ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ವಲಯ ಎಂಟು ಅಭಿವೃದ್ಧಿಗಿಲ್ಲ ಗಂಟು

Published 12 ಜೂನ್ 2024, 23:58 IST
Last Updated 12 ಜೂನ್ 2024, 23:58 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 800 ಚದರ ಕಿಲೋಮೀಟರ್‌ ಪ್ರದೇಶವನ್ನು ಒಂದು ಕೇಂದ್ರ ಕಚೇರಿ ನಿರ್ವಹಿಸಲು ಸಾಧ್ಯವಿಲ್ಲವೆಂದು ಅರಿತು ಎಂಟು ವಲಯಗಳನ್ನಾಗಿ ಮಾಡಲಾಗಿದೆಯಷ್ಟೆ. ದಶಕ ಕಳೆದರೂ ಈ ವಲಯಗಳು ಅಧಿಕಾರ ಹಾಗೂ ಅಭಿವೃದ್ಧಿ ನಿಧಿಯ ಕೊರತೆಯಿಂದ ನಲುಗುತ್ತಲೇ ಇವೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚಿಸಿದಾಗ ನಗರದ ವ್ಯಾಪ್ತಿಗೆ ಬಂದ ‘ಬೃಹತ್‌ ಪ್ರದೇಶವನ್ನು’ ನರಸಿಂಹರಾಜ ಚೌಕದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತು ನಿರ್ವಹಿಸದೆ ಸ್ಥಳೀಯ ಆಡಳಿತಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಿಯಮ ರೂಪಿಸಲಾಗಿತ್ತು. ಆದರೆ, ಹಿರಿಯ ಐಎಎಸ್‌ ದರ್ಜೆಯ ಅಧಿಕಾರಿಗಳು ವಲಯ ಆಯುಕ್ತರಾಗಿ ನೇಮಕವಾಗಿದ್ದರೂ ಸ್ವತಂತ್ರವಾಗಿ ಯಾವ ಕಾರ್ಯ ನಿರ್ವಹಿಸಲೂ ಸಾಧ್ಯವಾಗಿಲ್ಲ. ಬದಲಿಗೆ ಮುಖ್ಯ ಆಯುಕ್ತರೇ ಕೇಂದ್ರ ಕಚೇರಿಯಲ್ಲಿ ಕುಳಿತು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ.

ಬಿಬಿಎಂಪಿ ರಚನೆಯಾದ ಮೇಲೆ ಎಂಟು ವಲಯಕ್ಕೆ ಜಂಟಿ ಆಯುಕ್ತರನ್ನು ನೇಮಿಸಲಾಗಿತ್ತು. ವಲಯವಾರು ಉಪ ಕಂದಾಯ ವಿಭಾಗಗಳನ್ನು ರಚಿಸಿ, ಅಧಿಕಾರ ನೀಡಲಾಯಿತು. ವಾರ್ಡ್‌ ಕಾಮಗಾರಿಗಳೆಂದು ಗುರುತಿಸಿ, ಅವುಗಳನ್ನು ನಿರ್ವಹಿಸಲು ಸೂಚಿಸಲಾಯಿತು. ಆದರೆ, ಬಜೆಟ್‌ನಲ್ಲಿ ವಾರ್ಡ್‌ಗಳಿಗೆ ತಲಾ ₹2 ಕೋಟಿ ಬಿಟ್ಟರೆ ಇನ್ನು ಯಾವುದೇ ಅನುದಾನ ಇರುತ್ತಿರಲಿಲ್ಲ. ಯೋಜನೆ, ರಸ್ತೆ ಮೂಲಸೌಕರ್ಯ, ಬೃಹತ್‌ ನೀರುಗಾಲುವೆ, ತಾಂತ್ರಿಕ ಕೋಶ, ಅರಣ್ಯ, ಕೆರೆ, ನಗರ ಯೋಜನೆ ಸೇರಿದಂತೆ ಮೇಲ್ಸೇತುವೆ, ಅಂಡರ್‌ ಪಾಸ್‌ಗಳೆನ್ನೆಲ್ಲ ಕೇಂದ್ರ ಕಚೇರಿಯಲ್ಲಿ ಕುಳಿತಿರುವ ಎಂಜಿನಿಯರ್‌ಗಳೇ ನಿರ್ವಹಿಸುತ್ತಿದ್ದರೇ ವಿನಾ ಎಂಟು ವಲಯಗಳಲ್ಲಿ ಇದ್ದವರಲ್ಲ. ಇಂದಿಗೂ ಇದೇ ಮುಂದುವರಿದಿದೆ.

ವಲಯಗಳು ಹೀಗೆಯೇ ಇದ್ದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಅವುಗಳನ್ನು ಪುನರ್‌ರಚಿಸಲು ಸರ್ಕಾರ ನಿರ್ಧರಿಸಿತು. ಜಂಟಿ ಆಯುಕ್ತರ ಬದಲು ಹಿರಿಯ ಐಎಎಸ್‌ ಅಧಿಕಾರಿಗಳನ್ನು ವಲಯ ಆಯುಕ್ತರನ್ನಾಗಿಸಿತು. ಜಂಟಿ ಆಯುಕ್ತರಿಗೆ ಕಂದಾಯ ವಿಭಾಗವನ್ನು ಮಾತ್ರ ನಿರ್ವಹಿಸಲು ಸೂಚಿಸಲಾಯಿತು. ಆದರೆ, ವಲಯ ಆಯುಕ್ತರಿಗೆ ಮಾಡಲು ಕೆಲಸವೇ ಇಲ್ಲದಂತಾಗಿದೆ. ವಾರ್ಡ್‌ಗಳಲ್ಲಿನ ಕೆಲವೇ ಕೋಟಿ ಮೊತ್ತದ ಕಾಮಗಾರಿಗಳು, ಮಳೆ ನೀರು ನಿಯಂತ್ರಣ, ಆಸ್ತಿ ತೆರಿಗೆ ಸಂಗ್ರಹವಷ್ಟೇ ಅವರ ಕಾರ್ಯವಾಗಿದೆ.

ಹಿರಿಯ ಐಎಎಸ್‌ ಅಧಿಕಾರಿಗಳನ್ನೇ ತುಂಬಿಸಿಕೊಂಡಿರುವ ಬಿಬಿಎಂಪಿಯಲ್ಲಿ ಕೆಲಸ ಮಾಡಲು ಸಿಬ್ಬಂದಿ ಇಲ್ಲದಂತಾಗಿದೆ. ಎಂಟು ವಲಯಗಳಿಗೆ ಆಯುಕ್ತರಲ್ಲದೆ ಕಂದಾಯ, ಜಾಹೀರಾತು, ಟಿಡಿಆರ್‌, ಹವಾಮಾನ ಬದಲಾವಣೆ, ಯೋಜನೆ, ಆಡಳಿತ, ಹಣಕಾಸು, ಐಟಿ, ಚುನಾವಣೆ, ಶಿಕ್ಷಣ ವಿಭಾಗಗಳಿಗೂ ಐಎಎಸ್‌ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ. ಇಷ್ಟಾದರೂ ಬಿಬಿಎಂಪಿಯಲ್ಲಿ ಅಭಿವೃದ್ಧಿ ಕಾರ್ಯಗಳ ನಿರ್ವಹಣೆಯಾಗುತ್ತಿಲ್ಲ. ಹೊಸ ಪಾಲಿಕೆಗಳಾದರೆ ಈ ಐಎಎಸ್‌ಗಳ ಸಂಖ್ಯೆ ಮತ್ತಷ್ಟು ವೃದ್ಧಿಯಾಗುತ್ತದೆ ಅಷ್ಟೇ.

ಸಂಘರ್ಷವೇ ಹೆಚ್ಚು: ಎಂಟು ವಲಯಗಳಿಗೆ ಐಎಎಸ್‌ ಅಧಿಕಾರಿಗಳೇ ಇದ್ದರೂ ಸಾಧಿಸಲಾಗದ ಅಭಿವೃದ್ಧಿ, ನಿಯಂತ್ರಿಸಲಾಗದ ಸಮಸ್ಯೆಗಳು ಐದು ಪಾಲಿಕೆಗಳು ಕಾರ್ಯಾರಂಭ ಮಾಡಿದರೆ ನಿವಾರಣೆಯಾಗುತ್ತವೆಯೇ ಎಂಬುದು ಮೂಲಪ್ರಶ್ನೆ. ಮೇಯರ್‌, ಉಪಮೇಯರ್, ಸಮಿತಿ, ಅಧಿಕಾರಿಗಳು ಎಂದು ಎಲ್ಲ ವೆಚ್ಚಗಳೂ ಅತಿಯಾಗುತ್ತವೆಯೇ ಹೊರತು ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ನಿಧಿ ಹಂಚಿಕೆ ಹಾಗೂ ವರಮಾನದಲ್ಲಿ ತಾರತಮ್ಯ ಉಂಟಾಗಿ ನಿತ್ಯ ಸಂಘರ್ಷವೇ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT