ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ದಂಧೆ; ಬಿಗ್‌ಬಾಸ್ ಸ್ಪರ್ಧಿ ಆಡಂ ಪಾಷಾ ವಿರುದ್ಧ ಚಾರ್ಜ್‌ಶೀಟ್

ವಾಟ್ಸ್‌ಆ್ಯಪ್‌ ಮೂಲಕ ನಡೆಯುತ್ತಿದ್ದ ದಂಧೆ ಪ್ರಮುಖ ಆರೋಪಿ ಅನಿಕಾ
Last Updated 24 ಫೆಬ್ರುವರಿ 2021, 14:59 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಅಕ್ರಮ ಸಾಗಣೆ ಹಾಗೂ ಮಾರಾಟ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಮಾದಕ ವಸ್ತು ನಿಗ್ರಹ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಕನ್ನಡದ ‘ಬಿಗ್‌ಬಾಸ್’ ರಿಯಾಲಿಟಿ ಶೋ ಸ್ಪರ್ಧಿ ಆಡಂ ಪಾಷಾ ಸೇರಿದಂತೆ 10 ಮಂದಿ ವಿರುದ್ಧ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಿದ್ದಾರೆ.

ಕಲ್ಯಾಣ ನಗರದಲ್ಲಿರುವ ‘ರಾಯಲ್ ಸೂಟ್ಸ್’ ಅಪಾರ್ಟ್‌ಮೆಂಟ್‌ನ ಫ್ಲ್ಯಾಟೊಂದರ ಮೇಲೆ ಕಳೆದ ಆಗಸ್ಟ್ 21ರಂದು ದಾಳಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳು, 145 ಡ್ರಗ್ಸ್ ಮಾತ್ರೆಗಳು ಹಾಗೂ ₹ 2.20 ಲಕ್ಷ ನಗದು ಜಪ್ತಿ ಮಾಡಿದ್ದರು. ಆರೋಪಿಗಳಾದ ದೊಡ್ಡಗುಬ್ಬಿಯ ಡಿ. ಅನಿಕಾ, ಕೇರಳದ ಮೊಹಮ್ಮದ್ ಅನೂಪ ಹಾಗೂ ರಾಜೇಶ್‌ ರವೀಂದ್ರನ್‌ನನ್ನು ಸ್ಥಳದಲ್ಲೇ ಬಂಧಿಸಿದ್ದರು.

ಆರೋಪಿಗಳ ವಿಚಾರಣೆ ನಡೆಸಿ ತನಿಖೆ ಚುರುಕುಗೊಳಿಸಿದ್ದ ಅಧಿಕಾರಿಗಳು, ಆಡಂ ಪಾಷಾ, ಸುಹಾಸ್ ಗೌಡ, ದಿಕ್ಷಿತ್ ಬೋಪಣ್ಣ, ಜಯೇಶ್ ಚಂದ್ರ, ಗರ್ಲಡ್ ಪ್ರವೀಣ್ ಕುಮಾರ್ ಹಾಗೂ ಕೆ. ಜಿಮ್ರಿಸ್‌ನನ್ನು ಬಂಧಿಸಿದ್ದರು. ಈಗ ಅವರೆಲ್ಲರ ವಿರುದ್ಧ ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

‘ಆಫ್ರಿಕಾ ಪ್ರಜೆಗಳಿಂದ ಡ್ರಗ್ಸ್ ಖರೀದಿ ಮಾಡುತ್ತಿದ್ದ ಅನಿಕಾ ಹಾಗೂ ಇತರೆ ಆರೋಪಿಗಳು, ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು. ವಾಟ್ಸ್‌ಆ್ಯಪ್‌ ಮೂಲಕವೇ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಆನ್‌ಲೈನ್‌ ಮೂಲಕ ಹಣ ಹಾಕಿಸಿಕೊಂಡು ಡ್ರಗ್ಸ್ ವಿಲೇವಾರಿ ಮಾಡುತ್ತಿದ್ದರು’ ಎಂಬ ಸಂಗತಿಯನ್ನು ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

’ಗ್ರಾಹಕರ ಜೊತೆ ಅನಿಕಾ ನಿರಂತರವಾಗಿ ಒಡನಾಟವಿಟ್ಟುಕೊಳ್ಳುತ್ತಿದ್ದಳು. ಇತರೆ ಆರೋಪಿಗಳ ಮೂಲಕ ಗ್ರಾಹಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಕಳೆದ ವರ್ಷ ಅನೂಪ್‌ಗೆ 476 ಬಾರಿ ಕರೆ ಮಾಡಿದ್ದ ಅನಿಕಾ, ಡ್ರಗ್ಸ್ ವ್ಯವಹಾರದ ಬಗ್ಗೆಯೇ ಹೆಚ್ಚು ಮಾತನಾಡಿದ್ದಳು’ ಎಂದೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT