ಬುಧವಾರ, ಏಪ್ರಿಲ್ 8, 2020
19 °C
ಸೋಲದೇವನಹಳ್ಳಿಯ ಅಜ್ಜೇಗೌಡಪಾಳ್ಯದಲ್ಲಿ ದುರ್ಘಟನೆ * 10ಕ್ಕೂ ಹೆಚ್ಚು ನಾಯಿಗಳ ದಾಳಿ

ಬೀದಿ ನಾಯಿಗಳಿಗೆ ಬಾಲಕ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಮತ್ತೆ ವಿಪರೀತವಾಗಿದ್ದು, ಅವುಗಳ ಅಟ್ಟಹಾಸಕ್ಕೆ ಸೋಲದೇವನಹಳ್ಳಿ ಸಮೀಪದ ಅಜ್ಜೇಗೌಡನಪಾಳ್ಯದಲ್ಲಿ ಮಂಗಳವಾರ ಮಧ್ಯಾಹ್ನ ಬಾಲಕನೊಬ್ಬ ಬಲಿಯಾಗಿದ್ದಾನೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ತಂದೆಯನ್ನು ನೋಡಲು ಮನೆಯಿಂದ ಹೊರಟಿದ್ದ ದುರ್ಗೇಶ್ (5) ಎಂಬಾತನ ಮೇಲೆ ಹತ್ತಕ್ಕೂ ಹೆಚ್ಚು ನಾಯಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದು, ತೀವ್ರ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

‘ರಸ್ತೆಯಲ್ಲೇ ಬಿದ್ದು ನರಳಾಡಿ ಬಾಲಕ ಸಾಯುವವರೆಗೂ ನಾಯಿಗಳು ಕಚ್ಚಿವೆ. ಬಾಲಕನ ತಲೆ, ಮುಖ, ಕೈ–ಕಾಲುಗಳು, ಹೊಟ್ಟೆ ಸೇರಿದಂತೆ ದೇಹದ ಎಲ್ಲ ಭಾಗಗಳಲ್ಲೂ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ದುಡಿಯಲು ಬಂದಿದ್ದ ದಂಪತಿ: ‘ ದುರ್ಗೇಶ್‌ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಲ್ಲಪ್ಪ ಹಾಗೂ ಮಲ್ಲಮ್ಮ ಅವರ ಪುತ್ರ . ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ದಂಪತಿ  ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ದಂಪತಿಗೆ ಐವರು ಮಕ್ಕಳಿದ್ದು, ಅದರಲ್ಲಿ ದುರ್ಗೇಶ್ ನಾಲ್ಕನೆಯವನು. ಈ ಕುಟುಂಬವು ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜೇಗೌಡನಪಾಳ್ಯದ ಹೊರ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ದಂಪತಿ ನಿತ್ಯವೂ ಬೆಳಿಗ್ಗೆ ಕೆಲಸಕ್ಕೆ ಹೋಗಿ ರಾತ್ರಿ ವಾಪಸ್ ಬರುತ್ತಿದ್ದರು. ಕೆಲವೊಮ್ಮೆ ಮಕ್ಕಳನ್ನೂ ತಮ್ಮೊಂದಿಗೆ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು’ ಎಂದರು.

ತಂದೆ ಕಡೆಗೆ ಹೊರಟಿದ್ದಾಗಲೇ ಸಾವು: ‘ಅಜ್ಜೇಗೌಡನಪಾಳ್ಯದಲ್ಲೇ ಕಟ್ಟಡವೊಂದನ್ನು ನಿರ್ಮಿಸಲಾಗುತ್ತಿದ್ದು, ಅಲ್ಲಿಯೇ ಮಲ್ಲಪ್ಪ ಹಾಗೂ ಮಲ್ಲಮ್ಮ ಕೆಲಸ ಮಾಡುತ್ತಿದ್ದರು. ಮನೆಗೆ ಸಮೀಪದಲ್ಲೇ ಇದ್ದ ಕೆಲಸದ ಸ್ಥಳಕ್ಕೆ ಸೋಮವಾರ ಬೆಳಿಗ್ಗೆ ಮಲ್ಲಪ್ಪ ಮಾತ್ರ ಹೋಗಿದ್ದರು. ಮನೆಗೆಲಸದ ನಿಮಿತ್ತ ಮಲ್ಲಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಬೆಳಿಗ್ಗೆ ಮನೆ ಮುಂದೆ ಆಟವಾಡುತ್ತಿದ್ದ ದುರ್ಗೇಶ್, ಮಧ್ಯಾಹ್ನ ತಂದೆಯ ಬಳಿಗೆ ಹೋಗುವುದಾಗಿ ತಾಯಿಗೆ ಹೇಳಿ ಮನೆಯಿಂದ ನಿರ್ಮಾಣ ಹಂತದ ಕಟ್ಟಡದತ್ತ ನಡೆದುಕೊಂಡು ಹೊರಟಿದ್ದ.’

ರಸ್ತೆಯಲ್ಲಿದ್ದ ನಾಯಿಗಳ ಗುಂ‍ಪು ದುರ್ಗೇಶ್‌ನನ್ನು ಕಂಡು ಬೊಗಳಲಾರಂಭಿಸಿತ್ತು. ಹೆದರಿದ ಬಾಲಕ ಓಡಲಾರಂಭಿಸಿದ್ದ. ಅತನನ್ನು ಬೆನ್ನಟ್ಟಿದ್ದ ನಾಯಿಗಳು ಮೈಮೇಲೆ ಎರಗಿ ಕಚ್ಚಿದವು’ ಹೊರವಲಯ ರಸ್ತೆ ಆಗಿದ್ದರಿಂದ, ಜನರ ಓಡಾಟ ಕಡಿಮೆ ಇತ್ತು. ಬಾಲಕನ ಕಿರುಚಾಟ ಕೇಳಿ ಕೆಲ ಸ್ಥಳೀಯರು ರಕ್ಷಣೆಗೆ ಓಡಿ ಬಂದರು. ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದ. 

‘ನಾಯಿ ದಾಳಿಯಲ್ಲಿ ಬಾಲಕ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಜನ ಸ್ಥಳಕ್ಕೆ ಧಾವಿಸಲಾರಂಭಿಸಿದರು. ಅದರಂತೆ ಮಲ್ಲಪ್ಪ ಕೂಡಾ ಬಂದಿದ್ದರು. ಬಾಲಕನನ್ನು ನೋಡುತ್ತಿದ್ದಂತೆ  ಈತ ‘ನನ್ನ ಮಗ’ ಎಂದು ಗೋಳಾಡಲಾರಂಭಿಸಿದ್ದರು. ಮಗನನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಆದರೆ, ಮಗ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳಿದ್ದರಿಂದ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ಸ್ಥಳದಲ್ಲಿ ಸತ್ತಿದ್ದು ಇದೇ ಮೊದಲು: ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸಿದ ಹಲವು ಘಟನೆಗಳು ನಗರದಲ್ಲಿ ನಡೆದಿದ್ದರೂ, ಸ್ಥಳದಲ್ಲೇ ಮೃತಪಟ್ಟ ಮೊದಲ ಘಟನೆ ಇದಾಗಿದೆ. ‘ಈ ಹಿಂದೆಯೂ ನಾಯಿಗಳ ದಾಳಿ ಪ್ರಕರಣಗಳು ನಡೆದಿದ್ದವು. ಗಾಯಗೊಂಡಿದ್ದ ಕೆಲವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

‘ಘಟನೆ ಸಂಬಂಧ ಬಾಲಕನ ಪೋಷಕರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಲಾಗುವುದು’ ಎಂದರು.

ಬೀದಿನಾಯಿ ಕಡಿತ ಪ್ರಕರಣಗಳು

* 2018ರ ಸೆಪ್ಟೆಂಬರ್‌: ಎಚ್‌ಎಎಲ್‌ ಸಮೀಪದ ವಿಭೂತಿಪುರ ಬಳಿ ಶಾಲೆ ಮುಗಿಸಿ ಮನೆಗೆ ಹೊರಟಿದ್ದ ಪ್ರವೀಣ್ ಎಂಬ ಬಾಲಕನ ಮೇಲೆ ಹತ್ತಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ ಮಾಡಿದ್ದವು. ತೀವ್ರ ಗಾಯಗೊಂಡ ಆತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದ.

* ಪದ್ಮನಾಭನಗರದ ಕನಕ ಬಡಾವಣೆ ಬಳಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಮಹಾದೇವಿ, ಕೋಟೇಶ್ವರಿ ಮತ್ತು ತನ್ಮಯ ಗೌಡ ಎಂಬ ಮೂವರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದರು. 

* ರಾಜಾಜಿನಗರ 6ನೇ ಹಂತದ ಗುಬ್ಬಣ್ಣ ಬಡಾವಣೆಯಲ್ಲಿ ಶಾಲಾ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಆಕಾಶ್ ಮತ್ತು ಸಾಯಿಸಿರಿ ಎಂಬ ಮಕ್ಕಳು ಹಾಗೂ ಅವರನ್ನು ರಕ್ಷಿಸಲು ಹೋಗಿದ್ದ ಪೋಷಕರಿಗೂ ನಾಯಿಗಳು ಕಚ್ಚಿದ್ದವು. 

* ಹೊಸಕೋಟೆಯ ಗೌತಮ್ ಕಾಲೊನಿಯಲ್ಲಿ ಮಾನಸ ಎಂಬ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ, ತಿಂಡಿ ತರಲು ಅಂಗಡಿಗೆ ಹೊರಟಿದ್ದ ವೇಳೆಯಲ್ಲೇ ನಾಯಿಗಳು ದಾಳಿ ಮಾಡಿದ್ದವು.

‘ಬೆಳಿಗ್ಗೆ ನನ್ನ ಬಳಿ ಬಂದು ಹೋಗಿದ್ದ ಮಗ’

‘ಬೆಳಿಗ್ಗೆಯೇ ಕೆಲಸಕ್ಕೆ ಬಂದಿದ್ದೆ. 8.30ರ ಸುಮಾರಿಗೆ ನನ್ನ ಬಳಿ ಬಂದಿದ್ದ ಮಗ ದುರ್ಗೇಶ್, ಚಾಕೊಲೇಟ್‌  ತೆಗೆದುಕೊಳ್ಳಲು ಹಣ ಕೇಳಿದ್ದ. ₹ 2 ಕೊಟ್ಟು, ಒಂದು ಬೆಂಕಿ ಪೊಟ್ಟಣ ಹಾಗೂ ಚಾಕೊಲೇಟ್‌ ತೆಗೆದುಕೊಂಡು ಬರುವಂತೆ ಹೇಳಿದ್ದೆ’ ಎಂದು ಮಲ್ಲಪ್ಪ ಮಗನ ನೆನೆದು ಕಣ್ಣೀರಿಟ್ಟರು.

‘ಬೆಂಕಿ ಪೊಟ್ಟಣ ಕೊಟ್ಟು ಚಾಕೊಲೇಟ್ ತಿನ್ನುತ್ತ ಮಗ ವಾಪಸ್ ಮನೆಗೆ ಹೋಗಿದ್ದ. ಮಧ್ಯಾಹ್ನ ಇಬ್ಬರು ಮಹಿಳೆಯರು, ‘ನಾಯಿಗಳು ಕಚ್ಚಿ ಯಾರದ್ದೂ ಮಗು ಸತ್ತಿದೆ’ ಎಂದು ಮಾತನಾಡುತ್ತಿದ್ದರು. ಅದನ್ನು ಕೇಳಿ ಸ್ಥಳಕ್ಕೆ ಹೋದಾಗಲೇ ನನ್ನ ಮಗ ಸತ್ತಿರುವುದು ಗೊತ್ತಾಯಿತು’ ಎಂದು ದುಃಖತಪ್ತರಾದರು. 

‘ಮೈ ಮೇಲೆ ಬಟ್ಟೆಯೇ ಇರಲಿಲ್ಲ. ದೇಹದಲ್ಲೆಲ್ಲ ರಕ್ತ ಸೋರುತ್ತಿತ್ತು. ದೇವರಿಗೆ ಮುಡಿ ಕೊಡಲೆಂದು ಮಗನ ಕೂದಲನ್ನು ಕತ್ತರಿಸಿರಲಿಲ್ಲ. ತಲೆಯನ್ನೂ ನಾಯಿಗಳು ಕಚ್ಚಿವೆ’ ಎಂದು ಕಣ್ಣೀರಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು