ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧ ಸೆಣಸಾಟ: ವೈದ್ಯರ ಸೇವೆಗೆ ಶ್ಲಾಘನೆ

ನಗರದ ಆಸ್ಪತ್ರೆಗಳಲ್ಲಿ ವೈದ್ಯರ ದಿನ ಆಚರಣೆ *ಕೋವಿಡ್ ಸೇವೆಗೆ ವಿವಿಧೆಡೆ ಗೌರವ
Last Updated 1 ಜುಲೈ 2021, 20:37 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ವಿರುದ್ಧ ಜೀವದ ಹಂಗು ತೊರೆದು ಯೋಧರಂತೆ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಸಾರ್ಥಕ ಭಾವ ಮೂಡಿತ್ತು. ಸಂಕಷ್ಟದ ಸಂದರ್ಭದಲ್ಲಿಯೂ ಎದೆಗುಂದದೆಯೇ ಸೇವೆ ಸಲ್ಲಿದ ಅವರಿಗೆ, ಎಲ್ಲೆಡೆಯಿಂದ ಶುಭಾಶಯಗಳು, ಗೌರವಗಳ ಮಹಾಪೂರವೇ ಹರಿದುಬಂದಿತು.

ಡಾ.ಬಿ.ಸಿ. ರಾಯ್ ಅವರ ಜನ್ಮದಿನದ ಪ್ರಯುಕ್ತ ನಗರದ ವಿವಿಧೆಡೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು. ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಆರೋಗ್ಯ ಸಿಬ್ಬಂದಿ ವೈದ್ಯರಿಗೆ ಶುಭ ಹಾರೈಸಿದರು. ವಿವಿಧ ಸಂಘ–ಸಂಸ್ಥೆಗಳು ಕೋವಿಡ್‌ ಸೇವೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಗೌರವಿಸಿದವು. ಜನಪ್ರತಿನಿಧಿಗಳು ಆಸ್ಪತ್ರೆಗಳಿಗೆ ತೆರಳಿ, ವೈದ್ಯರಿಗೆ ಶುಭ ಕೋರಿದರು.

ಭಾರತೀಯ ವೈದ್ಯಕೀಯ ಸಂಘ (ಐಎಂಎ),ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ನ (ಫನಾ) ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳು ವೈದ್ಯರ ದಿನ ಆಚರಿಸಿ, ಡಾ.ಬಿ.ಸಿ. ರಾಯ್ ಅವರಿಗೆ ಗೌರವ ಸಲ್ಲಿಸಿದವು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವೈದ್ಯರನ್ನು ಐಎಂಎ ಸನ್ಮಾನಿಸಿತು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವೈದ್ಯರ ದಿನ ಆಚರಿಸಿದರು.

ಹಲ್ಲೆ ನಡೆಸಿದರೆ ಕ್ರಮ: ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಸಚಿವ ಡಾ.ಕೆ. ಸುಧಾಕರ್ ಉದ್ಘಾಟಿಸಿದರು. ‘ರೋಗಿಗಳ ಕಡೆಯವರು ವೈದ್ಯರು, ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ಸರ್ಕಾರ ಉಗ್ರವಾಗಿ ಖಂಡಿಸುತ್ತದೆ. ಯಾವುದೇ ವೈದ್ಯರು ರೋಗಿ ಮೃತಪಡಲಿ ಎಂದು ಬಯಸುವುದಿಲ್ಲ. ಈ ರೀತಿ ಹಲ್ಲೆ ನಡೆದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ.ವೈದ್ಯರ ಮೇಲೆ ಹಲ್ಲೆ ನಡೆಸಿದರೆ 5 ರಿಂದ 7 ವರ್ಷಗಳು ಜೈಲುವಾಸದ ಶಿಕ್ಷೆ ಇದೆ’ ಎಂದು ಎಚ್ಚರಿಕೆ ನೀಡಿದರು.

ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕ್ ಚಂದ್ರ, ‘ಕಳೆದ 15 ತಿಂಗಳಿಂದ ವೈದ್ಯರ ಸ್ಥಾನ ಮಾನ ಬದಲಾಗಿದೆ. ಅವರ ಸ್ವಾರ್ಥ ರಹಿತ ಸೇವೆಯು ಜಗತ್ತಿನಾದ್ಯಂತ ಗುರುತಿಸಲ್ಪಡುತ್ತಿದೆ. ಔಷಧವು ಕಾಯಿಲೆಯನ್ನು ಮಾತ್ರ ಗುಣಪಡಿಸುತ್ತವೆ. ರೋಗಿಯನ್ನು ಗುಣಪಡಿಸಲು ವೈದ್ಯರಿಂದ ಮಾತ್ರ ಸಾಧ್ಯ. ಹಾಗಾಗಿ, ವೈದ್ಯರು ರೋಗಿಯೊಂದಿಗೆ ಆತ್ಮೀಯವಾಗಿ ಸಂವಹನ ನಡೆಸಿ, ಚಿಕಿತ್ಸೆ ಒದಗಿಸಬೇಕು’ ಎಂದು ತಿಳಿಸಿದರು.

ಕನ್ನಡ ಬಳಕೆ ಅಭಿಯಾನಕ್ಕೆ ಚಾಲನೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡಿರುವ ‘ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅಭಿಯಾನ’ಕ್ಕೆ ಗುರುವಾರ ಚಾಲನೆ ದೊರೆತಿದೆ. ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಇಲಾಖೆಯ ಆಯುಕ್ತ ಡಾ.ಕೆ.ವಿ. ತ್ರಿಲೋಕ ಚಂದ್ರ ಅವರಿಗೆ ಇಲಾಖೆಯ ಮಟ್ಟದಲ್ಲಿ ನಡೆಯಬೇಕಾದ ಕನ್ನಡದ ಕೆಲಸಗಳು ಮತ್ತು ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿ, ಅಭಿಯಾನದ ಮನವಿ ಪತ್ರ ಸಲ್ಲಿಸಿದರು. ಆಯುಷ್ ಇಲಾಖೆ, ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ ಸೇರಿದಂತೆ ವಿವಿಧೆಡೆ ಅಭಿಯಾನ ನಡೆಯಿತು.

‘ಹುತಾತ್ಮ ವೈದ್ಯರಿಗೆ ಸ್ಮಾರಕ ನಿರ್ಮಾಣ’
‘ದೇಶದಲ್ಲಿ 700ರಿಂದ 800 ವೈದ್ಯರು ಕೋವಿಡ್‌ ಕಾಣಿಸಿಕೊಂಡ ಬಳಿಕ ಮೃತಪಟ್ಟಿದ್ದಾರೆ. ಅವರನ್ನು ಹುತಾತ್ಮರು ಎಂದು ಪರಿಗಣಿಸಲಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಡಿದ ವೈದ್ಯರನ್ನು ಪ್ರತಿ ವರ್ಷ ಸ್ಮರಿಸಲು ಆರೋಗ್ಯ ಸೌಧದ ಆವರಣದಲ್ಲಿ ವೈದ್ಯರ ಸ್ಮಾರಕ ನಿರ್ಮಿಸಲಾಗುವುದು’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

‘ಕೆಲವೇ ದಿನದಲ್ಲಿ ಸ್ಮಾರಕವನ್ನು ವಿನ್ಯಾಸ ಮಾಡಿ, ಸ್ಥಾಪಿಸಲಾಗುತ್ತದೆ. ಹುತಾತ್ಮರ ಕುಟುಂಬದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ’ ಎಂದರು.

ವೈದ್ಯರಿಗೆ ಸನ್ಮಾನ
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ನಗರದ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರಿಗೆ ಶುಭ ಹಾರೈಸಿದರು. ಈ ವೇಳೆ ವೈದ್ಯರನ್ನು ಸನ್ಮಾನಿಸಿದರು.

‘ರಾಜ್ಯದ ಆರೋಗ್ಯ ಮೂಲಸೌಕರ್ಯಗಳನ್ನು ಆಮೂಲಾಗ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ₹ 1,500 ಕೋಟಿ ವೆಚ್ಚದಲ್ಲಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ’ ಎಂದು ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT