ಶನಿವಾರ, ಮಾರ್ಚ್ 25, 2023
26 °C

ಸಂಜನಾಗೂ ಜೈಲು, ರಾಗಿಣಿಗೆ ಸಿಗದ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಸಿಸಿಬಿ ವಶದಲ್ಲಿದ್ದ ನಟಿ ಸಂಜನಾ ಗಲ್ರಾನಿ ಅವರನ್ನು ಸೆ.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಸೆ.8ರಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ಸಂಜನಾರನ್ನು ಬುಧವಾರ ಬೆಳಿಗ್ಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಬಳಿಕ ಸಿಸಿಬಿ ಅಧಿಕಾರಿಗಳು ಮಹಿಳಾ ಸಾಂತ್ವನ ಕೇಂದ್ರದಿಂದಲೇ  ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಜನಾರನ್ನು 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಜಾಮೀನು ಕೋರಿ ಸಂಜನಾ ಪರ ವಕೀಲ ಶ್ರೀನಿವಾಸ್ ರಾವ್ ವಾದ ಮಂಡಿಸಿದರು.  ಅದನ್ನು ಒಪ್ಪದ ನ್ಯಾಯಾಧೀಶರು, ಸಂಜನಾಗೆ 2 ದಿನಗಳ ನ್ಯಾಯಾಂಗ ಬಂಧನ ಹಾಗೂ ಪ್ರಕರಣವನ್ನು 33ನೇ ಸಿಸಿಎಚ್ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದರು.

ಸಂಜನಾರನ್ನು ಪೊಲೀಸ್ ವಾಹನದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಶುಕ್ರವಾರದವರೆಗೆ ಸಂಜನಾ ಅಲ್ಲೇ ಇರಲಿದ್ದಾರೆ.

ರವಿಶಂಕರ್-ವಿರೇನ್‍ಗೆ 14 ದಿನ ನ್ಯಾಯಾಂಗ ಬಂಧನ: ಡ್ರಗ್ಸ್ ಪ್ರಕರಣದ ಆರೋಪಿಗಳಾಗಿರುವ ವಿರೇನ್ ಖನ್ನಾ ಹಾಗೂ ರವಿಶಂಕರ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, 33ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಿಸಿಬಿ ಕಸ್ಟಡಿ ಅವಧಿ ಮುಗಿದಿದ್ದ ಕಾರಣ ಆರೋಪಿಗಳನ್ನು ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಆರೋಪಿಗಳ ಕಸ್ಟಡಿ ಮುಂದುವರಿಸುವುದು ಅಗತ್ಯವಿಲ್ಲ ಎಂದು ಸಿಸಿಬಿ ಪರ ವಕೀಲರು ತಿಳಿಸಿದರು. ಹಾಗಾಗಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ರಾಗಿಣಿ ಜೈಲುವಾಸ ಮುಂದುವರಿಕೆ: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಲಾಗಿದೆ.

ಪ್ರಕರಣದಲ್ಲಿ ಹೊಸದಾಗಿ ನೇಮಿಸಿರುವ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‍ಪಿಪಿ) ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿರುವುದರಿಂದ ವಿಚಾರಣೆ ಮುಂದೂಡಿ, ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಗಿಣಿ, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮುಂದೂಡಿರುವುದರಿಂದ ರಾಗಿಣಿ ಇನ್ನೂ ಮೂರು ದಿನ ಜೈಲಿನಲ್ಲೇ ಇರಲಿದ್ದಾರೆ.

ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಹುಲ್ ತೋನ್ಸೆ, ವಿನಯ್ ಕುಮಾರ್ ಹಾಗೂ ಶಿವಪ್ರಕಾಶ್ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಲಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಮೂವರೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು