ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಿಲಿಕಾನ್‌ ಸಿಟಿ’ಯಲ್ಲಿ ಡ್ರಗ್ಸ್‌ ಮಾಫಿಯಾ ವ್ಯಾಪಕ!

ಮಾದಕ ವಸ್ತುಗಳ ಪೂರೈಕೆಗೆ ‍ಪೆಡ್ಲರ್‌ಗಳಿಂದ ಹೊಸ ಮಾರ್ಗ
Published 8 ಜನವರಿ 2024, 20:19 IST
Last Updated 8 ಜನವರಿ 2024, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯಲ್ಲಿ ಡ್ರಗ್ಸ್‌ ಮಾಫಿಯಾಕ್ಕೆ ಕಡಿವಾಣ ಬಿದ್ದಿಲ್ಲ. ಮಾದಕ ವಸ್ತುಗಳ ಮಾರಾಟ, ಪೂರೈಕೆ ಜಾಲವು ವಿಸ್ತಾರಗೊಳ್ಳುತ್ತಿದೆ. 

ಆರೋಪಿಗಳು, ಮಾದಕ ವಸ್ತುಗಳನ್ನು ಗ್ರಾಹಕರು ಹಾಗೂ ಪಾರ್ಟಿ ನಡೆಯುವ ಸ್ಥಳಕ್ಕೆ ಪೂರೈಸುತ್ತಿದ್ದಾರೆ. ಕಳೆದ ವರ್ಷ ವಿಮಾನ, ಬಸ್‌ ಹಾಗೂ ರೈಲುಗಳ ಮೂಲಕ ಡ್ರಗ್ಸ್‌ ಪೂರೈಕೆಯಾಗಿದ್ದನ್ನು ಪೊಲೀಸರು ಕಾರ್ಯಾಚರಣೆ ವೇಳೆ ಪತ್ತೆ ಹಚ್ಚಿದ್ದರು.

2021ರಲ್ಲಿ ವಿವಿಧ ಮಾದರಿಯ ₹60 ಕೋಟಿ ಮೊತ್ತದ ಡ್ರಗ್ಸ್‌ ಜಪ್ತಿ ಮಾಡಿಕೊಂಡಿದ್ದರು. ಅದೇ 2023ರಲ್ಲಿ ಸಿಸಿಬಿ ಸೇರಿದಂತೆ ಎಂಟು ವಲಯಗಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ₹103 ಕೋಟಿ ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಎರಡು ವರ್ಷಗಳ ಅವಧಿಯಲ್ಲೇ ಡ್ರಗ್ಸ್‌ ಜಾಲ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.

ಹೊಸ ವರ್ಷದ ಆಸುಪಾಸಿನಲ್ಲಿ ನಗರಕ್ಕೆ ನೂರಾರು ಕೆ.ಜಿ ಗಾಂಜಾ, ಸಿಂಥೆಟಿಕ್ ಹಾಗೂ ಸೆಮಿ ಸಿಂಥೆಟಿಕ್ ಡ್ರಗ್ಸ್ ಪೂರೈಕೆಯಾಗಿತ್ತು. ಡಿಸೆಂಬರ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, 9 ವಿದೇಶಿ ಪ್ರಜೆಗಳು ಸೇರಿ 56 ಮಂದಿಯನ್ನು ಬಂಧಿಸಿದ್ದರು. ಅವರಿಂದ 99.85 ಕೆ.ಜಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದರು.

ಪೆಡ್ಲರ್‌ಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಂಡು ಡ್ರಗ್ಸ್‌ ಅನ್ನು ಗ್ರಾಹಕರಿಗೆ ಪೂರೈಸುತ್ತಿರುವುದು ಕಂಡುಬಂದಿದೆ. ಚೂಡಿದಾರ್, ಚಾಕೊಲೇಟ್, ಸೋಪ್, ಬಿಸ್ಕೆಟ್‌ ಹಾಗೂ ಇತರೆ ವಸ್ತುಗಳ ಬಾಕ್ಸ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ನಗರಕ್ಕೆ ಸಾಗಿಸಿರುವುದು ಕಳೆದ ವರ್ಷ ಪತ್ತೆಯಾಗಿತ್ತು. ಅಲ್ಲದೇ ವಾಟ್ಸ್‌ಆ್ಯಪ್‌ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮಾದಕ ವಸ್ತುಗಳನ್ನು ಪೂರೈಸುವ ಜಾಲವೂ ಬೃಹತ್‌ ಆಗಿ ಬೆಳೆದಿದೆ.

ಮೊಬೈಲ್, ದೂರವಾಣಿ, ಇ–ಮೇಲ್, ಆ್ಯಪ್‌, ಸಾಮಾಜಿಕ ಮಾಧ್ಯಮಗಳ ಜತೆಗೆ ‘ಡಾರ್ಕ್‌ನೆಟ್‌’ ಮೂಲಕ ಡ್ರಗ್ಸ್‌ ದಂಧೆ ನಡೆಯುತ್ತಿದೆ ಎಂದು ಪೊಲೀಸರು ಹೇಳುತ್ತಾರೆ.

ಬೆಂಗಳೂರಿಗೆ ನೈಸರ್ಗಿಕವಾಗಿ ಬೆಳೆಯುವ ಗಾಂಜಾ, ಅಫೀಮು ಜೊತೆಯಲ್ಲೇ ಇತ್ತೀಚಿನ ದಿನಗಳಲ್ಲಿ ‘ಸಿಂಥೆಟಿಕ್’ ಡ್ರಗ್ಸ್ ವ್ಯಾಪಕವಾಗಿ ಪೂರೈಕೆಯಾಗುತ್ತಿದೆ ಎಂಬುದನ್ನು ಪೊಲೀಸ್‌ ಇಲಾಖೆಯ ಅಂಕಿಅಂಶಗಳೇ ಹೇಳುತ್ತಿವೆ.

ಕಳೆದ ವರ್ಷ ಪೊಲೀಸರು, 5,252 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡು, 4,059 ಆರೋಪಿಗಳನ್ನು ಬಂಧಿಸಿದ್ದರು. ಜಪ್ತಿ ಮಾಡಿಕೊಂಡ ಗಾಂಜಾದ ಮೌಲ್ಯವೇ ₹29.62 ಕೋಟಿ ಆಗಿದೆ. ನೈಸರ್ಗಿಕ ಡ್ರಗ್ಸ್ ಜೊತೆಗೆ ರಾಸಾಯನಿಕ ವಸ್ತು ಮಿಶ್ರಣ ಮಾಡಿ ತಯಾರಿಸುವ ಸೆಮಿ ಸಿಂಥೆಟಿಕ್ ಡ್ರಗ್ಸ್ (ಮಾರ್ಫಿನ್, ಹೆರಾಯಿನ್, ಕೊಡೈನ್) ನಗರಕ್ಕೆ ಪೂರೈಕೆ ಆಗುತ್ತಿದೆ. ರಾಸಾಯನಿಕವನ್ನೇ ಬಳಸಿ ಸಿದ್ಧಪಡಿಸಿದ್ದ ಸಿಂಥೆಟಿಕ್ ಡ್ರಗ್ಸ್‌ಗಳಾದ ಎಂಡಿಎಂಎ, ಎಲ್‌ಎಸ್‌ಡಿ ಪೇಪರ್‌, ಕೆಟಾಮಿನ್, ಕೊಕೇನ್ ಅನ್ನೂ ಕಳೆದ ವರ್ಷ ವಿದೇಶ ಹಾಗೂ ಹೊರ ರಾಜ್ಯಗಳಿಂದ ಪೆಡ್ಲರ್‌ಗಳು ನಗರದ ಗ್ರಾಹಕರಿಗೆ ಪೂರೈಸಿದ್ದಾರೆ. ಇದು ಕಾರ್ಯಾಚರಣೆಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.

8 ವಿಭಾಗಳಲ್ಲೂ ಜಾಗೃತಿ

ಜಾಥಾ ಡ್ರಗ್ಸ್‌ ಮಾರಾಟ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ನಗರ ಪೊಲೀಸರು ಆರಂಭಿಕವಾಗಿ ಡ್ರಗ್ಸ್‌ ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಜಾಗೃತಿ ಅಭಿಯಾನಕ್ಕೆ ಚಲನಚಿತ್ರ ನಟ–ನಟಿಯರು ಬೆಂಬಲ ನೀಡುತ್ತಿದ್ದಾರೆ. ಪೂರ್ವ ವಿಭಾಗದಿಂದ ನಡೆದ ಮಾದಕ ವ್ಯಸನ ಮುಕ್ತ ನಡಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಟ ಡಾಲಿ ಧನಂಜಯ್‌ ನಟಿ ಸಂಜನಾ ಆನಂದ್‌ ಸಹ ಭಾಗಿಯಾಗಿದ್ದರು. ಬೆಂಗಳೂರು ಜಿಲ್ಲಾ ಪೊಲೀಸ್‌ ವತಿಯಿಂದ ನಡೆದ ಡ್ರಗ್ಸ್ ವ್ಯಸನ ಮುಕ್ತ ನಡಿಗೆಯಲ್ಲಿ ನಟಿ ಸಪ್ತಮಿಗೌಡ ಪಾಲ್ಗೊಂಡಿದ್ದರು. ಪಶ್ಚಿಮ ವಲಯದ ವತಿಯಿಂದ ಸೋಮವಾರ ನಡೆದ ನಡಿಗೆಗೆ ನಟ ಗಣೇಶ್ ಚಾಲನೆ ನೀಡಿದರು. ‘ಈ ಜಾಗೃತಿ ಅಭಿಯಾನ ಮುಂದುವರಿಯಲಿದೆ. ಇನ್ನೂ ಹಲವು ನಟ–ನಟಿಯರು ಭಾಗಿಯಾಗಲಿದ್ದಾರೆ. ಮೊದಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಡ್ರಗ್ಸ್‌ ಖರೀದಿಸುವುದನ್ನು ಬಿಟ್ಟರೆ ಪೂರೈಕೆ ಸಹ ತಾನಾಗಿಯೇ ಇಳಿಕೆ ಆಗಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT