ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾರದೊಳಗೆ ಹೊಸ ಜಾಹೀರಾತು ನೀತಿ ಕರಡು: ಡಿ.ಕೆ.ಶಿವಕುಮಾರ್

15 ದಿನ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ: ಡಿಸಿಎಂ ಡಿ.ಕೆ.ಶಿವಕುಮಾರ್
Published 21 ಜೂನ್ 2024, 15:56 IST
Last Updated 21 ಜೂನ್ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ವಾರದೊಳಗೆ ಜಾಹೀರಾತು ನೀತಿಯ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರಡು ಪ್ರತಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗುವುದು. ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಜಾಹೀರಾತು ನೀತಿ ಬಾಕಿ ಉಳಿದಿತ್ತು. ಪ್ರಸ್ತುತ ಸಂಘ, ಸಂಸ್ಥೆಗಳ ಜೊತೆ ಚರ್ಚೆ ನಡೆಸಲಾಗಿದೆ’ ಎಂದರು.

60 ಅಡಿಗಿಂತ ಹೆಚ್ಚಿನ ಅಗಲದ ರಸ್ತೆಗಳಲ್ಲಿ ‘ಗ್ರೂಪ್ ಪ್ಯಾಕೇಜ್’ ತಯಾರಿಸಿ ಅವಕಾಶ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತು ಹಾಕಬಹುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದು ಎಂದು ಹೇಳಿದರು.

ಕಟ್ಟಡಗಳ ವಿಸ್ತೀರ್ಣ, ಎತ್ತರಕ್ಕೆ ತಕ್ಕಂತೆ ಜಾಹೀರಾತು ಅಳತೆಯನ್ನು ನಿಗದಿ ಮಾಡಲಾಗುತ್ತದೆ. ಫಲಕಗಳಿಗೆ ಗುಣಮಟ್ಟದ ಯಾವ ವಸ್ತು ಬಳಸಬೇಕು ಎಂದು ತಿಳಿಸಲಾಗುವುದು. ಸರ್ಕಾರದಲ್ಲಿರುವ ಮೀಸಲಾತಿಗೆ ಅನುಗುಣವಾಗಿ ಅವಕಾಶ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಹಿಂದಿನ ಸರ್ಕಾರ ಒಂದಷ್ಟು ಅವಕಾಶ ನೀಡಿದ್ದು ಕಾನೂನು ಪ್ರಕಾರವಾಗಿ ಇದ್ದರೆ ರಕ್ಷಣೆ ಮಾಡಲಾಗುವುದು ಎಂದರು.

‘ನಾವು ಹೇಗೆ ಚುನಾವಣೆಗೆ ನಿಲ್ಲುವಾಗ ಯಾವುದೇ ಬಾಕಿಗಳನ್ನು ಉಳಿಸಿಕೊಳ್ಳುವುದಿಲ್ಲವೋ ಅದೇ ರೀತಿ, ಜಾಹೀರಾತು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸರ್ಕಾರಕ್ಕೆ ಯಾವುದೇ ರೀತಿಯ ಬಾಕಿ ಉಳಿಸಿಕೊಂಡಿರಬಾರದು’ ಎಂದು ಹೇಳಿದರು.

‘ನಮ್ಮ ಮೊಟ್ರೊ ಒಳಭಾಗದಲ್ಲಿನ ಜಾಹೀರಾತಿನ ಬಗ್ಗೆ ಬಿಎಂಆರ್‌ಸಿಎಲ್‌ ನೋಡಿಕೊಳ್ಳುತ್ತದೆ. ಹೊರಭಾಗದಲ್ಲಿ ಪಾಲಿಕೆ ಮತ್ತು ಮೆಟ್ರೊ ಸಹಭಾಗಿತ್ವದಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT