ಭಾನುವಾರ, ಸೆಪ್ಟೆಂಬರ್ 26, 2021
22 °C

ಬೆಂಗಳೂರು: ₹2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರನ್ನು ಬಂಧಿಸಿದ ಸಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ಗುರುವಾರ ದಾಳಿ ಮಾಡಿದ್ದು, ₹ 2 ಕೋಟಿ ಮೌಲ್ಯದ ಮಾದಕ ವಸ್ತು (ಡ್ರಗ್ಸ್) ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದಡಿ ವಿಕಾಸ್ ಸಿಂಗ್ ಮತ್ತು ಶಿವಂ ಸಿಂಗ್ ಎಂಬುವರನ್ನು ಬಂಧಿಸಿದ್ದಾರೆ.

‘ಜಾರ್ಖಂಡ್‌ನ ಆರೋಪಿಗಳು, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ವೈಟ್‌ಫೀಲ್ಡ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದುಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಭಾತ್ಮಿದಾರರೊಬ್ಬರಿಂದ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಯಿತು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘150 ಎಂಡಿಎಂಎ ಮಾತ್ರೆಗಳು, 400 ಗ್ರಾಂ ಚರಸ್, 180 ಎಲ್‌ಎಸ್‌ಡಿ ಕಾಗದ ಚೂರುಗಳು, 3520 ಗ್ರಾಂ ಹಶೀಷ್, 50 ಹೈಡ್ರೊ ಗಾಂಜಾ ಹಾಗೂ 30 ಕೆ.ಜಿ ಗಾಂಜಾ ಆರೋಪಿಗಳ ಮನೆಯಲ್ಲಿ ಸಿಕ್ಕಿದೆ. ಕೃತ್ಯಕ್ಕಾಗಿ ಆರೋಪಿಗಳು ಬಳಸುತ್ತಿದ್ದ 2 ಮೊಬೈಲ್‌ಗಳು ಹಾಗೂ ಎರಡು ತೂಕದ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

'ಡ್ರಗ್ಸ್ ಮಾರಾಟವನ್ನೇ ವಿಕಾಸ್ ಸಿಂಗ್ ಮತ್ತು ಶಿವಂ ಸಿಂಗ್ ವೃತ್ತಿ ಮಾಡಿಕೊಂಡಿದ್ದರು. ಕೆಲ ಸಾಫ್ಟ್‌ವೇರ್‌ ಎಂಜಿನಿಯರ್ ಹಾಗೂ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದರು’ ಎಂದೂ ಹೇಳಿದರು.

ದೆಹಲಿ ಕೇಂದ್ರ ಸ್ಥಾನ: ‘ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ದೆಹಲಿಯನ್ನು ಕೇಂದ್ರ ಸ್ಥಾನ ಮಾಡಿಕೊಂಡಿದ್ದ ಆತ, ಅಲ್ಲಿಂದಲೇ ಡ್ರಗ್ಸ್ ಮಾರುತ್ತಿದ್ದ. ಈ ಬಗ್ಗೆ ಬಂಧಿತ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದೂ ಹೇಳಿದರು.

‘ಡಾರ್ಕ್‌ ನೆಟ್ ಜಾಲತಾಣಗಳನ್ನು ಬಳಸುತ್ತಿದ್ದ ಪ್ರಮುಖ ಆರೋಪಿ, ವಿದೇಶಿಗರಿಂದ ಡ್ರಗ್ಸ್ ಖರೀದಿಸುತ್ತಿದ್ದ. ಕೊರಿಯರ್‌ ಮೂಲಕ ದೇಶಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ನಂತರ, ಅಗತ್ಯ ವಸ್ತುಗಳ ಪೊಟ್ಟಣದಲ್ಲಿ ಡ್ರಗ್ಸ್ ಬಚ್ಚಿಟ್ಟು ದೇಶದ ವಿವಿಧ ರಾಜ್ಯಗಳಿಗೆ ರೈಲಿನಲ್ಲಿ ಅಕ್ರಮವಾಗಿ ಕಳುಹಿಸುತ್ತಿದ್ದ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿರುವ ಪೆಡ್ಲರ್‌ಗಳು, ಡ್ರಗ್ಸ್ ಪಾರ್ಸೆಲ್ ಪಡೆದು ಗ್ರಾಹಕರಿಗೆ ಮಾರುತ್ತಿದ್ದರು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು