ಸೋಮವಾರ, ಜೂಲೈ 6, 2020
23 °C

ಡ್ರಗ್ ಪೆಡ್ಲರ್ ವಿರುದ್ಧ ‘ಪಿಐಟಿ’ ; ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾದಕ ವಸ್ತು ಮಾರಾಟವನ್ನೇ ದಂಧೆ ಮಾಡಿಕೊಂಡಿದ್ದ ಡ್ರಗ್ ಪೆಡ್ಲರ್ ಮಾಕುಕೊ ಚೊಕ್ವೊಕಾ ಮೌಲೊಕ್ವಾ (37) ಎಂಬಾತನನ್ನು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಣಿಕೆ ತಡೆ (ಪಿಐಟಿ–ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಲು ಪೊಲೀಸ್ ಕಮಿಷನರ್ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಸಲಹಾ ಮಂಡಳಿ ಎತ್ತಿ ಹಿಡಿದಿದೆ.

ನೈಜೀರಿಯಾದ ಮಾಕುಕೊ ಚೊಕ್ವೊಕಾ ಮೌಲೊಕ್ವಾ, 2016ರಿಂದಲೇ ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಬಾಣಸವಾಡಿ, ಕೊತ್ತನೂರು, ಕೋಣನಕುಂಟೆ ಹಾಗೂ ಅವಲಹಳ್ಳಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದ ಆರೋಪಿ, ಪುನಃ ಡ್ರಗ್ಸ್‌ ಮಾರಾಟದಲ್ಲಿ ತೊಡಗಿದ್ದ. ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡಿ ಅವರನ್ನು ಮಾದಕ ವ್ಯಸನಿಗಳಾಗಿ ಮಾಡುತ್ತಿದ್ದ.

ಆರೋಪಿ ನಿರಂತರವಾಗಿ ಕೃತ್ಯದಲ್ಲಿ ಭಾಗಿಯಾಗುವುದನ್ನು ತಡೆಯುವ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ‘ಪಿಐಟಿ–ಎನ್‌ಡಿಪಿಎಸ್’ ಕಾಯ್ದೆಯಡಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದರು. ಸಿಸಿಬಿ ಮಾದಕ ವಸ್ತು ನಿಗ್ರಹ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಬಿಟ್ಟಿದ್ದರು.

ಕಾಯ್ದೆಯನ್ವಯ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸಲಹಾ ಮಂಡಳಿ, ಕಮಿಷನರ್ ಅವರ ಆದೇಶ ಕಾನೂನುಬದ್ಧವಾಗಿದೆ ಎಂದು ತೀರ್ಮಾನಿಸಿದೆ.

ಅಪರಾಧಗಳ ನಿಯಂತ್ರಣಕ್ಕೆ ಇರುವ ಗೂಂಡಾ ಕಾಯ್ದೆ ಮಾದರಿಯಲ್ಲೇ  ಡ್ರಗ್ಸ್ ಪ್ರಕರಣಗಳ ನಿಯಂತ್ರಣಕ್ಕಾಗಿ 1988ರಲ್ಲಿ ‘ಪಿಐಟಿ–ಎನ್‌ಡಿಪಿಎಸ್’ ಕಾಯ್ದೆ ಜಾರಿಗೆ ತರಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಈ ಕಾಯ್ದೆಯಡಿ ಡ್ರಗ್ ಪೆಡ್ಲರೊಬ್ಬನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ನಗರದ ಪೊಲೀಸರ ಈ ಕ್ರಮ ಹೊರ ಜಿಲ್ಲೆ ಹಾಗೂ ನೆರೆ ರಾಜ್ಯಗಳ ಪೊಲೀಸರಿಗೂ ಮಾದರಿಯಾಗಿದೆ. ಪ್ರಕರಣ ಸಂಬಂಧ ಕೈಗೊಂಡ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ತೆಲಂಗಾಣ ಹಾಗೂ ತಮಿಳುನಾಡು ಪೊಲೀಸರು ಕೋರಿಕೆ ಸಲ್ಲಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.