ಭಾನುವಾರ, ಜೂನ್ 7, 2020
22 °C
ನೌಕರರ ಸಂಬಳ ಕಡಿತ ಮಾಡಬೇಡಿ

ಕೋಮು ಅಪಪ್ರಚಾರ–ತಪ್ಪಿತಸ್ಥರ ಬಂಧಿಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಒಂದು ಕೋಮಿನ ವಿರುದ್ಧ ಅಪಪ್ರಚಾರ ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಬಂಧಿಸಿ ಸ್ಪಷ್ಟ ಸಂದೇಶ ರವಾನಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಇದೇ 14ರ ನಂತರ ಲಾಕ್‌ಡೌನ್‌ ಮುಂದುವರಿದರೂ ಸರ್ಕಾರಿ ನೌಕರರ ವೇತನ ಕಡಿತಗೊಳಿಸಬಾರದು. ಅದರ ಬದಲು ‌ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಹಣ ಹೊಂದಿಸಲಿ. ಸರ್ಕಾರಿ ಸಿಬ್ಬಂದಿಗೆ ಸಂಬಳ ನೀಡದಿರುವಷ್ಟರ ಮಟ್ಟಿಗೆ ಸರ್ಕಾರಕ್ಕೆ ದಾರಿದ್ರ್ಯ ಬಂದಿಲ್ಲ’ ಎಂದರು.‌

‘ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಲಗಿದೆ. ಈ ಇಲಾಖೆ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಬೇಸಿಗೆ ಆರಂಭವಾಗಿದ್ದು, ಬರ ಎದುರಾಗುವ ಪರಿಸ್ಥಿತಿ ಇದೆ. ಈ ಹಂತದಲ್ಲಿ ಹಳ್ಳಿಗಳಲ್ಲಿ ಜನರಿಗೆ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ನರೇಗಾ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕನಿಗೆ ತಿಂಗಳಿಗೆ ₹8 ಸಾವಿರದಿಂದ ₹9 ಸಾವಿರ ನೀಡಲು ಹಾಗೂ ಒಂದು ಪಂಚಾಯ್ತಿಗೆ ₹4 ಕೋಟಿಯಿಂದ ₹5 ಕೋಟಿ ಖರ್ಚು ಮಾಡಲು ಅವಕಾಶವಿದೆ. ಜನರು ವೈಯಕ್ತಿಕವಾಗಿ ಉದ್ಯೋಗ ಮಾಡಲು ಪಂಚಾಯ್ತಿ ಮಟ್ಟದಲ್ಲಿ ಸಹಕಾರ ನೀಡಬೇಕು’ ಎಂದರು.‌

‘ಎರಡು ಮೂರು ದಿನಗಳಲ್ಲಿ ಸರ್ಕಾರ ಈ ಕೆಲಸ ಮಾಡದಿದ್ದರೆ ಕಾಂಗ್ರೆಸ್ ಪಕ್ಷದ ಪರವಾಗಿ ನಾನು ವಿಡಿಯೊ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ. ಮುಂದಿನ ದಿನಗಳಲ್ಲಿ ಉದ್ಯೋಗ ಇಲ್ಲದೇ ಹಣ ಸಿಗದಿದ್ದರೆ ಜನ ಕಳ್ಳತನದಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಇಳಿಯುತ್ತಾರೋ ಎಂಬ ಭಯ ಹುಟ್ಟಿಕೊಂಡಿದೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ ಎಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಇಲಾಖೆಯ ಕೆಲಸ’ ಎಂದರು.

ಎಲ್ಲರಿಗೂ ಚಿಕಿತ್ಸೆ ಲಭಿಸಲಿ: ‘ಹಲವು ಕಡೆಗಳಲ್ಲಿ ವೈದ್ಯರು ಕ್ಲಿನಿಕ್‌ಗಳನ್ನು ಮುಚ್ಚಿದ್ದಾರೆ. ಅವರಿಗೆ ವಿಶೇಷ ಕಾರ್ಡ್‌ ನೀಡಿ ರೋಗಿಗಳನ್ನು ಉಪಚರಿಸಲು ಅವಕಾಶ ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಕೊರೊನಾ ಪ್ರಕರಣ ಮಾತ್ರ ನೋಡುವುದಾಗಿ ಹೇಳಿದ್ದು, ಬೇರೆ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇತರ ವೈದ್ಯರ ಸೇವೆಯನ್ನು ಬಳಸಬೇಕು ಹಾಗೂ ರಾಜ್ಯದ ಯಾವುದೇ
ವ್ಯಕ್ತಿ ಚಿಕಿತ್ಸೆ ಸಿಗದೆ ಸಾಯುವಂತಾಗಬಾರದು’ ಎಂದು ಶಿವಕುಮಾರ್‌ ಕೇಳಿಕೊಂಡರು.

ಚಿಕಿತ್ಸೆಗೆ 75 ವೈದ್ಯರು ‘ಕೈ’ ಸಹಾಯವಾಣಿ

‘ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಅನೇಕ ಮಂದಿಗೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ಲಭಿಸುತ್ತಿಲ್ಲ. ಇದಕ್ಕಾಗಿ ಕೆಪಿಸಿಸಿ ಆರೋಗ್ಯ ಸಹಾಯವಾಣಿ (08047188000) ತೆರೆಯಲಾಗಿದ್ದು, ಇದನ್ನು ವೈದ್ಯರೇ ನಿರ್ವಹಿಸಲಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

‘75 ಮಂದಿ ವೈದ್ಯರು ಚಿಕಿತ್ಸೆ ನೀಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದಾರೆ. ಕೋವಿಡ್‌–19 ಜತೆಗೆ ಇತರ ಕಾಯಿಲೆಗಳಿಗೂ ಚಿಕಿತ್ಸೆ ನೀಡಲಿದ್ದಾರೆ. ಕೋವಿಡ್‌ ಸೋಂಕಿತರಿಗೆ ನೇರವಾಗಿ ಚಿಕಿತ್ಸೆ ನೀಡಲಿದ್ದಾರೆ. ಇತರರು ಸಹಾಯವಾಣಿಗೆ ಕರೆ ಮಾಡಿದರೆ ಸೂಕ್ತ ಔಷಧಿ ತಿಳಿಸುತ್ತಾರೆ. ಬುಧವಾರದಿಂದ ಈ ವ್ಯವಸ್ಥೆ ಆರಂಭವಾಗಲಿದೆ’ ಎಂದರು.

ಸಚಿವರ ನಡುವಿನ ಅಸಮಾಧಾನ, ಸಿಂಧನೂರಿನ ಮಹಿಳೆ ಸಾವು ಪ್ರಕರಣಗಳನ್ನು ದೊಡ್ಡ ವಿವಾದ ಮಾಡುವುದಿಲ್ಲ. ಸರ್ಕಾರ ಸೂಕ್ಷ್ಮವಾಗಿ ಕೆಲಸ ಮಾಡಲಿ .

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು