ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಜಾಗೃತಿ: ಗೂಳಿಗೌಡ ಮನವಿಗೆ ಸ್ಪಂದನೆ

Published 27 ಮಾರ್ಚ್ 2024, 16:28 IST
Last Updated 27 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಸಂಸ್ಥೆಗಳ ಸುತ್ತ ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆ ತಡೆಗಟ್ಟುವ ಮತ್ತು ಡ್ರಗ್ಸ್‌ ಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಈ ಕುರಿತು ‌ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ದಿನೇಶ ಗೂಳಿಗೌಡ ಅವರು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿದ್ದ ಮುಖ್ಯಮಂತ್ರಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದರು.

ಇದೀಗ ಎಲ್ಲ ಪೊಲೀಸ್‌ ಕಮಿಷನರ್‌ಗಳು, ಐಜಿಗಳು ಹಾಗೂ ಎಸ್‌ಪಿಗಳಿಗೆ ಸುತ್ತೋಲೆ ಹೊರಡಿಸಿರುವ ಪೊಲೀಸ್‌ ಮಹಾ ನಿರ್ದೇಶಕರು, ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. 

ದಿನೇಶ ಗೂಳಿಗೌಡ ಅವರು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ಗೆ ನೀಡಿದ್ದ ದೂರನ್ನು ಪರಿಗಣಿಸಿ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ವಿಧಾನಸೌಧ ಪೊಲೀಸ್‌ ಠಾಣೆಯ ವತಿಯಿಂದ ಎಸ್‌ಜೆಪಿ ಕಾಲೇಜಿನಲ್ಲಿ ಮಾರ್ಚ್‌ 13ರಂದು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಮ್ಮ ಮನವಿಯಲ್ಲಿ ಗೂಳಿಗೌಡ, ‘ಮಾದಕ ದ್ರವ್ಯ ತಡೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚಿಸಿ‌ ಮುಕ್ತ ಅಧಿಕಾರ ನೀಡಬೇಕು, ಸಹಾಯವಾಣಿ ಆರಂಭಿಸಬೇಕು, ಮಾಹಿತಿ ನೀಡುವವರ ಹೆಸರು, ವಿಳಾಸ‌ ಗೌಪ್ಯವಾಗಿ ಇಡಬೇಕು, ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಬೇಕು, ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಇಂಥ ಜಾಲ ಗಮನಕ್ಕೆ ಬಂದರೆ ಶಾಲೆಗಳ ಮುಖ್ಯಸ್ಥರು, ಇಲ್ಲವೇ ಪೋಷಕರ ಗಮನಕ್ಕೆ ತರುವಂತೆ ಮನವರಿಕೆ ಮಾಡಬೇಕು’ ಎಂದು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT