ಗುರುವಾರ , ಜನವರಿ 21, 2021
16 °C
ನಾಗರಿಕರಲ್ಲಿ ಜಾಗೃತಿ ಮೂಡಿಸಿದ ರೇವಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು l ಬೀದಿ ನಾಟಕ ಪ್ರದರ್ಶನ l ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್ ಸಹಯೋಗ

ಪಾನಮತ್ತ ಚಾಲನೆ: ಬೀದಿಗಿಳಿದ ಯುವಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಓದು ಮುಗಿಸಿ, ಒಳ್ಳೆಯ ಕೆಲಸ ಪಡೆದು ಕುಟುಂಬಕ್ಕೆ ಆಸರೆಯಾಗಬೇಕಾದ ಮಗ ಅಪಘಾತದಲ್ಲಿ ಮೃತಪಟ್ಟರೆ ಆ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ? ಅಮೆರಿಕಕ್ಕೆ ಕರೆದೊಯ್ಯಬೇಕಾಗಿದ್ದ ಪುತ್ರ ಒಂದು ದಿನದ ಸಂತಸಕ್ಕೆ ಪ್ರಾಣವನ್ನೇ ಕಳೆದುಕೊಂಡಾಗ ಹೆತ್ತವರ ಕಣ್ಣೀರು ಒರೆಸುವವರಾರು? ಸಂಭ್ರಮದಲ್ಲಿ ಸಂಭವಿಸಿದ ಅಪಘಾತದಿಂದ ಸಾವಿಗೀಡಾದರೆ ಸಂಗಾತಿಯ ಗತಿಯೇನು ?

ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ಆಗುವ ಅವಘಡಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರೇವಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಬೀದಿ ನಾಟಕ ಪ್ರದರ್ಶಿಸಿದರು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ವಿಶ್ವವಿದ್ಯಾಲಯವು ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಪಾನಮತ್ತರಾಗಿ ವಾಹನ ಚಲಾಯಿಸಬೇಡಿ, ಮದ್ಯಪಾನ–ಮೃತ್ಯುವಿಗೆ ಆಹ್ವಾನ, ವಾಹನ ಚಲಾಯಿಸುವ ವೇಳೆ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ.. ಸೀಟ್‌ ಬೆಲ್ಟ್‌ ಧರಿಸುವುದನ್ನು ಮರೆಯಬೇಡಿ.. ಎಂಬ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲಿ ಸಾಗಿದ ವಿದ್ಯಾರ್ಥಿಗಳು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಿದರು. ಇಂಗ್ಲಿಷ್‌, ಹಿಂದಿಯಲ್ಲಿಯೂ ಘೋಷಣೆ ಕೂಗಿ, ಎಲ್ಲ ಭಾಷಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. 

ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಯುವಸಮೂಹ ಇದ್ದು, ಪ್ರಮುಖವಾಗಿ ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಅಭಿಯಾನವನ್ನು ಕಾಲೇಜು ವಿದ್ಯಾರ್ಥಿಗಳು ಕೈಗೊಂಡಿದ್ದರು. ಈ ರೀತಿ ಮದ್ಯ ಸೇವಿಸಿ ಅಪಘಾತಕ್ಕೀಡಾಗುವ ಪ್ರಕರಣಗಳು ಈ ಸಂದರ್ಭದಲ್ಲಿಯೇ ಹೆಚ್ಚಾಗಿರುವುದರಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. 

ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿದರು. ಈ ಪ್ರದೇಶಗಳಲ್ಲಿನ ಪಬ್‌ ಮತ್ತು ಬಾರ್‌ಗಳು ಹೊಸ ವರ್ಷಾಚರಣೆಗೆ ಸೂಕ್ತ ತಾಣಗಳು ಎಂಬ ಭಾವನೆ ಜನರಲ್ಲಿ ಪ್ರಚಲಿತದಲ್ಲಿರುವುದರಿಂದ, ಈ ಪಬ್‌ ಮತ್ತು ಬಾರ್‌ಗಳ ಸುತ್ತ–ಮುತ್ತ ಜಾಥಾ ನಡೆಸಲಾಯಿತು.

ಪಾನಮತ್ತ ಚಾಲಕನೊಬ್ಬ ನಗರದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ, ಹೋಟೆಲ್‌ಗೆ ನುಗ್ಗಿಸಿದ್ದಲ್ಲದೆ, ಫುಟ್‌ಪಾತ್‌ ಮೇಲೆ ಹೊರಟಿದ್ದ ಏಳು ಮಂದಿಗೆ ಗಾಯ ಮಾಡಿದ್ದ ಘಟನೆ ಮತ್ತು ಪ್ರತಿಷ್ಠಿತ ಆಸ್ಪತ್ರೆಯ ತಜ್ಞವೈದ್ಯನೇ ಬಾಲಕನ ಸಾವಿಗೆ ಕಾರಣವಾದ ಘಟನೆಗಳನ್ನು ಉಲ್ಲೇಖಿಸಿ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಈ ಕುರಿತು ಜಾಗೃತಿ ಮೂಡಿಸುವಂತಹ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. 

‘ನಗರದ ಹಲವು ರಸ್ತೆಗಳು ಹದಗೆಟ್ಟಿವೆ. ಇಂತಹ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಸಂದರ್ಭಗಳಲ್ಲಿ ಈ ಅಪಘಾತಗಳ ಪ್ರಮಾಣ ಇನ್ನೂ ಹೆಚ್ಚಾಗಲಿದೆ’ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟ ವಿದ್ಯಾರ್ಥಿಗಳು, ಬೈಕ್‌ಗಳನ್ನು ಓಡಿಸುವಾಗ ಹೆಲ್ಮೆಟ್‌ ಧರಿಸುವಂತೆ, ಕಾರು ಚಲಾಯಿಸುವಾಗ ಸೀಟ್‌ ಬೆಲ್ಟ್‌ ಹಾಕಿಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ, ವಾಹನ ಚಲಾಯಿಸುವಾಗ ಮೊಬೈಲ್‌ ಫೋನ್‌ ಬಳಸದಂತೆಯೂ ವಿನಂತಿಸಿಕೊಂಡರು. 

ರೇವಾ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ್ ಜಾಥಾದ ನೇತೃತ್ವ ವಹಿಸಿದ್ದರು. ‘ಪಾನಮತ್ತ ಚಾಲನೆಯಿಂದ ಆಗುವ ಅಪಘಾತಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದರು.

ಸಂಚಾರ ಪೊಲೀಸರ ಸಹಕಾರ: ವಿದ್ಯಾರ್ಥಿಗಳು ಈ ಕುರಿತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗುತ್ತಿದ್ದಂತೆ, ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಸಹಕಾರ ನೀಡಿದರು. ರಸ್ತೆ ಬದಿಯಲ್ಲಿ ಘೋಷಣೆಗಳನ್ನು ಕೂಗಲು, ಭಿತ್ತಿಪತ್ರ ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದರು. ವಾಹನ ಸವಾರರು ಮತ್ತು ಚಾಲಕರ ಬಳಿಗೇ ತೆರಳಿ ಅರಿವು ಮೂಡಿಸುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 

‘ಸುರಕ್ಷಿತ ಹೊಸ ವರ್ಷಾಚರಣೆಯೇ ಉದ್ದೇಶ’
‘ಪ್ರಾಣರಕ್ಷಣೆ ಎಲ್ಲಕ್ಕಿಂತ ಮಹತ್ವವಾದ ಕೆಲಸ. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಬೇಕು ನಿಜ. ಆದರೆ, ಅದು ಜೀವಕ್ಕೇ ಎರವಾಗುವಂತಿರಬಾರದು. ಮದ್ಯಪಾನ ಮಾಡಿದವರು ಸ್ವತಃ ವಾಹನ ಚಲಾಯಿಸದೆ ಬೇರೆಯವರ ಸಹಾಯ ಪಡೆಯಬಹುದು ಅಥವಾ ಬಾಡಿಗೆ ಆಟೊ, ಟ್ಯಾಕ್ಸಿಯಲ್ಲಿ ಮನೆಗೆ ಹೋಗಬೇಕು. 2020ರ ಹೊಸ ವರ್ಷಾಚರಣೆ ಸುರಕ್ಷಿತವಾಗಿರಲಿ, ಸಾವು ಸಂಭವಿಸದಿರಲಿ ಎಂಬ ಸದುದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು’ ಎಂದು ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಶ್ಯಾಮರಾಜು ಹೇಳಿದರು.

ಮೂರು ಸಾವಿರ ಡಿಎಲ್ ರದ್ದು
ಮದ್ಯ ಕುಡಿದು ವಾಹನ ಚಲಾಯಿಸಿದ ಮೂರು ಸಾವಿರಕ್ಕೂ ಹೆಚ್ಚು ವಾಹನ ಸವಾರರ ಪರವಾನಗಿಗಳನ್ನು ಈ ವರ್ಷ ರದ್ದು ಮಾಡಲಾಗಿದೆ. ರಾಜ್ಯಕ್ಕೆ ಹೋಲಿಸಿದರೆ, ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ನಗರದಲ್ಲಿ ಹೆಚ್ಚು ದಾಖಲಾಗುತ್ತಿವೆ. ಡಿ.31ರ ಒಂದೇ ರಾತ್ರಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುವುದು ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮದ್ಯಪಾನಕ್ಕೇ ಹೆಚ್ಚು ಒತ್ತು ಕೊಟ್ಟಿರುವುದಕ್ಕೆ ಸಾಕ್ಷಿ.

2018 ಡಿ.31ರ ಒಂದೇ ರಾತ್ರಿಯಲ್ಲಿ 1,390 ಇಂತಹ ಪ್ರಕರಣಗಳು ದಾಖಲಾಗಿವೆ. ಅದರ ಹಿಂದಿನ ವರ್ಷ 400 ಪ್ರಕರಣಗಳು ದಾಖಲಾಗಿದ್ದವು. ಹೀಗೆ, ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು