ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಬಿಕೆ ದ್ರೋಹ; ‘ಡಿಜಿಎಂ’ ಕಂಪನಿ ನಿರ್ದೇಶಕ ವಶಕ್ಕೆ

Last Updated 3 ಜನವರಿ 2021, 16:42 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಪತ್ರೆಯೊಂದರ ಮಾಹಿತಿ ಕದ್ದು ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿ ವೈದ್ಯರ ನಂಬಿಕೆಗೆ ದ್ರೋಹ ಎಸಗಿದ ಆರೋಪದಡಿ ಎಂ. ಪ್ರಶಾಂತ್ ಎಂಬುವರನ್ನು ಸಂಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ವಿಶಾಖಪಟ್ಟಣದ ಪ್ರಶಾಂತ್, ತಂತ್ರಜ್ಞಾನ ಸೇವೆ ಒದಗಿಸುವ ‘ಡಿಜಿಎಂ’ ಕಂಪನಿ ನಿರ್ದೇಶಕ. ಅವರನ್ನು ವಿಶಾಖಪಟ್ಟಣದಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆತರಲಾಗಿದೆ. ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಮಾಹಿತಿ ಕಲೆ ಹಾಕಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ತಾಂತ್ರಿಕ ಮಾಹಿತಿ ಕಳವು ಹಾಗೂ ನಂಬಿಕೆ ದ್ರೋಹದ ಬಗ್ಗೆ ಮತ್ತಿಕೆರೆಯ ‘ಬೆಂಗಳೂರು ಸ್ಮೈಲ್’ ಆಸ್ಪತ್ರೆ ವೈದ್ಯ ಸಿ.ಎಂ. ಪರಮೇಶ್ವರ್ ಅವರು ಯಶವಂತಪುರ ಠಾಣೆಗೆ ದೂರು ನೀಡಿದ್ದರು. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಸಂಜಯನಗರ ಠಾಣೆಗೆ ವರ್ಗಾಯಿಸಲಾಗಿತ್ತು. ಆರೋಪಿಗಳಾದ ರಾಜೇಶ್ ರೆಡ್ಡಿ, ಎಂ. ಪ್ರಶಾಂತ್, ಶ್ರಾವಣಿ, ಯುವರಾಜ್, ಬಾಲಾಜಿ ನಾಡಿಗ್ ಹಾಗೂ ಡಿಜಿಎಂ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಮೂರು ಬಾರಿ ನೋಟಿಸ್‌ ನೋಡಿದರೂ ಆರೋಪಿಗಳು ವಿಚಾರಣೆಗೆ ಬಂದಿರಲಿಲ್ಲ. ಇದೀಗ ಪ್ರಶಾಂತ್‌ ಸಿಕ್ಕಿಬಿದ್ದಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

₹ 60 ಕೋಟಿ ನಷ್ಟ: ‘ಆಸ್ಪತ್ರೆ ಜಾಲತಾಣ ಹಾಗೂ ಸಾಮಾಜಿಕ ಜಾಲತಾಣ ನಿರ್ವಹಣೆ ಸಂಬಂಧ ಡಿಜಿಎಂ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇ–ಮೇಲ್ ಐ.ಡಿ., ಜಾಲತಾಣಗಳ ಯೂಸರ್ ಐ.ಡಿ., ಪಾಸ್‌ವರ್ಡ್ ಸೇರಿದಂತೆ ಎಲ್ಲ ಮಾಹಿತಿ ಕಂಪನಿ ಬಳಿ ಇತ್ತು’ ಎಂದು ವೈದ್ಯ ದೂರಿನಲ್ಲಿ ತಿಳಿಸಿದ್ದಾರೆ.

‘ಅಪರಾಧ ಸಂಚು ರೂಪಿಸಿದ್ದ ಆರೋಪಿಗಳು, ಎಲ್ಲ ಮಾಹಿತಿಗಳನ್ನು ಕದ್ದಿದ್ದರು. ಮಹತ್ವದ ಮಾಹಿತಿಗಳನ್ನು ಅಳಿಸಿ ಹಾಕಿದ್ದರು. ಜಾಲತಾಣದಲ್ಲಿದ್ದ ನನ್ನ ಮೊಬೈಲ್ ನಂಬರ್ ತೆಗೆದು, ರಾಜೇಶ್‌ ರೆಡ್ಡಿ ಮೊಬೈಲ್ ನಂಬರ್‌ ನಮೂದಿಸಲಾಗಿತ್ತು. ಆ ನಂಬರ್‌ಗೆ ರೋಗಿಗಳು ಕರೆ ಮಾಡಿದಾಗ, ವೈದ್ಯರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಸುಳ್ಳು ಹೇಳಲಾಗುತ್ತಿತ್ತು. ಈ ಮೂಲಕ ಆರೋಪಿಗಳು, ಆಸ್ಪತ್ರೆಗೆ ₹ 60 ಕೋಟಿಯಷ್ಟು ನಷ್ಟವನ್ನುಂಟು ಮಾಡಿದ್ದಾರೆ’ ಎಂದೂ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT