ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ವಾರ್ಡ್ ಮರುವಿಂಗಡಣೆ ನಂತರ ಚುನಾವಣೆ: ರಾಜ್ಯ ಚುನಾವಣಾ ಆಯೋಗ ವಿರೋಧ

Last Updated 21 ಅಕ್ಟೋಬರ್ 2020, 5:58 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮತ್ತು ಮರುವಿಂಗಡಣೆ ನಂತರ ಚುನಾವಣೆ ನಡೆಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ರಾಜ್ಯ ಚುನಾವಣಾ ಆಯೋಗ ಮತ್ತು ಇತರ ಅರ್ಜಿದಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ತಿದ್ದುಪಡಿ ಕೈಬಿಟ್ಟು 198 ವಾರ್ಡ್‌ಗಳ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಮನವಿ ಮಾಡಿದರು.

‘ಮತದಾನದ ಸಿದ್ಧತೆಗಳನ್ನು ಆರಂಭಿಸಿದ ನಂತರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವಾರ್ಡ್‌ವಾರು ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಕ್ಕಾಗಿ ಸಾರ್ವಜನಿಕರ ಹಣ ಮತ್ತು ಸಮಯ ವ್ಯಯಿಸಲಾಗಿದೆ. ಈಗ ಮತ್ತೆ ಹೊಸದಾಗಿ 243 ವಾರ್ಡ್‌ಗಳ ಗಡಿ ನಿಗದಿಪಡಿಸಲು ಮತ್ತು ನಂತರ ಮೀಸಲಾತಿ ಪಟ್ಟಿ ಪ‍್ರಕಟಿಸಲು ಸಾಕಷ್ಟು ಸಮಯ ಹಿಡಿಯಲಿದೆ. ಆದರೆ, ಸ್ಥಳೀಯ ಸಂಸ್ಥೆಗಳನ್ನು ಜೀವಂತವಾಗಿಡುವುದು ಸಂವಿಧಾನದ ಪ್ರಕಾರ ಕಡ್ಡಾಯ’ ಎಂದು ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಿವರಿಸಿದರು.

‘ಬಿಬಿಎಂಪಿ ಅವಧಿ ಮುಗಿದು ಚುನಾವಣೆ ಸಿದ್ಧತೆ ಆರಂಭಿಸಿದ ಬಳಿಕ ಸೆಪ್ಟೆಂಬರ್ 10ರಂದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸಿದ್ಧತೆ ಆರಂಭಿಸುವ ಮೊದಲು ತಿದ್ದುಪಡಿ ಆಗಿರಲಿಲ್ಲ. ಹೀಗಾಗಿ, ಚುನಾವಣೆಗೆ ತಿದ್ದುಪಡಿ ಕಾಯ್ದೆ ಅನ್ವಯವಾಗುವುದಿಲ್ಲ’ ಎಂದು ಅರ್ಜಿದಾರರೊಬ್ಬರ ಪರ ವಕೀಲ ಪ್ರೊ. ರವಿವರ್ಮಕುಮಾರ್ ವಿವರಿಸಿದರು.

ಈ ಕುರಿತು ಒಂದು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT