ಲಿರಬೇಡಿ. ಇಲ್ಲೇ ಇದ್ದರೆ ನಿಮ್ಮ ಜೀವಕ್ಕೆ ಅಪಾಯ. ಮೊದಲು ಇಲ್ಲಿಂದ ಹೊರಡಿ' ಎಂದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು’ ಎಂದರು.

‘ಬ್ಯಾಂಕ್‌ನಲ್ಲಿದ್ದ ಚಿನ್ನವನ್ನು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮನೆಗೆ ತಂದಿದ್ದೆವು. ಮನೆಯಲ್ಲಿ ಸುಮಾರು ₹30 ಲಕ್ಷ ಬೆಲೆಬಾಳುವ ಚಿನ್ನ, ₹5 ಲಕ್ಷ ನಗದು, ಬೆಳ್ಳಿ ಸಾಮಗ್ರಿಗಳು ಇದ್ದವು. ದಾಳಿ ವೇಳೆ ಎಲ್ಲವನ್ನೂ ದೋಚಿದ್ದಾರೆ. ಮನೆಯಲ್ಲಿದ್ದ 150ಕ್ಕೂ ಹೆಚ್ಚು ಸೀರೆಗಳನ್ನು ಸುಟ್ಟು ಹಾಕಿದ್ದಾರೆ' ಎಂದು ಮಾಹಿತಿ ನೀಡಿದರು.

‘ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಅಣ್ಣತಮ್ಮಂದಿರಂತೆ ಇದ್ದೇವೆ. ರಾಜಕೀಯ ಷಡ್ಯಂತ್ರ ನಡೆಸಿ ದಾಳಿ ನಡೆಸಲಾಗಿದೆ. ಪಾಲಿಕೆ ಚುನಾವಣೆ ಸಮೀಪಿಸುತ್ತಿರುವುದರಿಂದ ನನ್ನ ಮಗನ ಹೆಸರನ್ನು ಬಳಸಿಕೊಂಡು, ತಮ್ಮನಿಗೆ ಕೆಟ್ಟ ಹೆಸರು ಬರಬೇಕೆಂದು ರಾಜಕೀಯ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆ. ಗಲಭೆಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು’ ಎಂದು ಒತ್ತಾಯಿಸಿದರು.

ಗಲಭೆಯಲ್ಲಿ ಮೃತಪಟ್ಟವರ ವಿವರ

1. ವಾಜೀದ್ ಖಾನ್ (20)

ಡಿ.ಜೆ.ಹಳ್ಳಿ ನಿವಾಸಿಯಾದ ವಾಜೀದ್ ಖಾನ್, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಸ್ನೇಹಿತರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದರು. ಗಲಭೆ ಸ್ಥಳದಲ್ಲಿ ವಾಜೀದ್ ಹಾಗೂ ಸ್ನೇಹಿತರು ಗುಂಪು ಸೇರಿದ್ದರು. ಪೊಲೀಸರು ಹಾರಿಸಿದ್ದ ಗುಂಡು ತಗುಲಿ ವಾಜೀದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಿಗೆ ಕೊರೊನಾ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

2. ಯಾಸೀರ್ (22)
ಡಿ.ಜೆ.ಹಳ್ಳಿ ನಿವಾಸಿಯಾದ ಯಾಸಿರ್, ಮಟನ್ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಮನೆಯಿಂದ ಹೊರಗೆ ಬಂದಿದ್ದರು. ಗಲಭೆ ಶುರುವಾದಾಗ ಸ್ಥಳದಲ್ಲಿ ಇದ್ದರು. ಗುಂಡೇಟು ತಗುಲಿ ರಸ್ತೆಯಲ್ಲಿ ಬಿದ್ದಿದ್ದ ಅವರನ್ನು ಸ್ನೇಹಿತರು, ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದರು. ಆದರೆ, ಆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರನ್ನು ಮಾತ್ರ ದಾಖಲಿಸಿಕೊಳ್ಳುವುದಾಗಿ ವೈದ್ಯರು ಹೇಳಿದ್ದರು. ನಂತರ ಬೇರೊಂದು ಆಸ್ಪತ್ರೆಗೆ ಯಾಸೀರ್‌ ಅವರನ್ನು ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು.ಮಗ ಆಸ್ಪತ್ರೆಗೆ ದಾಖಲಾದ ಸುದ್ದಿ ಪೋಷಕರಿಗೆ ಗೊತ್ತೇ ಇರಲಿಲ್ಲ. ಸಾವಿನ ಸುದ್ದಿ ತಿಳಿದ ತಾಯಿ ಹಾಗೂ ಸಹೋದರಿ ಬುಧವಾರ ಬೆಳಿಗ್ಗೆ ಡಿ.ಜೆ.ಹಳ್ಳಿ ಠಾಣೆಗೆ ಬಂದಿದ್ದರು. ಮಗ ಮೃತಪಟ್ಟಿರುವ ವಿಷಯವನ್ನು ಪೊಲೀಸರು ಹೇಳುತ್ತಿದ್ದಂತೆ ಸಹೋದರಿ ಪ್ರಜ್ಞೆ ತಪ್ಪಿ ಬಿದ್ದರು. ಅವರನ್ನು ಆಟೊದಲ್ಲೇ ಸಂಬಂಧಿಕರು ಆಸ್ಪತ್ರೆಗೆ ಕರೆದೊಯ್ದರು.

3. ಷೇಕ್ ಸಿದ್ದಿಕಿ (34)
ನಾಗವಾರದ ನಿವಾಸಿ ಷೇಕ್ ಸಿದ್ದಿಕಿ, ಆಟೊ ಚಾಲಕರಾಗಿದ್ದರು. ಮಂಗಳವಾರ ಮಧ್ಯಾಹ್ನ ಮನೆ ಬಿಟ್ಟಿದ್ದ ಅವರು, ಆಟೊ ತೆಗೆದುಕೊಂಡು ಶಿವಾಜಿನಗರ ಹಾಗೂ ಸುತ್ತಮುತ್ತ ಬಾಡಿಗೆ ಓಡಿಸಿದ್ದರು. ರಾತ್ರಿ ಕೆ.ಜಿ.ಹಳ್ಳಿಗೆ ಬಂದಿದ್ದರು. ಗಲಭೆ ವೇಳೆ ಸ್ಥಳದಲ್ಲಿ ಇದ್ದರು.

‘ನನ್ನ ಮಗ ಗಲಭೆಯಲ್ಲಿ ಭಾಗವಹಿಸಿಲ್ಲ. ಸಾವಿನ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು’ ಎಂದು ತಾಯಿ ಒತ್ತಾಯಿಸಿದ್ದಾರೆ.

ಗಲಭೆ ನಡೆದ ಪ್ರದೇಶಕ್ಕೆ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT