ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಜೆ.ಹಳ್ಳಿ ಗಲಭೆ: ಘಟನೆಯ ಹೊಣೆ ಪೊಲೀಸರು ಹೊರಬೇಕು –ಡಿ.ಕೆ. ಶಿವಕುಮಾರ್‌

Last Updated 12 ಆಗಸ್ಟ್ 2020, 10:21 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ನಡೆದ ಘಟನೆಯ ಹೊಣೆಯನ್ನು ಪೊಲೀಸರು ಹೊರಬೇಕು. ಪೊಲೀಸರಿಂದ ಶಾಸಕರಿಗೇ ರಕ್ಷಣೆ ಇಲ್ಲವೆಂದರೆ ಇನ್ಯಾರಿಗೆ ಸಿಗುತ್ತದೆ. ಇದು ಬಹಳ ವ್ಯವಸ್ಥಿತ ಸಂಚು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ಬೆಂಗಳೂರಿನ ಪಕ್ಷದ ಶಾಸಕರು, ಮಾಜಿ ಮೇಯರ್‌ಗಳ ಜೊತೆ ಬುಧವಾರ ಸುಮಾರು ಒಂದು ಗಂಟೆ ಸಭೆ ನಡೆಸಿದ ಬಳಿಕ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ನಡೆದ ಗಲಭೆಯ ಬಗ್ಗೆ ಪಕ್ಷದ ನಾಯಕರಾದ ಜಿ. ಪರಮೇಶ್ವರ ನೇತೃತ್ವದಲ್ಲಿ ಆರು ಮಂದಿಯ ತಂಡ ಸ್ಥಳಕ್ಕೆ ಭೇಟಿ ನೀಡಿ ವಾಸ್ತವವಾಗಿ ಏನು ನಡೆದಿದೆ ಎಂಬುದರ ಬಗ್ಗೆ ವರದಿ ನೀಡಲಿದೆ’ ಎಂದರು.

‘ಮಂಗಳವಾರ ರಾತ್ರಿ ನಗರದಲ್ಲಿ ನಡೆದ ಘಟನೆಯನ್ನು ನಾವು ಖಂಡಿಸುತ್ತೇವೆ. ಕಾನೂನು ಕೈಗೆತ್ತಿಕೊಂಡಿರುವವರ ಮೇಲೆ ಕ್ರಮಕೈಗೊಳ್ಳಬೇಕು. ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ಸರಿಯಲ್ಲ’ ಎಂದರು.

‘ಅವಹೇಳಕಾರಿ ಪೋಸ್ಟ್ ಹಾಕಿದ್ದಾನೆ ಎನ್ನಲಾದ ನವೀನ್ ಎಂಬಾತ ಬಿಜೆಪಿಯ ಕಟ್ಟಾ ಬೆಂಬಲಿಗ, ಮತದಾರ. ಆತನಿಗೂ ನಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೂ ಯಾವುದೇ ರಾಜಕೀಯ ಸಂಬಂಧ ಇಲ್ಲ’ ಎಂದರು.

‘ಪೋಸ್ಟ್‌ ಬಗ್ಗೆ ಕೆಲವರು ಪೊಲೀಸರಿಗೆ ದೂರು ನೀಡಿ ಮೂರು ಗಂಟೆ ಕಳೆದರೂ ಕ್ರಮಕೈಗೊಳ್ಳಲಿಲ್ಲ. ನಮ್ಮ ಪಕ್ಷದ ಶಾಸಕರ ಮನೆ ಮೇಲೆ ದಾಳಿ ನಡೆದರೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಲಿಲ್ಲ ಪೊಲೀಸರು ಸಬೂಬು ಹೇಳಿಕೊಂಡು ಕ್ರಮ ಜರುಗಿಸಲಿಲ್ಲ. ಈ ಸರ್ಕಾರದ ಅಧಿಕಾರಿಗಳೇ ಇದಕ್ಕೆ ಕಾರಣ. ನಮ್ಮ ಶಾಸಕರಿಗೆ ರಕ್ಷಣೆ ಕೊಡಲು ಸರ್ಕಾರದಿಂದ ಆಗಲೇ ಇಲ್ಲ’ ಎಂದು ದೂರಿದರು.

‘ಡಿಜೆ ಹಳ್ಳಿ ತುಂಬಾ ಸೂಕ್ಷ್ಮ ಪ್ರದೇಶ ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟಾದರೂ ಗಲಭೆ ನಿಯಂತ್ರಿಸುವಲ್ಲಿ ವಿಫಲ’ ಎಂದೂ ಆರೋಪಿಸಿದರು.

‘ಎಲ್ಲ್ಲ ರೀತಿಯ ಸಹಕಾರ ಕೊಡಲು ನಾವು ಸಿದ್ಧವಾಗಿದ್ದೇವೆ. ಆದರೆ, ನಿರಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಡಿ. ಮನೆಯಲ್ಲಿ ಮಲಗಿರುವವರನ್ನೆಲ್ಲಾ ಬಂಧಿಸಬೇಡಿ’ ಎಂದರು.

‘ಬಿಜೆಪಿಯ ಕೆಲವು ಮುಖಂಡರು ಪ್ರಚೋದನಕಾರಿ ಹೇಳಿಕೆ‌ಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಇದನ್ನು ಗಮನಿಸಬೇಕು. ನಾವು ಯಾರನ್ನೂ ರಕ್ಷಣೆ ಮಾಡಲ್ಲ. ನಮ್ಮ ಶಾಸಕ (ಅಖಂಡ ಶ್ರೀನಿವಾಸಮೂರ್ತಿ) ಜೊತೆ ನಾನು ನಿರಂತರ ಸಂರ್ಪಕದಲ್ಲಿದ್ದೇನೆ. ಮಂಗಳವಾರ ರಾತ್ರಿ 9 ಗಂಟೆಗೆ ಅವರ ಜೊತೆ ಮಾತಾಡಿದ್ದೇನೆ. ಒಂದು ವೇಳೆ ಶಾಸಕರನ್ನು ಸ್ಥಳಾಂತರಿಸದೇ ಇದ್ದಿದ್ದರೆ ಅವರ ಪ್ರಾಣಕ್ಕೆ ಅಪಾಯ ಉಂಟಾಗುತ್ತಿತ್ತು’ ಎಂದರು.

ಸಂಘಟನೆಗಳ ನಿಷೇಧ ವಿಷಯದಲ್ಲಿ ಪ್ರತಿಕ್ರಿಯಿಸಿದ ಶಿವಕುಮಾರ್, ‘ಸರ್ಕಾರದ ನಿರ್ಧಾರಗಳ ಬಗ್ಗೆ ನಾವು ಮಧ್ಯಪ್ರವೇಶ ಮಾಡಲ್ಲ. ಗಲಭೆಗೆ ಪ್ರಚೋದನೆ ಮಾಡಿದವರ ಮೇಲೆ ಕ್ರಮ ಆಗಬೇಕು. ಪ್ರಚೋದನೆ ನೀಡಿದ ಸಂಘಟನೆಯ ಮೇಲೂ ಕ್ರಮ ಆಗಬೇಕು’ ಎಂದು ಆಗ್ರಹಿಸಿದರು.

ಶಾಸಕರಾದ ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಬಿ.ಕೆ. ಹರಿಪ್ರಸಾದ್ ಇದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT