ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಮತ್ತನಾಗಿ ಅಡ್ಡಾದಿಡ್ಡಿ ಚಾಲನೆ; ಉದ್ಯಮಿ ಮಗ ವಶಕ್ಕೆ

ಪತ್ನಿ ಜೊತೆ ಜಾಲಿರೈಡ್ ಹೊರಟಿದ್ದ ಜವೇರ್ ಮೇವಾನಿ
Last Updated 26 ಸೆಪ್ಟೆಂಬರ್ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತನಾಗಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಅಪಘಾತವನ್ನುಂಟು ಮಾಡಿದ್ದ ಆರೋಪದಡಿ ಜವೇರ್ ಮೇವಾನಿ ಎಂಬಾತನನ್ನು ಹಲಸೂರು ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

‘ದೊಮ್ಮಲೂರು ರಸ್ತೆಯಲ್ಲಿ ಶನಿವಾರ ರಾತ್ರಿ ಅಪಘಾತವಾಗಿದೆ. ಪಾನಮತ್ತ ಚಾಲನೆ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದ ಆರೋಪದಡಿ ಜವೇರ್‌ನನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪತ್ನಿ ಜೊತೆ ಜಾಲಿರೈಡ್: ‘ಉದ್ಯಮಿ ಕರೀಮ್ ಮೇವಾನಿ ಅವರ ಮಗ ಜವೇರ್, ಇಂದಿರಾನಗರದ ಪಬ್‌ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ. ಪಾರ್ಟಿ ಮುಗಿದ ನಂತರ ಐಷಾರಾಮಿ ಕಾರಿನಲ್ಲಿ ಪತ್ನಿ ಶ್ರೇಯಾ ಹಾಗೂ ಇಬ್ಬರು ಸ್ನೇಹಿತರ ಜೊತೆ ಜಾಲಿರೈಡ್‌ಗೆ ಹೊರಟಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಾನಮತ್ತನಾಗಿದ್ದ ಜವೇರ್, ಗಂಟೆಗೆ 100 ಕಿ.ಮೀ.ನಿಂದ 120 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ. ದೊಮ್ಮಲೂರು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಕಾರು ಗುದ್ದಿಸಿದ್ದ. ನಂತರ, ರಸ್ತೆಯಲ್ಲಿ ಹೊರಟಿದ್ದ ಕ್ಯಾಬ್‌ಗೂ ಕಾರು ಡಿಕ್ಕಿ ಹೊಡೆಸಿದ್ದ. ಇದರಿಂದ ಕ್ಯಾಬ್ ಜಖಂಗೊಂಡಿತು. ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದೂ ತಿಳಿಸಿವೆ.

ರಂಪಾಟ ಮಾಡಿದ್ದ ಆರೋಪಿ: ‘ಅಪಘಾತವನ್ನುಂಟು ಮಾಡಿದ್ದ ಜವೇರ್ ಸ್ನೇಹಿತರ ಜೊತೆ ಸೇರಿ, ಅಪಘಾತ ಪ್ರಶ್ನಿಸಿದವರ ವಿರುದ್ಧವೇ ತಿರುಗಿ ಬಿದ್ದಿದ್ದ. ತಾನು ಕುಡಿದಿಲ್ಲವೆಂದು ವಾದಿಸಿ ರಂಪಾಟ ಮಾಡಿದ್ದ. ಅಪಘಾತದ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋದ ಸಿಬ್ಬಂದಿ, ಜವೇರ್‌ನನ್ನು ವಶಕ್ಕೆ ಪಡೆದಿದ್ದರು’ ಎಂದೂ ಮೂಲಗಳು ಹೇಳಿವೆ.

‘ಜವೇರ್‌ನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಮದ್ಯ ಕುಡಿದಿದ್ದು ವರದಿಯಿಂದ ದೃಢಪಟ್ಟಿದೆ. ಹೀಗಾಗಿ, ಆವರನ್ನು ವಶಕ್ಕೆ ಪಡೆಯಲಾಗಿದೆ. ಪುರಾವೆಗಳು ಸಂಗ್ರಹಿಸಿ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

‘ಆರೋಪಿ ಜವೇರ್ ಕಾರೂ ಜಖಂಗೊಂಡಿದೆ. ಅಪಘಾತದ ಸ್ಥಳದಲ್ಲಿದ್ದ ಜವೇರ್‌ ಸ್ನೇಹಿತರು ಹಾಗೂ ಗಾಯಾಳುಗಳಿಂದ ಹೇಳಿಕೆ ಪಡೆಯಲಾಗಿದೆ. ಆರೋಪಿ ಚಲಾಯಿಸುತ್ತಿದ್ದ ವಾಹನದ ಕೆಲ ದಾಖಲೆಗಳು ನವೀಕರಣ ಆಗಿಲ್ಲ. ಆ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದೂ ಹೇಳಿವೆ.

‘ಜಾಲಿ ರೈಡ್ ಮೇಲೆ ನಿಗಾ’

‘ಪಾನಮತ್ತರಾಗಿ ಕಾರು ಚಲಾಯಿಸುವರು ಹಾಗೂ ಜಾಲಿರೈಡ್ ಮೋಜಿನಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಇಂಥವರ ಮೇಲೆ ನಿಗಾ ವಹಿಸಲಾಗಿದೆ. ಸಿಕ್ಕಿಬಿದ್ದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಣ್ಯರು ಹಾಗೂ ಉದ್ಯಮಿಗಳ ಮಕ್ಕಳು ಐಷಾರಾಮಿ ಕಾರುಗಳಲ್ಲಿ ಜಾಲಿರೈಡ್ ಮಾಡುತ್ತಿರುವುದು ಗೊತ್ತಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT