ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣ ಕಸ ಸಂಗ್ರಹಣೆಯ ಐದು ಘಟಕಗಳು ಬೆಂಕಿಗೆ ಆಹುತಿ

ಒಂದೇ ವಾರದ ಅವಧಿಯಲ್ಲಿ ನಡೆದ ಅನಾಹುತ
Last Updated 9 ಫೆಬ್ರುವರಿ 2021, 18:57 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ವಾರದ ಅವಧಿಯಲ್ಲಿ ಬಿಬಿಎಂಪಿಯ 5 ಒಣ ಕಸ ಸಂಗ್ರಹಣಾ ಕೇಂದ್ರಗಳು ಬೆಂಕಿಗೆ ಆಹುತಿಯಾಗಿವೆ. ಎಲ್ಲವೂ ಉದ್ದೇಶಪೂರ್ವಕ ಕೃತ್ಯಗಳು ಎಂದು ಕಸ ಆಯುವವರು ಮತ್ತು ಬಿಬಿಎಂಪಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ 141 ಒಣ ಕಸ ಸಂಸ್ಕರಣಾ ಘಟಕಗಳಿವೆ. ಎಲ್ಲವನ್ನೂ ಆಯಾ ವಾರ್ಡಿನ ಕಸ ಆಯುವವರ ತಂಡಗಳು ನೋಡಿಕೊಳ್ಳುತ್ತಿವೆ. ಒಂದು ಘಟಕದಲ್ಲಿ 10ರಿಂದ 15 ಜನರು ಕೆಲಸ ಮಾಡುತ್ತಿದ್ದಾರೆ.

ನಗರದಲ್ಲಿ ಸಾಂಪ್ರದಾಯಿಕವಾಗಿ ಕಸ ಆಯುವ ಕೆಲಸ ಮಾಡುತ್ತಿದ್ದವರನ್ನೇ ಬಿಬಿಎಂಪಿ ಅಧಿಕೃತಗೊಳಿಸಿದೆ. ಅವರು ಮನೆ–ಮನೆಯಿಂದ ಒಣ ಕಸ ಸಂಗ್ರಹಿಸಿ ಅವುಗಳನ್ನು ಸಂಸ್ಕರಿಸುವ ಕೆಲಸ ಮಾಡುತ್ತಾರೆ. ಕಸ ಸಾಗಿಸಲು ವಾಹನ ವ್ಯವಸ್ಥೆಯನ್ನು ಕಸ ಆಯುವವರೇ ಮಾಡಿಕೊಂಡಿದ್ದು, ಅದಕ್ಕೆ ನಿಗದಿತ ಬಾಡಿಗೆಯನ್ನೂ ಬಿಬಿಎಂಪಿ ಪಾವತಿಸುತ್ತದೆ.

ಕಸ ಸಂಗ್ರಹಣೆ ಮಾಡಿಕೊಂಡು ಬಂದ ನಂತರ ಅವುಗಳಲ್ಲಿರುವ ಪ್ಲಾಸ್ಟಿಕ್, ಪೇಪರ್‌, ಕಬ್ಬಿಣದ ಅಂಶಗಳನ್ನು ಬೇರ್ಪಡಿಸಲಾಗುತ್ತಿದೆ. 32 ಬಗೆಯ ಪ್ಲಾಸ್ಟಿಕ್, 9 ರೀತಿಯ ಪೇಪರ್‌ಗಳನ್ನು ವಿಂಗಡಿಸಲಾಗುತ್ತದೆ. ಅವುಗಳನ್ನು ಗುಜರಿಗೆ ಮಾರಾಟ ಮಾಡಿ ಅದರಿಂದ ಬಂದ ಹಣ ಹಂಚಿಕೊಂಡು ಕಸ ಆಯುವವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಗೊಟ್ಟಿಗೆರೆ, ಜೆ.‍ಪಿ.ನಗರ, ಬನಶಂಕರಿಯ ಗಣೇಶ ಮಂದಿರ ವಾರ್ಡ್, ಮಾರತಹಳ್ಳಿ ವಾರ್ಡ್‌ನಲ್ಲಿರುವ ಕಸ ಸಂಗ್ರಹಣಾ ಕೇಂದ್ರಗಳಲ್ಲಿ ಬೆಂಕಿ ಅನಾಹುತಗಳು ಇತ್ತೀಚೆಗೆ ಸಂಭವಿಸಿದೆ. ಕೆಲವೇ ದಿನಗಳ ಅಂತರದಲ್ಲಿ ಈ ರೀತಿಯ ಘಟನೆಗಳು ಸಂಭವಿಸುತ್ತಿರುವುದರ ಹಿಂದೆ ಬೇರೆ ಕಾರಣ ಇರಬಹುದು ಎಂಬುದು ಬಿಬಿಎಂಪಿ ಅಧಿಕಾರಿಗಳ ಅನುಮಾನ.

‘ಕಸ ಆಯುವವರಿಗೆ ಈ ಜವಾಬ್ದಾರಿ ವಹಿಸಿರುವುದು ಕಸದ ನಿರ್ವಹಣೆ ಹೆಸರಿನಲ್ಲಿ ಹಣ ಮಾಡಿಕೊಳ್ಳುತ್ತಿದ್ದವರಿಗೆ ತೊಂದರೆಯಾಗಿದೆ. ಹೀಗಾಗಿ, ನಮ್ಮನ್ನು ಬೆದರಿಸಿ ಈ ರೀತಿ ಕೃತ್ಯಗಳನ್ನು ಮಾಡುತ್ತಿರಬಹುದು’ ಎಂದು ಕಸ ಆಯುವವರು ಹೇಳುತ್ತಾರೆ.

ಕುಮಾರಸ್ವಾಮಿ ಲೇಔಟ್‌ ವಾರ್ಡ್‌ನಲ್ಲಿಹಸಿರು ದಳದ ನೇತೃತ್ವದಲ್ಲಿ ಕಸ ಆಯುವವರು ನಿರ್ವಹಣೆ ಮಾಡುತ್ತಿದ್ದ ಘಟಕದಲ್ಲಿ ಸೋಮವಾರ ರಾತ್ರಿ ಬೆಂಕಿ ಅನಾಹುತ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರು.

‘ಯಾವ ಘಟಕದಲ್ಲೂ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್ ಆಗಿಲ್ಲ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಸ ವಿಂಗಡಣೆಯ ಯಂತ್ರ ಹಾಗೂ ಇತರ ಸಲಕರಣೆಗಳು ಸುಟ್ಟು ಹೋಗಿವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.

ಬೆಂಕಿ ಅನಾಹುತಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸುತ್ತಮುತ್ತಲ ಮನೆಗಳ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.

‘ಉದ್ದೇಶ ಪೂರ್ವಕ ಕೃತ್ಯದ ಅನುಮಾನ’

‘ಕೆಲವೇ ದಿನಗಳ ಅಂತದಲ್ಲಿ ಐದು ಘಟಕಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಸ ಆಯುವವರಿಗೆ ವಿರುದ್ಧ ಇರುವವರು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಇದೆ’ ಎಂದು ಪಾಲಿಕೆ ವಿಶೇಷ ಆಯುಕ್ತ(ಘನತ್ಯಾಜ್ಯ) ಡಿ. ರಂದೀಪ್ ತಿಳಿಸಿದರು.

‘ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಬೈಕ್‌ನಲ್ಲಿ ಬಂದು ಬೆಂಕಿ ಹಚ್ಚಿ ವಾಪಸ್‌ ಹೋದಂತೆ ಕಾಣಿಸುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT