ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ಬಣ್ಣ ಗೊತ್ತಾಗಿದೆ: ಮುನಿರತ್ನ ವಿರುದ್ಧ ಡಿಕೆ ಕಿಡಿ

Last Updated 1 ನವೆಂಬರ್ 2020, 18:57 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್‌.ಆರ್‌.ನಗರ ಕ್ಷೇತ್ರದ ಉಪ ಚುನಾವಣೆ ಸ್ವಾಭಿಮಾನದ ಪ್ರಶ್ನೆ. ತಾವು ಹಾಕಿದ ಮತವನ್ನು ಮಾರಿಕೊಂಡಿದ್ದರ ಬಗ್ಗೆ ಮತದಾರರು ಆಕ್ರೋಶ ಗೊಂಡಿದ್ದಾರೆ. ಯಡಿಯೂರಪ್ಪನವರು ತಮ್ಮ ಪಕ್ಷದ ಅಭ್ಯರ್ಥಿ (ಮುನಿರತ್ನ) ಭ್ರಷ್ಟಾಚಾರ ಮಾಡಿದ್ದ ಬಗ್ಗೆ ಹಿಂದೆ ರಾಜ್ಯಪಾಲರಿಗೆ ದೂರು ನೀಡಿದ್ದರು. ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರು ಇವರ ವಿರುದ್ಧ ಮಾತನಾಡಿದ್ದರು. ಈಗ ಆ ಬಗ್ಗೆ ಬಿಜೆಪಿಯವರ ಬಳಿ ಉತ್ತರವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಪಕ್ಷದ ಅಭ್ಯರ್ಥಿ ಕುಸುಮಾ ಪರ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ‘ಯಡಿಯೂರಪ್ಪನವರು ಇಂಥ ವ್ಯಕ್ತಿಗೆ ಅಧಿಕಾರ ಕೊಡುವುದಕ್ಕಾಗಿ ಬಿಜೆಪಿ ಕಾರ್ಯಕರ್ತರನ್ನೇ ಬಲಿ ಕೊಡಲು ಹೊರಟಿದ್ದಾರೆ’ ಎಂದರು.

‘ನಮ್ಮ ಅಭ್ಯರ್ಥಿ ವಿದ್ಯಾವಂತೆ, ಬುದ್ದಿವಂತೆ, ಅರ್ಹ ಮಹಿಳೆ ಎಂದು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಮುಂದೆ ಬಂದು ಬೆಂಬಲ ನೀಡುತ್ತಿದ್ದಾರೆ. ಮುನಿರತ್ನಗೆ ಅವರ ಪಕ್ಷದಲ್ಲೇ ಅನೇಕ ಸಮಸ್ಯೆಗಳಿವೆ. ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಈ ಅಭ್ಯರ್ಥಿಯಿಂದ ಕೇಸು ಹಾಕಿಕೊಂಡಿರುವ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರೂ ಅವರದೇ ಆದ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದೂ ಭವಿಷ್ಯ ನುಡಿದರು.

‘ಮುನಿರತ್ನ ಹಣ ಹಂಚುತ್ತಿದ್ದ ಬಗ್ಗೆ ಭಾನುವಾರ ರಾತ್ರಿಯಿಂದ 20 ವಿಡಿಯೊ ಮಾಡಿದ್ದೇವೆ. ಅವರು ಕ್ಷೇತ್ರದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಶಿವಕುಮಾರ್ ದೂರಿದರು.

ಬಿಜೆಪಿ ಕುತಂತ್ರ: ‘ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಗೂ ಕಾಂಗ್ರೆಸ್‌ನ ಮಾಜಿ ಮೇಯರ್ ಸಂಪತ್ ರಾಜ್‌ಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಅವರನ್ನು ಸಿಲುಕಿಸಲು ಕುತಂತ್ರ ಮಾಡುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT