ಸೋಮವಾರ, ಜುಲೈ 26, 2021
26 °C
ಅಕ್ರಮವಾಗಿ ನೆಲೆಸಿದ್ದ 38 ಮಂದಿ ಬಂಧನ

ವಿದೇಶಿಯರ 65 ಮನೆಗಳ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಜಪ್ತಿ, 38 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲೆ ಇತ್ತೀಚೆಗಷ್ಟೇ ದಾಳಿ ಮಾಡಿ ಆಯುಧ ಹಾಗೂ ಡ್ರಗ್ಸ್ ಜಪ್ತಿ ಮಾಡಿದ್ದ ಸಿಸಿಬಿ ಪೊಲೀಸರು, ನಗರದಲ್ಲಿ ನೆಲೆಸಿರುವ ವಿದೇಶಿಗರ 65 ಮನೆಗಳ ಮೇಲೆ ಗುರುವಾರ ಬೆಳಿಗ್ಗೆ ದಾಳಿ ಮಾಡಿದರು.

ಡ್ರಗ್ಸ್ ಮಾರಾಟ ಮಾಡುತ್ತಿದ್ದ ಹಾಗೂ ಅಕ್ರಮವಾಗಿ ನೆಲೆಸಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ತಂಡಗಳು, ಏಕಕಾಲದಲ್ಲಿ ದಾಳಿ ಮಾಡಿ ಮನೆಗಳಲ್ಲಿ ಪರಿಶೀಲನೆ ನಡೆಸಿದವು.

ಪೂರ್ವ ವಿಭಾಗ, ಈಶಾನ್ಯ ವಿಭಾಗ, ವೈಟ್‌ಫೀಲ್ಡ್ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಿದೇಶಿಯರು ನೆಲೆಸಿದ್ದಾರೆ. ಕಮ್ಮನಹಳ್ಳಿ, ಬಾಣಸವಾಡಿ, ಸಂಪಿಗೆಹಳ್ಳಿ, ರಾಮಮೂರ್ತಿನಗರ ಹಾಗೂ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ವಿದೇಶಿಯರ ಸಂಖ್ಯೆ ಹೆಚ್ಚಿದೆ.

ಅಪರಾಧ ಹಿನ್ನೆಲೆಯುಳ್ಳವರ ಹಾಗೂ ವಿವಿಧ ಪ್ರಕರಣದಲ್ಲಿ ಬಂಧಿತರಾದವರು ನೀಡಿದ ಹೇಳಿಕೆ ಆಧರಿಸಿ ಪಟ್ಟಿ ಸಿದ್ಧಪಡಿಸಿದ್ದ ಪೊಲೀಸರು, ಅಂಥ ವಿದೇಶಿಯರ ಮನೆಗಳ ಮೇಲೆ ದಾಳಿ ಮಾಡಿ ಮಾಹಿತಿ ಕಲೆಹಾಕಿದರು. ಡಿಸಿಪಿ, 6 ಎಸಿಪಿ, 20 ಇನ್‌ಸ್ಪೆಕ್ಟರ್ ಹಾಗೂ 100 ಸಿಬ್ಬಂದಿ ದಾಳಿಯಲ್ಲಿದ್ದರು.

‘ಡ್ರಗ್ಸ್ ಸಾಗಣೆ ಹಾಗೂ ಮಾರಾಟ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಕೆಲ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು, ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಮಾಹಿತಿ ಇತ್ತು. ಅದರನ್ವಯ ವಿದೇಶಿಯರ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಲಾಯಿತು’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ನೈಜೀರಿಯಾ ಪ್ರಜೆಯೊಬ್ಬನ ಮನೆಯಲ್ಲಿ 90 ಎಕ್ಸ್‌ಟೆಸ್ಸಿ ಮಾತ್ರೆಗಳು ಹಾಗೂ ಮತ್ತೊಬ್ಬನ ಮನೆಯಲ್ಲಿ ಗಾಂಜಾ ಸಿಕ್ಕಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಲಾಗಿದೆ’ ಎಂದೂ ತಿಳಿಸಿದರು.

ಅಕ್ರಮ ವಾಸವಿದ್ದ 38 ಮಂದಿ ಬಂಧನ: ವೀಸಾ ಅವಧಿ ಮುಗಿದರೂ ತಮ್ಮ ದೇಶಕ್ಕೆ ವಾಪಸು ಹೋಗದೇ ಅಕ್ರಮವಾಗಿ ನೆಲೆಸಿದ್ದ 38 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ದಾಳಿ ಸಂದರ್ಭದಲ್ಲಿ ವಿದೇಶಿಯರ ವೀಸಾ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಲಾಯಿತು. 38 ಮಂದಿ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ವೀಸಾ ಇದ್ದರೂ ಅವಧಿ ಮುಗಿದಿತ್ತು’ ಎಂದು ಸಂದೀಪ್ ಪಾಟೀಲ ಹೇಳಿದರು.

‘ಡ್ರಗ್ಸ್ ಪ್ರಕರಣದಲ್ಲಿ ವಿದೇಶಿಯರು ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಅಂಥವರ ಮೇಲೆ ನಿಗಾ ವಹಿಸಲಾಗಿದೆ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದೂ ತಿಳಿಸಿದರು.

‘ಮನೆ ಮಾಲೀಕರಿಗೆ ಎಚ್ಚರಿಕೆ’

‘ವಿದೇಶಿಯರ ದಾಖಲೆಗಳನ್ನು ಪರಿಶೀಲನೆ ಮಾಡದೇ ಹೆಚ್ಚಿನ ಬಾಡಿಗೆ ಆಸೆಗಾಗಿ ಮನೆ ನೀಡುವ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ಬಾಡಿಗೆ ನೀಡುವ ಮುನ್ನ ದಾಖಲೆಗಳ ಪರಿಶೀಲನೆ ನಡೆಸುವುದು ಕಡ್ಡಾಯ. ವಿದೇಶಿ ಬಾಡಿಗೆದಾರರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಲೀಕರು ಮಾಹಿತಿ ನೀಡಬೇಕು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು