ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖಾ ಪ್ರಕ್ರಿಯೆ ಡಿಜಿಟಲೀಕರಣಕ್ಕೆ ಹೈಕೋರ್ಟ್‌ನ ಧಾರವಾಡ ಪೀಠ ಆದೇಶ

Last Updated 5 ನವೆಂಬರ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಮಿನಲ್‌ ಪ್ರಕರಣಗಳ ತನಿಖಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಿಸಲು ಮತ್ತು ನ್ಯಾಯಾಲಯಗಳೊಂದಿಗೆ ಹಂಚಿಕೊಳ್ಳಲು ಕಾರ್ಯಪಡೆಯೊಂದನ್ನು ರಚಿಸುವಂತೆ ಹೈಕೋರ್ಟ್‌ನ ಧಾರವಾಡ ಪೀಠವು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ತನಿಖಾ ಪ್ರಕ್ರಿಯೆಯಲ್ಲಿ ಲೋಪ ಮತ್ತು ತನಿಖೆಗೆ ಸಂಬಂಧಿಸಿದ ದಾಖಲೆಗಳಲ್ಲಿನ ಕೈಬರಹವನ್ನು ಓದಲು ಅಸಾಧ್ಯವಾಗುತ್ತಿರುವ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.

ಡಿಜಿಟಲೀಕರಣ ಮಾಡಲು ಪೊಲೀಸ್‌ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು, ಇ–ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಪ್ರತಿನಿಧಿ ಹಾಗೂ ಕ್ರೈಂ ಅಂಡ್‌ ಕ್ರಿಮಿನಲ್‌ ಟ್ರ್ಯಾಕಿಂಗ್‌ ನೆಟ್‌ವರ್ಕ್ಸ್‌ ಅಂಡ್‌ ಸಿಸ್ಟಮ್ಸ್‌ (ಸಿಸಿಟಿಎನ್‌ಎಸ್‌) ನಿರ್ದೇಶಕರ ಪ್ರತಿನಿಧಿ ಒಳಗೊಂಡ ಕಾರ್ಯಪಡೆ ರಚಿಸಲು ನ್ಯಾಯಪೀಠ ನಿರ್ದೇಶಿಸಿದೆ.

‘ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌), ಅಪರಾಧ ವಿವರಗಳ ನಮೂನೆಗಳು, ಬಂಧನ ಮೆಮೊ, ಶೋಧ ಮತ್ತು ವಶ‍ಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಪಟ್ಟಿಗಳು, ಮಹಜರು ವರದಿಗಳು, ಹೇಳಿಕೆಗಳು, ತನಿಖೆಯ ಅವಧಿಯಲ್ಲಿ ಆಸ್ಪತ್ರೆಗಳು ಮತ್ತು ಸಾರಿಗೆ ಇಲಾಖೆಯಿಂದ ಪಡೆದ ದಾಖಲೆಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಆರೋಪಪಟ್ಟಿ, ತನಿಖೆಯನ್ನು ಮುಕ್ತಾಯಗೊಳಿಸುವ ‘ಬಿ’ ವರದಿ, ‘ಸಿ’ ವರದಿ ಸೇರಿದಂತೆ ಎಲ್ಲ ದಾಖಲೆ ಗಳನ್ನೂ ಡಿಜಿಟಲೀಕರಿಸಿ ಸಂಗ್ರಹಿಸಿಡಬೇಕು. ಡಿಜಿಟಲ್‌ ಸಹಿಯೊಂದಿಗೆ ಈ ದಾಖಲೆಗಳನ್ನು ಜಾಮೀನು ಅರ್ಜಿ ವಿಚಾರಣೆ, ಪ್ರಕರಣದ ವಿಚಾರಣೆ, ಮೇಲ್ಮನವಿ ಹಾಗೂ ಮರು ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಾಲಯಗಳೊಂದಿಗೆ ಹಂಚಿಕೊಳ್ಳ ಬೇಕು’ ಎಂದು ನ್ಯಾಯಪೀಠ ಹೇಳಿದೆ.

ಡಿಜಿಟಲೀಕರಣ ಕುರಿತು ಡಿಜಿಪಿ ಮಾರ್ಗಸೂಚಿಗಳನ್ನು ಹೊರಡಿಸಬೇಕು. ಅದನ್ನು ಪಾಲಿಸದ ತನಿಖಾಧಿಕಾರಿಗಳಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಪೀಠ, ಡಿ. 5ರೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮಹಿಳೆಯೊಬ್ಬರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ, ಬಾಗಲಕೋಟೆ ಜಿಲ್ಲೆಯ ಮುಧೋಳದ ವ್ಯಕ್ತಿಯೊಬ್ಬರಿಗೆ ಜೀವಾವಧಿ ಶಿಕ್ಷೆ ಮತ್ತು ಅವರ ತಾಯಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ 2016ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿತ್ತು. ತನಿಖೆ ಹಾಗೂ ತನಿಖಾ ದಾಖಲೆಗಳಲ್ಲಿನ ಲೋಪದ ಕಾರಣಕ್ಕಾಗಿ ಶಿಕ್ಷೆ ರದ್ದುಪಡಿಸಿರುವ ಹೈಕೋರ್ಟ್‌ ವಿಭಾಗೀಯ ‍ಪೀಠ, ದಾಖಲೆಗಳ ಡಿಜಿಟಲೀಕರಣಕ್ಕೆ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT