ಬೆಂಗಳೂರು: ‘ವಿದ್ಯಾರ್ಥಿ ದಿಸೆಯಲ್ಲಿ ಪಡೆಯುವ ಜ್ಞಾನವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯವಾಗಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು ಹಾಗೂ ಉತ್ತಮ ನಡವಳಿಕೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ಎಂ.ಎಸ್. ಉಮಾಪತಿ ತಿಳಿಸಿದರು.
ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯದ 2024-25 ಸಾಲಿನ ಮೊದಲ ವರ್ಷದ ಬಿ.ಇ. ತರಗತಿಗಳ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
'ವಿದ್ಯಾಥಿಗಳು ತಮ್ಮ ಪೋಷಕರ ಕನಸನ್ನು ನನಸು ಮಾಡಲು ಶ್ರಮ ವಹಿಸಿ ಓದಬೇಕು' ಎಂದು ಸಲಹೆ ನೀಡಿದರು.
ಎಬಿಬಿ ಕಂಪನಿ ಉಪಾಧ್ಯಕ್ಷ ಕರ್ನಲ್ ಎಸ್.ಆರ್.ಕಿರಣ್, ‘ಶೈಕ್ಷಣಿಕ ಜೀವನದಲ್ಲಿ ವಿದ್ಯಾರ್ಥಿಗಳು ಹೊಸತನದ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು' ಎಂದು ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಅನುಸರಿಸಬೇಕಾದ ಶಿಸ್ತು, ನಾಯಕತ್ವ, ಜೀವನದ ಮೌಲ್ಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಡಿಟಿಐಸಿಐನ ಉಪ ಪ್ರಧಾನ ವ್ಯವಸ್ಥಾಪಕ ಜಯಂತ್ ದೇಶಪಾಂಡೆ, ವಾಹನ ಉದ್ಯಮದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಕಲಾವಿದೆ ಕಲ್ಯಾಣಿ ಮೆನನ್, ‘ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವ ಮಹತ್ವವನ್ನು ಮಾನಸಿಕ, ದೈಹಿಕ ಆರೋಗ್ಯಕ್ಕೂ ನೀಡಬೇಕು. ವೃತ್ತಿ ಜೀವನದಲ್ಲಿ ಕಲಾತ್ಮಕ ಅಭಿವ್ಯಕ್ತಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಬಿಐಟಿ ಕಾಲೇಜಿನ ಪ್ರಾಚಾರ್ಯ ಎಂ.ಯು ಅಶ್ವತ್ಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.