ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು: ಸಾವಿರಾರು ಅಕ್ರಮ ಸಂಪರ್ಕ

ಜಲಮಂಡಳಿ ಸಮೀಕ್ಷೆ ವೇಳೆ ಬಯಲಾಯಿತು ಕಟ್ಟಡ ಮಾಲೀಕರ ಕಪಟ
Last Updated 30 ಡಿಸೆಂಬರ್ 2020, 21:51 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯ ಸೋರಿಕೆ ತಡೆಯಲು ಹಾಗೂ ಒಳಚರಂಡಿ ಜಾಲವನ್ನು ಸದೃಢಗೊಳಿಸಲು ಜಲಮಂಡಳಿಯು ಇತ್ತೀಚೆಗೆ ಸಮೀಕ್ಷೆ ಕೈಗೆತ್ತಿಕೊಂಡಿದ್ದು, ಈ ವೇಳೆ ನಗರದ ಹಲವೆಡೆ ಕುಡಿಯುವ ನೀರಿನ ಹಾಗೂ ಒಳಚರಂಡಿಯ ಸಾವಿರಾರು ಅಕ್ರಮ ಸಂಪರ್ಕಗಳು ಪತ್ತೆಯಾಗಿವೆ.

ಕಾರ್ಯಾಚರಣೆ ವೆಚ್ಚ ಹೆಚ್ಚಳದಿಂದಾಗಿ ಈಗಾಗಲೇ ಭಾರಿ ನಷ್ಟ ಅನುಭವಿಸುತ್ತಿರುವ ಜಲಮಂಡಳಿ ಈ ಸಾವಿರಾರು ಅಕ್ರಮ ಸಂಪರ್ಕಗಳಿಂದ ಮತ್ತಷ್ಟು ಘಾಸಿಗೊಂಡಿದೆ. ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ ನಗದ ಕೇಂದ್ರ ಪ್ರದೇಶಗಳಲ್ಲದೇ ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಗೊಂಡ ಪ್ರದೇಶಗಳಲ್ಲೂ ಅಕ್ರಮ ಸಂಪರ್ಕಗಳಿರುವುದು ಕಂಡುಬಂದಿದೆ. ‘ಪ್ರಜಾವಾಣಿ’ಗೆ ಲಭ್ಯವಾದ ಮಾಹಿತಿ ಪ್ರಕಾರ ಕುಡಿಯುವ ನೀರಿನ22,468 ಅಕ್ರಮ ಸಂಪರ್ಕಗಳು ಹಾಗೂ ಒಳಚರಂಡಿಯ 36,064 ಅಕ್ರಮ ಸಂಪರ್ಕಗಳು ಪತ್ತೆಯಾಗಿವೆ.

ಈ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದ ಜಲಮಂಡಳಿಯ ಹಿರಿಯ ಎಂಜಿನಿಯರ್‌, ‘ದೊಡ್ಡ ಪ್ರಮಾಣದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ಪಿ.ಜಿ, ಹಾಸ್ಟೆಲ್‌ನಂತಹ ವಾಣಿಜ್ಯ ವ್ಯವಹಾರ ನಡೆಸುತ್ತಿರುವ ಕಟ್ಟಡ ಸಮುಚ್ಚಯಗಳು ಸೇರಿದಂತೆ ಅನೇಕ ಕುಟುಂಬಗಳು ಅಕ್ರಮವಾಗಿ ಸಂಪರ್ಕ ಪಡೆದುಕೊಂಡಿವೆ. ಅಧಿಕೃತವಾಗಿ ಸಂಪರ್ಕ ಪಡೆದುಕೊಳ್ಳದೆಯೇ ಅವರ ಕಟ್ಟಡದ ಶೌಚ ನೀರನ್ನು ಜಲಮಂಡಳಿಯ ಒಳಚರಂಡಿ ಕಾಲುವೆಗೆ ಅನೇಕ ವರ್ಷಗಳಿಂದ ಹರಿಸುತ್ತಿವೆ. ಹೊರವಲಯದಲ್ಲಿ ಕೆಲವೆಡೆ ಸ್ಥಳೀಯ ಪ್ಲಂಬರ್‌ಗಳನ್ನು ಕರೆಸಿ ಅಕ್ರಮವಾಗಿ ಸಂಪರ್ಕ ಪಡೆದುಕೊಂಡಿದ್ದಾರೆ. ಜಲಮಂಡಳಿಯ ಜಾಗೃತ ದಳವು ಆಗಾಗ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸುವ ಮೂಲಕವೂ ಈ ಅಕ್ರಮಗಳನ್ನು ಬಯಲಿಗೆಳೆದಿದೆ’ ಎಂದರು.

ಈ ರೀತಿ ಅಕ್ರಮ ಸಂಪರ್ಕ ಪಡೆದಿಕೊಂಡವರಿಗೆ ಭಾರಿ ದಂಡ ವಿಧಿಸುವುದು ವಾಡಿಕೆ. ಆದರೆ, ಜಲಮಂಡಳಿ ಈ ಸಂಪರ್ಕಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಿದೆ. ‘ಇಂತಹ ಅಕ್ರಮ ಸಂಪರ್ಕ ಪತ್ತೆಯಾಗಿ ತಿಂಗಳುಗಳೇ ಕಳೆದಿವೆ. ಈ ಕಟ್ಟಡಗಳ ಮಾಲೀಕರಿಗೆ ಅವುಗಳನ್ನು ಸಕ್ರಮಗೊಳಿಸುವಂತೆ ಅನೇಕ ಸಲ ಸೂಚನೆ ನೀಡಿದ್ದಲ್ಲದೇ ಗಡುವನ್ನೂ ವಿಧಿಸಿದ್ದೆವು. ಗಡುವನ್ನು ಎರಡು ತಿಂಗಳು ವಿಸ್ತರಿಸಿದ ಬಳಿಕವೂ ಬಹಳಷ್ಟು ಕಟ್ಟಡಗಳ ಮಾಲೀಕರು ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಲು ಮುಂದಾಗಿಲ್ಲ’ ಎಂದು ಅವರು ತಿಳಿಸಿದರು.

ಜಲಮಂಡಳಿ ಅಧ್ಯಕ್ಷ ಎನ್‌.ಜಯರಾಮ್‌, ‘ಅಕ್ರಮ ಸಂಪರ್ಕ ಪಡೆದಿರುವ ಮನೆಗಳಿಗೆ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಈಗಾಗಲೇ ಸ್ಥಗಿತಗೊಳಿಸಿದ್ದೇವೆ. ಕೆಲವು ಮಾಲೀಕರು ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸಲು ಮುಂದೆ ಬಂದಿದ್ದಾರೆ. ಕೆಲವರು ಈಗಲೂ ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಮ್ಮ ಎಂಜಿನಿಯರ್‌ಗಳು 2021ರ ಜನವರಿವರೆಗೆ ಕಾಲಾವಕಾಶ ನೀಡಲಿದ್ದಾರೆ. ನಿಯಮಗಳಿಗೆ ಪೂರಕವಾಗಿ ನಡೆದುಕೊಳ್ಳದ ಕಟ್ಟಡ ಮಾಲೀಕರು ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT