ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಕಲ್ಲಸಂದ್ರ ಕೆರೆ ಡಿಪಿಆರ್‌ ಮಾರ್ಪಾಡಿಗೆ ಒತ್ತಾಯ

Last Updated 29 ಜುಲೈ 2020, 21:21 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡಕಲ್ಲಸಂದ್ರ ಕೆರೆಯ ಜೀವವೈವಿಧ್ಯ ಸಂರಕ್ಷಣೆ ಉದ್ದೇಶದಿಂದ ಈ ಜಲಕಾಯದ ಅಭಿವೃದ್ಧಿ ಕಾಮಗಾರಿಯ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ಕೆಲವೊಂದು ಮಾರ್ಪಾಡುಗಳನ್ನು ಮಾಡುವಂತೆ ಸ್ಥಳೀಯರು ಬಿಬಿಎಂಪಿಯನ್ನು ಒತ್ತಾಯಿಸಿದ್ದಾರೆ.

’ಬಿಬಿಎಂಪಿ ಸಿದ್ಧಪಡಿಸಿರುವ ಡಿಪಿಆರ್‌ ಎನ್‌.ಕೆ.ಪಾಟೀಲ ಸಮಿತಿಯ ಶಿಫಾರಸಿಗೆ ಪೂರಕವಾಗಿಲ್ಲ. ಈ ಡಿಪಿಆರ್‌ನಲ್ಲಿ ಬದಲಾವಣೆ ಮಾಡಬೇಕು ಎಂದು ಕೋರಿ ಪಾಲಿಕೆಯ ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪ್ರಭಾಕರ್‌ ಅವರಿಗೆ ಮನವಿ ಸಲ್ಲಿಸಿದ್ದೇವೆ‘ ಎಂದು ದೊಡ್ಡಕಲ್ಲಸಂದ್ರ ಕೆರೆ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ವಿ.ಮಂಜುನಾಥ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಕೆರೆಯ ನೈಜ ವಿಸ್ತೀರ್ಣ 21 ಎಕರೆ 16 ಗುಂಟೆ. ಭೂಮಾಪನ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕರು ಇದರ ಗಡಿ ಗುರುತು ನಕ್ಷೆ ಒದಗಿಸಿದ್ದಾರೆ. ಎಲ್ಲೆಲ್ಲಿ ಕೆರೆ ಒತ್ತುವರಿಯಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕೆರೆಗೆ ಬೇಲಿ ಹಾಕುವಾಗ ಇದರ ಮೀಸಲು ಪ್ರದೇಶದಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಬೇಕು‘ ಎಂದೂ ಸಮಿತಿ ಒತ್ತಾಯಿಸಿದೆ.

‘ಕೆರೆಗೆ ಸಂಬಂಧಿಸಿದ ರಾಜಕಾಲುವೆಯೂ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿದುಬಂದು ಕೆರೆ ಒಡಲು ಸೇರುವುದಕ್ಕೆ ಬಿಬಿಎಂಪಿ ವ್ಯವಸ್ಥೆ ಮಾಡಬೇಕು. ಕೆರೆಯ ಸುರಕ್ಷತೆ ದೃಷ್ಟಿಯಿಂದ ಈ ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಾಮಗಾರಿ ವೇಳೆ ಕೆರೆಗೆ ಯಾವುದೇ ಹಾನಿ ಆಗದಂತೆ ಎಚ್ಚರ ವಹಿಸಬೇಕು. ಕೊಳಚೆನೀರು ಸೇರದಂತೆ ತಡೆಯಲು ಕ್ರಮಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆ’ ಎಂದು ರೆಡ್ಡಿ ಹೇಳಿದರು.

‘20 ವರ್ಷಗಳಿಂದ ಇಲ್ಲಿ ಹಸಿರು ಬೆಳೆಸಿದ್ದೇವೆ. ಕಾಮಗಾರಿಗಾಗಿ ಗುತ್ತಿಗೆದಾರರು ಕೆಲವು ಮರಗಳನ್ನು ಕಡಿದಿದ್ದಾರೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಸ್ಥಳೀಯರ ಗಮನಕ್ಕೆ ತರುವಂತೆ ಕೋರಿದ್ದೇವೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಒಪ್ಪಿದ್ದಾರೆ’ ಎಂದರು.

ಆಗಬೇಕಾದ ಮಾರ್ಪಾಡುಗಳೇನು?

* ಕೆರೆಯ ಹೂಳ ಎತ್ತುವಾಗ ಇಳಿಜಾರನ್ನು ಕಾಯ್ದುಕೊಳ್ಳಬೇಕು. ಕೆರೆಯ ಮುಖ್ಯ ದಂಡೆಯ ಕಡೆ ಕನಿಷ್ಠ ಪಕ್ಷ 10 ಅಡಿಗಳಷ್ಟು ಆಳ ಇರುವಂತೆ ನೋಡಿಕೊಳ್ಳಬೇಕು. ನ್ಯಾ.ಎನ್‌.ಕೆ.ಪಾಟೀಲ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿಯೇ ಹೂಳೆತ್ತಬೇಕು.

* ಹೂಳನ್ನು ಕನಿಷ್ಠ 25 ಕಿ.ಮೀ ದೂರದಲ್ಲಿ ವಿಲೇವಾರಿ ಮಾಡಬೇಕು. ಅದನ್ನು ದಂಡೆಯನ್ನು ಎತ್ತರಿಸುವುದಕ್ಕೆ ಬಳಸಬಾರದು.

* ಕಡಿಮೆ ಆಳದ ಪ್ರದೇಶದಲ್ಲೇ ಹೆಚ್ಚಿನ ಜೀವವೈವಿಧ್ಯಗಳು ಕಂಡುಬರುವುದರಿಂದ ಈ ಪ್ರದೇಶಗಳ ಆಳವು ಬೇರೆ ಬೇರೆ ಪ್ರಮಾಣದಲ್ಲಿರಬೇಕು.

* ಮುಖ್ಯ ದಂಡೆಯ/ ನಡಿಗೆಪಥದ ಎತ್ತರವನ್ನು ಈಗಿರುವುದಕ್ಕಿಂತ ಹೆಚ್ಚು ಮಾಡಬಾರದು.

* ಹೊಸ ದ್ವೀಪಗಳನ್ನು ನಿರ್ಮಿಸಬಾರದು. ಈಗಿರುವ ದ್ವೀಪದ ಎತ್ತರ ಹೆಚ್ಚಿಸಬಾರದು (ಈ ಬಗ್ಗೆ ಹೈಕೋರ್ಟ್‌ ಸೂಚನೆಯೂ ಇದೆ).

* ಕನಿಷ್ಠ ಪಕ್ಷ ನಿತ್ಯ 10 ಲಕ್ಷ ಲೀಟರ್‌ ನೀರನ್ನು ಸ್ವಚ್ಛಗೊಳಿಸುವ ತ್ಯಾಜ್ಯನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪಿಸಬೇಕು. ಈ ಕೆರೆಗೆ ಬೇಸಿಗೆಯಲ್ಲಿ ಶುದ್ಧೀಕರಿಸದ ಕೊಳಚೆ ನೀರು ಸೇರದಂತೆ ತಡೆಯಲು ಇದು ಅನಿವಾರ್ಯ.

‘ಯೋಗ ವೇದಿಕೆ ಕೈಬಿಡಿ– ಹಸಿರು ಬೆಳೆಸಿ’

ಕೆರೆಯ ಪರಿಸರದಲ್ಲಿ ₹ 45 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯೋಗ ವೇದಿಕೆಯನ್ನು ಕೈಬಿಟ್ಟು, ಅಲ್ಲಿ ದೇಸಿ ಸಸ್ಯಗಳನ್ನು ಬೆಳೆಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಕೆರೆ ಪರಿಸರದಲ್ಲಿರುವ ಲಂಟಾನ, ಯುಪಟೋರಿಯಂ, ಪಾರ್ಥೇನಿಯಂ ಮುಂತಾದ ಆಕ್ರಮಣಕಾರಿ ಸಸ್ಯಗಳನ್ನು ಸಂಪೂರ್ಣ ತೆರವುಗೊಳಿಸಬೇಕು. ಯಾವುದೇ ಮರವನ್ನು ಕಡಿಯಬಾರದು. ಪೊದೆಗಿಡಗಳನ್ನು ಮಾತ್ರ ತೆರವುಗೊಳಿಸಬೇಕು. ಈ ಕೆರೆಯ ದ್ವೀಪದಲ್ಲಿ ಪಕ್ಷಗಳು ಹೇರಳವಾಗಿ ಕಂಡುಬರುವುದರಿಂದ ಅಲ್ಲಿನ ಪೊದೆ ಅಥವಾ ಮರಗಳನ್ನು ತೆರವುಗೊಳಿಸಬಾರದು ಎಂದು ಸಮಿತಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT