ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು:ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಸಮನ್ವಯ ಸಭೆ

Published 22 ಮಾರ್ಚ್ 2024, 14:48 IST
Last Updated 22 ಮಾರ್ಚ್ 2024, 14:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾವಹಿಸಿ, ಉಲ್ಲಂಘನೆಗಳಾದಲ್ಲಿ ಕೂಡಲೆ ದೂರು ದಾಖಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

‘ಚೆಕ್‌ಪೋಸ್ಟ್‌ಗಳಲ್ಲಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸಬೇಕು. ದಾಖಲಾತಿಗಳಿಲ್ಲದೆ ಹಣ ಅಥವಾ ಇನ್ನಿತರೆ ವಸ್ತುಗಳನ್ನು ಸಾಗಿಸುತ್ತಿದ್ದರೆ ಅದನ್ನು ವಶಕ್ಕೆ ಪಡೆದು ಕೂಡಲೆ ದೂರು ದಾಖಲಿಸಬೇಕು. ₹10 ಲಕ್ಷಕ್ಕಿಂತ ಹೆಚ್ಚಿನ ಹಣ ಸಿಕ್ಕಿದಲ್ಲಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಬೇಕು. ವಶಪಡಿಸಿಕೊಂಡಿರುವ ಹಣಕ್ಕೆ ಸಂಬಂಧಪಟ್ಟವರು ಸರಿಯಾದ ದಾಖಲೆಗಳನ್ನು ಸಲ್ಲಿಸಿದಲ್ಲಿ ಹಣವನ್ನು ಜಿಲ್ಲಾಮಟ್ಟದ ದೂರು ಸಮಿತಿಯ ಆದೇಶದ ಮೇರೆಗೆ ಬಿಡುಗಡೆಗೊಳಿಸಬೇಕು’ ಎಂದು ಹೇಳಿದರು.

ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ನಿಯೋಜಿಸಿರುವ ಎಫ್‌ಎಸ್‌ಟಿ ಹಾಗೂ ಎಸ್‌ಎಸ್‌ಟಿ ತಂಡಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಿ, ಚುನಾವಣೆಗೆ ಸಂಬಂಧಿಸಿದಂತೆ ದೂರುಗಳನ್ನು ಆಯಾ ಪೊಲೀಸ್ ಠಾಣೆಗೆ ನೀಡಬೇಕು. ಪೊಲೀಸ್ ಅಧಿಕಾರಿಗಳು ದೂರಿನ ಮೇಲೆ ಎಫ್‌ಐಆರ್ ಅಥವಾ ಗಂಭೀರ ಸ್ವರೂಪವಲ್ಲದ ವರದಿ (ಎನ್‌ಸಿಆರ್) ದಾಖಲಿಸಿ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿದರು.

ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಮಾದರಿ ನೀತಿ ಸಂಹಿತೆ ಅಧಿಕಾರಿಯನ್ನು ನಿಯೋಜನೆ ಮಾಡಿರುವುದರಿಂದ ಅವರಿಂದ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿ (ಎಂಸಿಎಂಸಿ) ಉಲ್ಲಂಘನೆ ಪ್ರಕರಣ ದೂರುಗಳನ್ನು ನೀಡಬೇಕು ಎಂದು ಹೇಳಿದರು.

ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ದಯಾನಂದ್ ಮಾತನಾಡಿ, ‘ಲೋಕಸಬಾ ಚುನಾವಣಾ ಕೆಲಸ-ಕಾರ್ಯಗಳನ್ನು ಶಿಸ್ತಿನಿಂದ ನಿರ್ವಹಿಸಬೇಕು. ಚುನಾವಣಾಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ ಕರ್ತವ್ಯ ನಿರ್ವಹಿಸಬೇಕು’ ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಹರೀಶ್ ಕುಮಾರ್, ದಯಾನಂದ್, ವಿನೋತ್ ಪ್ರಿಯಾ, ಡಿಸಿಪಿಗಳು, ಪೊಲೀಸ್ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT