ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ: ವಾಹನದಿಂದ ಬಿದ್ದು ಅಂಗವಿಕಲ ಸಾವು

ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅವಘಡ l ಜಲಮಂಡಳಿ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್
Last Updated 7 ಸೆಪ್ಟೆಂಬರ್ 2021, 20:44 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಯಿಂದಾಗಿ
ದ್ವಿಚಕ್ರ ವಾಹನ ಉರುಳಿ ಬಿದ್ದಿದ್ದು, ಸವಾರ ಖುರ್ಷಿದ್ ಅಹ್ಮದ್ (65) ಎಂಬುವರು ಮೃತಪಟ್ಟಿದ್ದಾರೆ.

‘ಮೈಕೊ ಲೇಔಟ್‌ನ ಬಿಸ್ಮಿಲ್ಲಾ ನಗರದ ನಿವಾಸಿ ಖರ್ಷಿದ್ ಅಹ್ಮದ್, ಅಂಗವಿಕಲರಾಗಿದ್ದರು.
ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಎರಡು ಪ್ರತ್ಯೇಕ ಚಕ್ರಗಳನ್ನು ಅಳವಡಿಸಿಕೊಂಡು ಬಳಸುತ್ತಿದ್ದರು. ಅದೇ ವಾಹನದಲ್ಲಿ ಸೋಮವಾರ ರಾತ್ರಿ ವಿಶ್ವೇಶ್ವರಯ್ಯ ಬಡಾವಣೆಯ 4ನೇ ಹಂತದಲ್ಲಿರುವ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು
ಹೇಳಿದರು.

‘ರಸ್ತೆ ಗುಂಡಿಯಿಂದಾಗಿ ವಾಹನ ಉರುಳಿಬಿದ್ದು ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜಲಮಂಡಳಿ ಗುತ್ತಿಗೆದಾರ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಮಳೆಯಿಂದ ಕಿತ್ತುಹೋದ ಮಣ್ಣು: ‘ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಸುತ್ತಮುತ್ತ ಒಳಚರಂಡಿ ಕೊಳವೆ ಅಳವಡಿಸುವ ಕೆಲಸ ನಡೆಯುತ್ತಿದೆ. ಜಲಮಂಡಳಿಯ ಕಾಮಗಾರಿಯ ಗುತ್ತಿಗೆ ಪಡೆದವರು, ಈ ಕೆಲಸ ಮಾಡಿಸುತ್ತಿದ್ದಾರೆ. ಮಂಗನಹಳ್ಳಿ ಮುಖ್ಯರಸ್ತೆಯಲ್ಲೂ ಇತ್ತೀಚೆಗೆ ಡಾಂಬರ್ ರಸ್ತೆ ಅಗೆದು ಪೈಪ್
ಅಳವಡಿಸಲಾಗಿತ್ತು.’

‘ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ಮಣ್ಣು ಅಗೆದು ಗುಂಡಿ ತೊಡಲಾಗಿತ್ತು. ಅದರೊಳಗೆ ಕೊಳವೆ ಅಳವಡಿಸಿ, ನಂತರ ಮಣ್ಣಿನಿಂದ ಮುಚ್ಚಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮಣ್ಣು ಕಿತ್ತು ಹೋಗಿ, ದೊಡ್ಡ ಗುಂಡಿ ಸೃಷ್ಟಿಯಾಗಿತ್ತು. ಅದರೊಳಗೆ ನೀರು ನಿಂತುಕೊಂಡಿತ್ತು’ ಎಂದೂ ಪೊಲೀಸರು ವಿವರಿಸಿದರು.

‘ರಸ್ತೆ ಮೇಲೆ ನೀರು ನಿಂತಿರಬಹುದೆಂದು ಕೆಲ ಸವಾರರು, ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಗುಂಡಿಯಲ್ಲಿ ವಾಹನಗಳು ಇಳಿದು ಉರುಳಿ ಬೀಳುತ್ತಿದ್ದವು. ಇದರಿಂದಾಗಿ ಅನೇಕ ಸವಾರರು ಗಾಯಗೊಂಡಿದ್ದರು ಎಂಬ ಮಾಹಿತಿಯೂ
ಇದೆ.’

‘ಖುರ್ಷಿದ್ ಅಹ್ಮದ್‌
ಅವರುಕೆಲಸ ನಿಮಿತ್ತ ಇದೇ ರಸ್ತೆಯಲ್ಲಿ ಹೊರಟಿದ್ದರು. ಗುಂಡಿಯಲ್ಲಿ ಚಕ್ರಗಳು ಇಳಿದಾಗ ವಾಹನ ಉರುಳಿಬಿದ್ದಿತ್ತು. ತೀವ್ರ ಗಾಯಗೊಂಡು ನರಳುತ್ತಿದ್ದ ಖುರ್ಷಿದ್ ಅವರನ್ನು ಸ್ಥಳೀಯರೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಪೊಲೀಸರು
ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT