ಶನಿವಾರ, ಜೂನ್ 25, 2022
24 °C
ಪತ್ನಿಗೆ ಕಿರುಕುಳ ಆರೋಪ: ಮುಳಗುಂದ ಠಾಣೆಗೆ ಪ್ರಕರಣ ವರ್ಗ

ರಾಘವೇಂದ್ರ ಚನ್ನಣ್ಣನವರ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವರದಕ್ಷಿಣೆ ತರುವಂತೆ ಪೀಡಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಆರೋಪದಡಿ ರಾಘವೇಂದ್ರ ಚನ್ನಣ್ಣನವರ ಹಾಗೂ ಇತರರ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

‘ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ನಿವಾಸಿ ರೋಜಾ (26) ಇತ್ತೀಚೆಗೆ ದೂರು ನೀಡಿದ್ದಾರೆ. ಆರೋಪಿಗಳಾದ ರಾಘವೇಂದ್ರ ಚನ್ನಣ್ಣನವರ ಹಾಗೂ ಅವರ ಸಂಬಂಧಿ ಹನುಮಂತ ತಿಮ್ಮಾಪುರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

'ವರದಕ್ಷಿಣೆ ಕಿರುಕುಳ (ಐಪಿಸಿ 498ಎ) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಗದಗ ಜಿಲ್ಲೆಯ ಮುಳಗುಂದ ಠಾಣೆಗೆ ವರ್ಗಾಯಿಸಲಾಗಿದ್ದು, ಅಲ್ಲಿಯ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ’ ಎಂದೂ ಹೇಳಿದರು.

ದೂರಿನ ವಿವರ: ‘ರವಿ ಚನ್ನಣ್ಣನವರ ಅವರು 2015ರಲ್ಲಿ ಶಿವಮೊಗ್ಗ ಜಿಲ್ಲೆ ಎಸ್ಪಿ ಆಗಿದ್ದರು. ಅದೇ ವೇಳೆ ನನ್ನ ತಂದೆಗೆ ಪರಿಚಯವಾಗಿದ್ದರು. ತಮ್ಮನಿಗೆ ಹುಡುಗಿ ಹುಡುಕುತ್ತಿರುವುದಾಗಿ ಹೇಳಿದ್ದರು. ಅದನ್ನು ತಿಳಿದ ತಂದೆ, ತನ್ನನ್ನೇ ತೋರಿಸಿದ್ದರು. ಎರಡೂ ಕುಟುಂಬಕ್ಕೆ ಒಪ್ಪಿಗೆ ಆಗಿ, 2016ರ ಆಗಸ್ಟ್ 27ರಂದು ಶಿವಮೊಗ್ಗದ ಎ.ಎ.ಎಸ್ ಸಮುದಾಯ ಭವನದಲ್ಲಿ ಮದುವೆಯಾಯಿತು. ಸಾಕಷ್ಟು ವರದಕ್ಷಿಣೆಯನ್ನೂ ನೀಡಲಾಯಿತು’ ಎಂದು ದೂರಿನಲ್ಲಿ ರೋಜಾ ತಿಳಿಸಿದ್ದಾರೆ.

‘ಮದುವೆ ಬಳಿಕ ಗದಗ ಜಿಲ್ಲೆಯ ನೀಲಗುಂದದಲ್ಲಿರುವ ಪತಿ ರಾಘವೇಂದ್ರ ಮನೆಯಲ್ಲಿ ವಾಸವಿದ್ದೆ. ಆದರೆ, ಪತಿ ಬೇರೊಬ್ಬರ ಯುವತಿ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಗಲಾಟೆ ಆಯಿತು. ಅಂದಿನಿಂದ ಪತಿ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾರಂಭಿಸಿದರು. ತವರು ಮನೆಗೆ ಹೋಗಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಈ ಸಂಗತಿಯನ್ನು ರವಿ ಚನ್ನಣ್ಣನವರಿಗೂ ತಿಳಿಸಿದೆ. ಅವರೂ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದರು. ಇದರ ನಡುವೆಯೇ ಹನುಮಂತ ತಿಮ್ಮಾಪುರ ನನಗೆ ಜೀವ ಬೆದರಿಕೆ ಹಾಕಿದ್ದಾರೆ’ ಎಂದೂ ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು