ಮಂಗಳವಾರ, ಮಾರ್ಚ್ 21, 2023
28 °C
ರಸ್ತೆ ತೆರಿಗೆ ವಿನಾಯಿತಿಗೆ ಖಾಸಗಿ ವಾಹನ ಚಾಲಕರು, ಮಾಲೀಕರ ಒತ್ತಾಯ

ಬೇಡಿಕೆ ಈಡೇರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ಖಾಸಗಿ ಸಾರಿಗೆ ವಾಹನಗಳಿಗೆ ಡಿಸೆಂಬರ್‌ವರೆಗೆ ರಸ್ತೆ ತೆರಿಗೆ ವಿನಾಯಿತಿ ಹಾಗೂ ಎಲ್ಲ ಚಾಲಕರಿಗೆ ಸಮಾನವಾಗಿ ಪರಿಹಾರಧನ ನೀಡುವ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ, ಇದೇ 25ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ' ಎಂದು ರಾಜ್ಯ ಖಾಸಗಿ ಸಾರಿಗೆ ಮಾಲೀಕರು ಮತ್ತು ಚಾಲಕರ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮ ಎಚ್ಚರಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ವಾಹನಗಳ ಮಾಲೀಕರು ಹಾಗೂ ಚಾಲಕರ 20ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಮೌರ್ಯ ವೃತ್ತದಲ್ಲಿ ಸಾಂಕೇತಿಕ ಧರಣಿಯನ್ನು ಶನಿವಾರ ನಡೆಸಿದರು.

'ಕೊರೊನಾದಿಂದ ಖಾಸಗಿ ಸಾರಿಗೆ ಹಾಗೂ ಪ್ರವಾಸೋದ್ಯಮ ವಲಯ ನಲುಗಿದೆ. ಇಂತಹ ಪರಿಸ್ಥಿತಿಯಲ್ಲೂ ರಸ್ತೆ ತೆರಿಗೆ ಕಟ್ಟಬೇಕಾದ ಅನಿವಾರ್ಯ ನಮ್ಮದು. ಡಿಸೆಂಬರ್‌ವರೆಗೆ ತೆರಿಗೆ ವಿನಾಯಿತಿ, ನಂತರದ 6 ತಿಂಗಳವರೆಗೆ ಶೇ 50ರಷ್ಟು ತೆರಿಗೆ ವಿನಾಯಿತಿ ನೀಡಬೇಕು' ಎಂದು ಶರ್ಮ ಆಗ್ರಹಿಸಿದರು.

'ವರ್ಷಕ್ಕೆ ₹ 3,200 ಕೋಟಿಗೂ ಹೆಚ್ಚು ರಸ್ತೆ ತೆರಿಗೆ ಕಟ್ಟುವ ಖಾಸಗಿ ಸಾರಿಗೆ ಉದ್ದಿಮೆಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ ಪರಿಹಾರವೂ ಕೆಲ ಚಾಲಕರ ಕೈಸೇರಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, 'ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು  ಎಲ್ಲ ದಾಖಲೆಗಳು ಸರಿಯಿದ್ದರೂ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಇತ್ತೀಚೆಗೆ ರಸ್ತೆಗಳಲ್ಲೇ ಚಾಲಕರಿಂದ ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು' ಎಂದು ಮನವಿ ಮಾಡಿದರು.

'ರಾಜ್ಯದಲ್ಲಿ ಸುಮಾರು 80 ಲಕ್ಷ ಜನ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಖಾಸಗಿ ಸಾರಿಗೆ ಉದ್ದಿಮೆಯನ್ನು ಅವಲಂಬಿಸಿದ್ದಾರೆ. ಈ ಅಸಂಘಟಿತ ವಲಯಕ್ಕೆ ಒಂದು ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. 70 ವರ್ಷದ ದಾಟಿದ ಚಾಲಕರಿಗೆ ಮಾಸಿಕ ₹ 3,500 ಪಿಂಚಣಿ, ಚಾಲಕರಿಗೆ ಸಾಲ ಮತ್ತು ವಿಮಾ ಸೌಲಭ್ಯ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು' ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು