ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪೊಲೀಸ್ ಸುವರ್ಣ ಓಟ, 10 ಸಾವಿರ ಮಂದಿ ನೋಂದಣಿ

Published 4 ಮಾರ್ಚ್ 2024, 23:30 IST
Last Updated 4 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಸ್ಥಾಪನೆಯ ಸುವರ್ಣ ಮಹೋತ್ಸವದ ಅಂಗವಾಗಿ ಮಾರ್ಚ್‌ 10ರಂದು ಹಮ್ಮಿಕೊಳ್ಳುತ್ತಿರುವ ‘ಸುವರ್ಣ ಸಂಭ್ರಮ ಓಟ’ದಲ್ಲಿ ಪಾಲ್ಗೊಳ್ಳಲು 10 ಸಾವಿರ ಮಂದಿ ನೋಂದಣಿ ಮಾಡಿಸಿದ್ದಾರೆ.

ನಗರದ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಓಟದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್‌ ಮೋಹನ್ ಮಾಹಿತಿ ನೀಡಿದರು. ಓಟದ ಲಾಂಛನ ಬಿಡುಗಡೆ ಮಾಡಿದರು. ಓಟದ ಸ್ಪರ್ಧಿಗಳಿಗೆ ನೀಡುವ ಟೀ–ಶರ್ಟ್, ವಿಜೇತರಿಗೆ ನೀಡುವ ಪದಕಗಳು ಹಾಗೂ ‘ಡಿಜಿಪಿ ಕರ್ನಾಟಕ ಕಪ್’ ಅನಾವರಣಗೊಳಿಸಿದರು.

‘ರಾಜ್ಯದಲ್ಲಿ ಡ್ರಗ್ಸ್ ಮಟ್ಟಹಾಕಲು ಪೊಲೀಸರು ಯುದ್ಧದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೈಬರ್ ಅಪರಾಧಗಳು ದುಪ್ಪಟ್ಟಾಗುತ್ತಿವೆ. ಡ್ರಗ್ಸ್ ಹಾಗೂ ಸೈಬರ್ ಕ್ರೈಂ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯೊಂದಿಗೆ, ಜನರಲ್ಲಿ ಜಾಗೃತಿ ಮೂಡಿಸಲು ಎಸ್‌ಬಿಐ ಸಹಯೋಗದೊಂದಿಗೆ ಸುವರ್ಣ ಸಂಭ್ರಮ ಓಟ ಹಮ್ಮಿಕೊಳ್ಳಲಾಗಿದೆ’ ಎಂದು ಅಲೋಕ್‌ ಮೋಹನ್ ತಿಳಿಸಿದರು.

‘ಪೊಲೀಸರು, ಎಸ್‌ಬಿಐ ಸಿಬ್ಬಂದಿ ಹಾಗೂ ಸಾರ್ವಜನಿಕರ ವಿಭಾಗಗಳಲ್ಲಿ ಓಟ ಇರಲಿದೆ. 5 ಕಿ.ಮೀ ಹಾಗೂ 10 ಕಿ.ಮೀ ಪ್ರತ್ಯೇಕ ಓಟವಿದ್ದು, ಮೊದಲ, ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರಿಗೆ ನಗದು ಬಹುಮಾನವಿದೆ. ಆಸಕ್ತರು www.click2race.com ಜಾಲತಾಣ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಓಟದಲ್ಲಿ ಮೊದಲ ಸ್ಥಾನ ಪಡೆಯುವ ಪುರುಷ ಹಾಗೂ ಮಹಿಳೆಗೆ ಡಿಜಿಪಿ ಕರ್ನಾಟಕ ಕಪ್ ನೀಡಲಾಗುವುದು’ ಎಂದರು.

‘ಪ್ರತಿಯೊಬ್ಬರು ಆರೋಗ್ಯವಂತರಾಗಬೇಕು. ಇದಕ್ಕೆ ಓಟ ಸಹಕಾರಿ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಓಟ ಹಮ್ಮಿಕೊಳ್ಳಲಾಗುವುದು. ಪೊಲೀಸರು ಜನರೊಂದಿಗೆ ಬೆರೆಯಲು ಇದೊಂದು ಒಳ್ಳೆಯ ವೇದಿಕೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT