ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ ಜಾರಿಯಿಂದ ಆರ್ಥಿಕ ಸ್ಥಿತಿ ಉತ್ತಮ: ತಂಗಡಗಿ

Published 19 ಫೆಬ್ರುವರಿ 2024, 20:29 IST
Last Updated 19 ಫೆಬ್ರುವರಿ 2024, 20:29 IST
ಅಕ್ಷರ ಗಾತ್ರ

ಬೆಂಗಳೂರು: ‘ಎಚ್‌. ಕಾಂತರಾಜ ಆಯೋಗದ ವರದಿಯನ್ನು ಎಲ್ಲ ಸಮುದಾಯದವರೂ ಒಪ್ಪಿದರೆ, ಆರ್ಥಿಕ ಸ್ಥಿತಿ–ಗತಿ ಉತ್ತಮವಾಗಲಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ್ ಎಸ್‌. ತಂಗಡಗಿ ಹೇಳಿದರು.

‘ಕಾಂತರಾಜ ವರದಿಯನ್ನು ಜಾತಿಗಣತಿ ಎಂದು ಮಾತ್ರ ಬಿಂಬಿಸಲಾಗುತ್ತಿದೆ. ಈ ವರದಿ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇಲಾಖೆಯ ಸಚಿವನಾಗಿದ್ದರೂ ನನಗೆ ಆ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಆದರೆ, ಆ ವರದಿ ಜಾರಿಯಾದರೆ ಎಲ್ಲ ಸಮುದಾಯದ ಬಡವರಿಗೆ ನೆರವಾಗುತ್ತದೆ. ಅವರೆಲ್ಲೂ ಅಭಿವೃದ್ಧಿಯತ್ತ ಸಾಗುತ್ತಾರೆ’ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2ಎಗೆ ಸೇರಿಸಬೇಕು, ಅದರಂತೆ ಸೌಲಭ್ಯಬೇಕು ಎಂದು ನೀವೆಲ್ಲ ಕೇಳುತ್ತಿದ್ದೀರಿ. ಆ ರೀತಿ ಸೇರಿಸಲು, ಸೌಲಭ್ಯ ನೀಡಲು ಆಧಾರ ಬೇಕಲ್ಲವೇ? ಕಾಂತರಾಜ ಆಯೋಗದ ವರದಿ ಜಾರಿಯಾದರೆ ಮರಾಠ, ಹಿಂದುಳಿದ ವರ್ಗ, ಬ್ರಾಹ್ಮಣ, ಲಿಂಗಾಯತ, ಎಸ್‌ಸಿ, ಎಸ್‌ಟಿ ಸಮುದಾಯದವರೆಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ವರ್ಗಕ್ಕೆ ನೆರವಾಗಲೆಂದೇ ಕಾಂತರಾಜ ಆಯೋಗವನ್ನು ರಚಿಸಿರುವುದು. ಅಲ್ಲದೆ, ಈ ಬಾರಿ ಬಜೆಟ್‌ನಲ್ಲಿ ಎಲ್ಲ ನಿಗಮಗಳಿಗೆ ₹1,600 ಕೋಟಿ ನೀಡಿದ್ದಾರೆ. ಇದರಿಂದ ಎಲ್ಲ ನಿಗಮಗಳಿಗೂ ಅನುದಾನ ನೀಡಲಾಗುತ್ತದೆ’ ಎಂದು ಸಚಿವರು ಹೇಳಿದರು.

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ಶೈಕ್ಷಣಿಕ ಸಾಲ ಯೋಜನೆ, ರಾಜಶ್ರೀ ಸಾಹುಮಹಾರಾಜ್‌ ವಿದೇಶಿ ವ್ಯಾಸಂಗ ಸಾಲ ಯೋಜನೆ, ಮರಾಠ ಮಿಲ್ಟ್ರಿ ಹೋಟೆಲ್‌, ಸ್ವಾವಲಂಬಿ ಸಾರಥಿ ಯೋಜನೆ, ಜೀಜಾವು– ಜಲಭಾಗ್ಯ ಯೋಜನೆ, ಶಹಜೀ ರಾಜೇ ಸಮೃದ್ಧಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಅಮೃತ್‌ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಆರ್‌. ಪಾಗೋಜಿ ನೇತೃತ್ವದಲ್ಲಿ ಪ್ರಕಟಿಸಿರುವ ಮರಾಠ ಸಮುದಾಯದ ಕುರಿತ ಕಿರು ಸಂಶೋಧನಾತ್ಮಕ ಸಂಪುಟ– ‘ಕರ್ನಾಟಕ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT