ಬೆಂಗಳೂರು: ಡ್ರಗ್ಸ್ ಸಾಗಣೆ, ಮಾರಾಟ ಹಾಗೂ ಸೇವನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ನಗರದ ಪೊಲೀಸರು, 347 ಮಂದಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಶಾಲೆ– ಕಾಲೇಜು ಹಾಗೂ ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಡ್ರಗ್ಸ್ ಮಾರುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಡ್ರಗ್ಸ್ ಸೇವಿಸುವವರು ಹೆಚ್ಚಾಗಿದ್ದರು. ಶಾಲೆ–ಕಾಲೇಜು ಆರಂಭವಾಗುತ್ತಿರುವುದರಿಂದ ನಗರದ ಹಲವೆಡೆ ನಾಲ್ಕು ದಿನ ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ, ಆಗ್ನೇಯ ಹಾಗೂ ಈಶಾನ್ಯ ವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಡ್ರಗ್ಸ್ ಮಾರಾಟ ಹಾಗೂ ಸೇವನೆ ಆರೋಪದಡಿ 347 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದರು.
‘ಡ್ರಗ್ಸ್ ಮಾರುತ್ತಿದ್ದ 38 ಮಂದಿ ಸಿಕ್ಕಿಬಿದ್ದಿದ್ದಾರೆ. ಅವರಿಂದ 55 ಕೆ.ಜಿ ಗಾಂಜಾ, 215 ಗ್ರಾಂ ಹಶೀಷ್, 768 ಗ್ರಾಂ ಅಫೀಮು ಹಾಗೂ 150 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.