ಬೆಂಗಳೂರು: ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ನೆನಪಿಸುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಧರ್ಮೀಯರು ಸೋಮವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಿದರು.
ಮುಸ್ಲಿಮರ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಸಂಭ್ರಮ ಮನೆಮಾಡಿತ್ತು. ಸಂಬಂಧಿಕರು ಹಾಗೂ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಹಬ್ಬದ ಶುಭಾಶಯ ಕೋರಿದರು. ಹಲವರು ದವಸ–ಧಾನ್ಯ ಹಾಗೂ ನಗದು ದಾನ ಮಾಡಿದರು. ಶಿವಾಜಿನಗರ, ರಸೆಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಖರೀದಿಯೂ ಜೋರಾಗಿತ್ತು.
ನಗರದ ಮಸೀದಿ, ದರ್ಗಾ ಹಾಗೂ ಮದರಸಾಗಳಿಗೆ ವಿಶೇಷವಾಗಿ ವಿದ್ಯುತ್ ಹಾಗೂ ಬಣ್ಣದ ಕಾಗದಗಳ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ಬೆಳಕಿನಲ್ಲಿ ಮಸೀದಿಗಳು ಕಂಗೊಳಿಸುತ್ತಿದವು.
ಟ್ಯಾನರಿ ರಸ್ತೆ, ಪುರುಭವನ ಎದುರು ರಸ್ತೆ ಸಹಿತ ವಿವಿಧೆಡೆ ಮಿಲಾದ್ (ಜನ್ಮದಿನ) ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ಕೈಯಲ್ಲಿ ಬಲೂನ್‌ಗಳನ್ನು ಹಿಡಿದು ರಸ್ತೆಯುದ್ದಕ್ಕೂ ನೆರೆದಿದ್ದವರಿಗೆ ಶುಭಾಶಯ ಕೋರಿದರು. ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳ ಫಲಕಗಳನ್ನು ಹೊಂದಿದ್ದ ವಾಹನಗಳು ಗಮನಸೆಳೆದವು. ಮಕ್ಕಳು ಟಿಪ್ಪು ಸುಲ್ತಾನ್ ಸಹಿತ ವಿವಿಧ ವೇಷ ಧರಿಸಿ ಮಿಂಚಿದರು. ಕುದುರೆ ಗಾಡಿಯಲ್ಲಿ ಪ್ರಯಾಣಿಸಿ ಸಂಭ್ರಮಿಸಿದರು.
ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಈದ್ ಮೆರವಣಿಗೆಗಳು ನಡೆದವು. ಖವ್ವಾಲಿಗಳನ್ನು ಹಾಡಲಾಯಿತು. ಸಾಮೂಹಿಕ ಪ್ರಾರ್ಥನೆಗಳು ನಡೆದವು.
ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಮರು ತಮ್ಮ ಮನೆಗಳಲ್ಲಿ ಪಾಯಸ, ಕಡುಬು, ಇತರೆ ಸಿಹಿ ಪದಾರ್ಥ, ಬಿರಿಯಾನಿ ತಯಾರಿಸಿ ನೆರೆಹೊರೆಯವರಿಗೆ ಹಂಚಿ ತಿಂದರು. ಪ್ರಮುಖ ಮಸೀದಿ ಹಾಗೂ ದರ್ಗಾಗಳಲ್ಲಿ ದಾನಿಗಳಿಂದ ಆಹಾರ ವಿತರಣೆ ನಡೆಯಿತು.
ಈದ್ ಮಿಲಾದ್ ಪ್ರಯುಕ್ತ ಮಕ್ಕಳು ವಿವಿಧ ವೇಷ ಧರಿಸಿ ಕುದುರೆ ಗಾಡಿಯಲ್ಲಿ ಪ್ರಯಾಣಿಸಿ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ಸೋಮವಾರ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಪ್ರಯುಕ್ತ ಮೆರವಣಿಗೆ ನಡೆಸಿದರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಟ್ಯಾನರಿ ರಸ್ತೆಯಲ್ಲಿ ಸೋಮವಾರ ಮುಸ್ಲಿಮರು ಈದ್ ಮಿಲಾದ್ ಸಂಭ್ರಮದ ವೇಳೆ ಕಾಣಿಸಿಕೊಂಡ ಟಿಪ್ಪು ಸುಲ್ತಾನ್ ವೇಷಧಾರಿ