ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಟಿ ಅಧಿಕಾರಿಗಳ ಕೊಲೆಗೆ ಡಿವೈಎಸ್‌ಪಿ ಯತ್ನ!

Published 28 ಫೆಬ್ರುವರಿ 2024, 16:43 IST
Last Updated 28 ಫೆಬ್ರುವರಿ 2024, 16:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಡಿವೈಎಸ್‌ಪಿ ಶ್ರೀಧರ್‌ ಕೆ. ಪೂಜಾರ್‌ ತಮ್ಮ ಬಂಧನಕ್ಕೆ ಬಂದಿದ್ದ ಎಸ್‌ಐಟಿಯ ಇಬ್ಬರು ಅಧಿಕಾರಿಗಳಿಗೆ ಕಾರು ಗುದ್ದಿಸಿ, ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಡಿವೈಎಸ್‌ಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಸಿಐಡಿ ಘಟಕದ ವಿಶೇಷ ತನಿಖಾ ತಂಡದ ಎಎಸ್‌ಐ ಭಾಸ್ಕರ್ ಹಾಗೂ ಇನ್‌ಸ್ಪೆಕ್ಟರ್‌ ಜಿ. ಅನಿಲ್‌ಕುಮಾರ್‌ ಅವರನ್ನು ನಿಂದಿಸಿ, ಪ್ರಾಣ ಬೆದರಿಕೆ ಹಾಕಿ, ಕೊಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಲಾಗಿದೆ.

‘ಸೈಬರ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿಯ ಡಿವೈಎಸ್‌ಪಿ ಬಿ.ಬಾಲರಾಜು ಅವರ ಸೂಚನೆ ಮೇರೆಗೆ ಆರೋಪಿಯನ್ನು ಬಂಧಿಸಲು ತೆರಳಿದ್ದೆವು. ಮಂಗಳವಾರ ಬೆಳಿಗ್ಗೆ ಸೆಂಟ್ರಲ್‌ ಕಾಲೇಜು ಬಳಿಯ ಮೆಟ್ರೊ ನಿಲ್ದಾಣದ ಬಳಿ ಕಾರಿನಲ್ಲಿ ವಕೀಲರ ಜೊತೆಗೆ ಶ್ರೀಧರ್ ಕುಳಿತಿದ್ದರು. ಠಾಣೆಗೆ ಬರುವಂತೆ ತಿಳಿಸಲಾಯಿತು. ಆಗ ನಮ್ಮನ್ನು ನಿಂದಿಸಿದರು. ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಿ ಅಲ್ಲಿಂದ ತೆರಳಿದರು’ ಎಂದು ಭಾಸ್ಕರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಕಾಫಿ ಬೋರ್ಡ್‌ ಸಿಗ್ನಲ್‌ ಬಳಿ ತೆರಳಿ ಕಾರು ತಡೆಯಲಾಯಿತು. ನಮ್ಮೊಂದಿಗೆ ಬರುವಂತೆ ತಿಳಿಸಿದಾಗ, ‘ನಿಮಗೆ ಏನು ಮಾಡಬೇಕು ತಿಳಿದಿದೆ. ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ, ನಿಮಗೆ ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆ ಹಾಕಿದರು. ಆಗ ಕಾರಿನಲ್ಲಿದ್ದ ಅವರನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ನನ್ನ ದೇಹದ ಅರ್ಧಭಾಗ ಕಿಟಕಿಯಲ್ಲಿ ಸಿಲುಕಿಕೊಂಡಿತ್ತು. ನನ್ನನ್ನು ಕೊಲ್ಲುವ ಉದ್ದೇಶದಿಂದ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಕ್ಕಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆಸಲು ಪ್ರಯತ್ನಿಸಿದ್ದರು. ಬಳಿಕ, ಸ್ಥಳದಿಂದ ಪರಾರಿಯಾದರು’ ಎಂದು ದೂರು ನೀಡಿದ್ದಾರೆ.

‘ಭಾಸ್ಕರ್ ಅವರ ಎರಡೂ ಕೈ, ಕಾಲುಗಳಿಗೆ ಗಾಯವಾಗಿದ್ದು, ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ಮತ್ತೊಬ್ಬ ಇನ್‌ಸ್ಪೆಕ್ಟರ್‌ ಬಂಧನ ಬೆಂಗಳೂರು

ಬಿಟ್‌ಕಾಯಿನ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ವಿಶೇಷ ತನಿಖಾದಳದ (ಎಸ್‌ಐಟಿ) ಅಧಿಕಾರಿಗಳು ಮತ್ತೊಬ್ಬ ಆರೋಪಿ ಪೊಲೀಸ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ ಅವರನ್ನು ಬುಧವಾರ ಬಂಧಿಸಿದ್ದಾರೆ. ಇವರು ಕಡೂರಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಟ್‌ಕಾಯಿನ್‌ ಅಕ್ರಮದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ್ದ ಆರೋಪ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಲಕ್ಷ್ಮೀಕಾಂತಯ್ಯ ಇದ್ದಾರೆಂಬ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಮನೆಗೆ ತೆರಳಿ ಅವರನ್ನು ಬಂಧಿಸಿದರು. ಬಳಿಕ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ 9 ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದೆ. ಎಸ್‌ಐಟಿ ತಂಡದ ತನಿಖಾಧಿಕಾರಿ ಕೆ.ರವಿಶಂಕರ್ ಅವರು ನೀಡಿದ್ದ ದೂರಿನ ಮೇರೆಗೆ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್‌ ಸಿಇಒ ಕೆ.ಎಸ್.ಸಂತೋಷ್ ಕುಮಾರ್ ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ ಹಾಗೂ ಚಂದ್ರಾಧರ ಆಡುಗೋಡಿ ಟೆಕ್ನಿಕಲ್ ಸಪೋರ್ಟ್ ಸೆಂಟರ್‌ನ ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ಹಾಗೂ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್‌ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಈ ಹಿಂದೆ ಸಂತೋಷ್‌ ಹಾಗೂ ಡಿ.ಎಂ.ಪ್ರಶಾಂತ್ ಬಾಬು ಅವರನ್ನು ಬಂಧಿಸಲಾಗಿತ್ತು.

ಆರೋಪಿಗಳಿಗೆ ಹೇಗೆ ಸಹಕಾರ?

ಕಾಟನ್‌ಪೇಟೆ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದ ತನಿಖಾಧಿಕಾರಿ ಆಗಿದ್ದ ಲಕ್ಷ್ಮೀಕಾಂತಯ್ಯ ಅವರು ಪ್ರಕರಣದ ಇತರೆ ಆರೋಪಿಗಳ ಜತೆ ಸೇರಿಕೊಂಡು ಪೊಲೀಸ್ ವಶದಲ್ಲಿದ್ದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ರಾಬಿನ್ ಖಂಡೇಲ್‌ವಾಲ್‌ನನ್ನು ಅಕ್ರಮವಾಗಿ ಎಚ್‌ಎಸ್‌ಆರ್ ಲೇಔಟ್‌ನ ಜಿಸಿಐಡಿ ಟೆಕ್ನಾಲಜೀಸ್ ಸಂಸ್ಥೆಗೆ ಕರೆದೊಯ್ದಿದ್ದರು. ಅಲ್ಲಿ ಸಂಸ್ಥೆಯ ಸಿಇಒ ಸಂತೋಷ್ ರಾಬಿನ್ ಖಂಡೇಲ್‌ವಾಲ್‌ನ ಕ್ರಿಪ್ಟೊ ವ್ಯಾಲೆಟ್ ಖಾತೆಗಳನ್ನು ಅನಧಿಕೃತವಾಗಿ ಆಕ್ಸೆಸ್ ಮಾಡಿ ತನ್ನ ಕ್ರಿಪ್ಟೊ ವ್ಯಾಲೆಟ್‌ಗಳಿಗೆ ಸುಮಾರು ಬಿಟ್ ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದ. ಇದಕ್ಕೆ ಲಕ್ಷ್ಮೀಕಾಂತಯ್ಯ ಹಾಗೂ ತಲೆಮರೆಸಿಕೊಂಡಿರುವ ಇನ್‌ಸ್ಪೆಕ್ಟರ್‌ ಚಂದ್ರಾಧರ್ ಸಹಕರಿಸಿದ್ದರು ಎಂದು ಆರೋಪವಿದೆ. ಆರೋಪಿ ರಾಬಿನ್‌ನಿಂದ ವಶಪಡಿಸಿಕೊಂಡಿದ್ದ ಮೊಬೈಲ್ ಅನ್ನು ಲಕ್ಷ್ಮೀಕಾಂತಯ್ಯ ಅವರು ಅನಧಿಕೃತವಾಗಿ ಬಳಸಿ ಸಾಕ್ಷ್ಯ ನಾಶಪಡಿಸಿದ್ದರು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಶ್ರೀಕಿಗೆ ಕಂಪ್ಯೂಟರ್ ಇಂಟರ್‌ನೆಟ್ ಸೌಲಭ್ಯ ಒದಗಿಸಿಕೊಟ್ಟು ಆತನನ್ನು ಸ್ವತಂತ್ರವಾಗಿ ಬಿಟ್ಟಿದ್ದ ಕಾರಣ ಆತ ತನ್ನ ಸ್ನೇಹಿತೆಗೆ ಇ–ಮೇಲ್ ರವಾನಿಸಿದ್ದ. ಶ್ರೀಕಿ ವ್ಯಾಲೆಟ್‌ನಿಂದ ಸಂತೋಷ್ ಕುಮಾರ್ ವ್ಯಾಲೆಟ್‌ಗೆ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾವಣೆ ಮಾಡಿಕೊಳ್ಳಲು ಲಕ್ಷ್ಮೀಕಾಂತಯ್ಯ ಸೇರಿದಂತೆ ಇತರೆ ತನಿಖಾಧಿಕಾರಿಗಳೇ ಅವಕಾಶ ಕಲ್ಪಿಸಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT