ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ಸಿಗರೇಟ್‌: ಬಹಿರಂಗ ಮಾರಾಟ

ಆರೋಗ್ಯ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ದೃಢ
Last Updated 31 ಮಾರ್ಚ್ 2023, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳಲ್ಲಿ ನಿಷೇಧಿತ ಇ–ಸಿಗರೇಟ್‌ಗಳು ಸುಲಭವಾಗಿ ಲಭ್ಯವಾಗುತ್ತಿವೆ. ವಯೋಮಾನದ ಪರಿಶೀಲನೆ ಇಲ್ಲದೆಯೇ ಮಾರಾಟ ಮಾಡಲಾಗುತ್ತಿದೆ’ ಎನ್ನುವುದು ಖಾಸಗಿ ಸಂಸ್ಥೆಗಳು ನಡೆಸಿದ ಸಂಶೋಧನೆಗಳಿಂದ ದೃಢಪಟ್ಟಿದೆ.

ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ, ವಾಯ್ಸ್, ನಡ್ಡಾ ಇಂಡಿಯಾ, ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿ ಇಂಡಿಯಾ, ಬೆಂಗಳೂರು ಮತ್ತು ಕರ್ನಾಟಕನೋ ಫಾರ್ ಟೊಬ್ಯಾಕೊ ಎಂಬ ಸಂಸ್ಥೆಗಳು ಕರ್ನಾಟಕ, ನವದೆಹಲಿ, ಅಸ್ಸಾಂ, ಗೋವಾ, ಹರಿಯಾಣ, ಉತ್ತರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಇ–ಸಿಗರೇಟ್ ಲಭ್ಯತೆ ಬಗ್ಗೆ ಸಮೀಕ್ಷೆ ನಡೆಸಿವೆ.

‘ಕೇಂದ್ರ ಸರ್ಕಾರವು ಇ–ಸಿಗರೇಟ್ ನಿಷೇಧಿಸಿದ ನಂತರವೂ ಅಡೆತಡೆಯಿಲ್ಲದೆ ಇ–ಸಿಗರೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. 18 ವರ್ಷದೊಳಗಿನವರಿಗೂ ಇ–ಸಿಗರೇಟ್ ಲಭ್ಯವಾಗುತ್ತಿದೆ. ಪುರಾವೆಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನದ ಮೂಲಕ ಸಂಗ್ರಹಿಸಲಾಗಿದೆ. ಕ್ಷೇತ್ರ ಸಮೀಕ್ಷೆ ನಡೆಸಿದವರು ಇ–ಸಿಗರೇಟ್‌ಗಳ ಲಭ್ಯತೆ, ವಯೋಮಾನದ ಪರಿಶೀಲನೆ,
ಇ–ಸಿಗರೇಟ್ ನಿಷೇಧದ ಕುರಿತು ಮಾರಾಟಗಾರರಲ್ಲಿ ಇರುವ ತಿಳುವಳಿಕೆಯ ಬಗ್ಗೆ ಪರಿಶೀಲಿಸಿದ್ದಾರೆ
ಎಂದು ಕರ್ನಾಟಕ ನೋಫಾರ್ ಟೊಬ್ಯಾಕೊ ಸಂಸ್ಥೆಯ ಸಂಯೋಜಕ ಜಿತಿನ್ ಚಂದ್ರನ್ ಅವರು ತಿಳಿಸಿದ್ದಾರೆ.

‘ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿದ 1–2 ದಿನಗಳಲ್ಲೇ ಗ್ರಾಹಕರಿಗೆ ಇ–ಸಿಗರೇಟ್‌ ತಲುಪಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಸಮೀಪದಲ್ಲಿರುವ ತಂಬಾಕು ಮಳಿಗೆಗಳಲ್ಲಿಯೂ ಇ–ಸಿಗರೇಟ್ ಲಭ್ಯವಾಗುತ್ತಿದೆ. ಕೆಲವು ತಂಬಾಕು ಮಾರಾಟಗಾರರು ಇ–ಸಿಗರೇಟ್‌ಗಳನ್ನು ಮಾರುತ್ತಿಲ್ಲವಾದರೂ ಬೇಡಿಕೆಯನುಸಾರ ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡಲಾಗುತ್ತಿದೆ. ಬಹುತೇಕ ಮಾರಾಟಗಾರರಿಗೆ ಇ–ಸಿಗರೇಟ್ ನಿಷೇಧದ ಬಗ್ಗೆ ತಿಳಿವಳಿಕೆ ಇಲ್ಲವಾಗಿದ್ದು, ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣ ಉನ್ನತ ಮಟ್ಟದ ಸಮಿತಿ ಸದಸ್ಯ ಡಾ. ವಿಶಾಲ್ ರಾವ್
ಹೇಳಿದ್ದಾರೆ.

ವಯೋಮಾನ ಪರಿಶೀಲನೆ: ‘ಕೆಲವು ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸುವಾಗ 18 ವರ್ಷ ಅಥವಾ ಅದನ್ನು ಮೀರಿದವರೇ ಎಂಬ ಬಗ್ಗೆ ಪರಿಶೀಲಿಸಲು ಗುರುತು ಹಾಕುವ ವಿಧಾನವನ್ನು ಅನುಸರಿಸಲಾಗುತ್ತಿದೆ. ಮಾರಾಟವಾಗುತ್ತಿರುವ ಇ–ಸಿಗರೇಟ್‌ಗಳಲ್ಲಿ ಹೆಚ್ಚಿನವು ಚೀನಾದಲ್ಲಿ ತಯಾರಾಗುತ್ತಿವೆ’ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಪ್ರಾಧ್ಯಾಪಕ ಡಾ. ಅಶೋಕ್ ಪಾಟೀಲ್ ತಿಳಿಸಿದ್ದಾರೆ.

‘2023ರ ಮಾರ್ಚ್‌ ತಿಂಗಳು ಬೆಂಗಳೂರಿನಲ್ಲಿ ₹ 8.9 ಲಕ್ಷಕ್ಕೂ ಅಧಿಕ ಮೌಲ್ಯದ ಇ–ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇ–ಸಿಗರೇಟ್ ಆರೋಗ್ಯಕ್ಕೆ ಅಪಾಯಕಾರಿ ಎಂಬ ಕಾರಣಕ್ಕೆ ಭಾರತದಲ್ಲಿ ಇದನ್ನು ನಿಷೇಧಿಸಲಾಗಿದೆ. ಇ–ಸಿಗರೇಟ್‌ಗಳು ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. ಇ–ಸಿಗರೇಟ್ ಮಾರಾಟ ಮಾಡುವ ಸ್ಥಳಗಳ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಬೇಕು’ ಎಂದು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಅಧ್ಯಕ್ಷ ಡಾ. ರಮೇಶ್ ಬಿಳಿಮಗ್ಗ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT