ಭಾನುವಾರ, ನವೆಂಬರ್ 29, 2020
19 °C

ಡ್ರಗ್ಸ್ ಮಾರಾಟ ಜಾಲ; 10 ಪೆಡ್ಲರ್‌ಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದೇಶಗಳಿಂದ ಡ್ರಗ್ಸ್ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ನೈಜೀರಿಯಾ ಪ್ರಜೆ ಸೇರಿದಂತೆ 10 ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.

ನೈಜೀರಿಯಾದ ಸನ್ನೀ ಓ ಇನೋಶೆಂಟ್ (26), ಕೇರಳದ ಅಮಲ್ ಬೈಜು (20), ಫಿನಿಕ್ಸ್ ಡಿಸೋಜ (24), ಬೆಂಗಳೂರು ಎಚ್‌ಎಸ್‌ಆರ್‌ ಲೇಔಟ್‌ನ ಸಾರ್ಥಕ್ ಆರ್ಯ (31), ವಿಜಯನಗರದ ನಿತೀನ್ (24), ಜೆ.ಸಿ.ನಗರದ ಕಾರ್ತಿಕ್ ಗೌಡ (25), ಹಲಸೂರಿನ ಝಮಾನ್ ಹಂಜಾಮಿನಾ (25), ಎಚ್‌ಬಿಆರ್ ಲೇಔಟ್‌ನ ಮಹಮದ್ ಅಲಿ (29), ಮಾರತ್ತಹಳ್ಳಿಯ ಶೋನ್ ಶಾಜಿ ಹಾಗೂ ಇಂದಿರಾನಗರದ ಪಿ. ವೆಂಕಟ್ ಬಂಧಿತರು.

‘ಅಂತರ್ಜಾಲ ಬಳಸುವುದರಲ್ಲಿ ನಿಪುಣರಾಗಿದ್ದ ಆರೋಪಿಗಳು, ಡಾರ್ಕ್‌ನೆಟ್ ಜಾಲತಾಣಗಳ ಮೂಲಕ ವಿದೇಶದಲ್ಲಿರುವ ಡ್ರಗ್ಸ್ ಮಾರಾಟಗಾರರನ್ನು ಸಂಪರ್ಕಿಸುತ್ತಿದ್ದರು. ತಮಗೆ ಬೇಕಾದ ಡ್ರಗ್ಸ್‌ಗಳನ್ನು ಖರೀದಿಸಿ, ಬೀಟಾ ಕಾಯಿನ್ ಮೂಲಕ ಹಣ ಪಾವತಿ ಮಾಡುತ್ತಿದ್ದರು. ನಂತರ ವಿದೇಶದಿಂದ ಕೋರಿಯರ್ ಹಾಗೂ ಅಂಚೆ ಮೂಲಕ ನಗರಕ್ಕೆ ಡ್ರಗ್ಸ್‌ ಬರುತ್ತಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್‌ ಪಂತ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿದ್ಯಾರ್ಥಿಗಳು, ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಪರಿಚಯಸ್ಥರಿಗೆ ಆರೋಪಿಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಆ ಮೂಲಕ ಹಣ ಸಂಪಾದನೆ ಮಾಡುತ್ತಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು. ಕಸ್ಟಮ್ಸ್ ಅಧಿಕಾರಿಗಳ ಸಹಕಾರದಿಂದ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಆರೋ‍ಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದೂ ವಿವರಿಸಿದರು.

‘ಎಚ್‌ಎಸ್‌ಆರ್ ಲೇಔಟ್, ವಿಜಯನಗರ, ಮಹಾಲಕ್ಷ್ಮಿಪುರ, ಹಲಸೂರು, ಕೆ.ಜಿ.ಹಳ್ಳಿ, ಇಂದಿರಾನಗರ, ಎಚ್‌ಎಎಲ್ ಹಾಗೂ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಫ್ಲ್ಯಾಟ್ ಹಾಗೂ ಮನೆಯಲ್ಲಿ ಸಂಗ್ರಹಿಸಿದ್ದ ₹ 90 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದೂ ಅವರು ಹೇಳಿದರು.

‘660 ಎಲ್‌ಎಸ್‌ಡಿ ಕಾಗದ, 386 ಎಂಡಿಎಂಎ ಹಾಗೂ 180 ಎಕ್ಸ್‌ಟೆಸ್ಸಿ ಮಾತ್ರೆಗಳು, 100 ಗ್ರಾಂ ಕೊಕೇನ್ ಆರೋಪಿಗಳ ಬಳಿ ಸಿಕ್ಕಿದೆ. ಅವರ 12 ಮೊಬೈಲ್, 3 ಲ್ಯಾಪ್‌ಟಾಪ್, 2 ದ್ವಿಚಕ್ರ ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಕಮಲ್‌ ಪಂತ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು