ಶುಕ್ರವಾರ, ಡಿಸೆಂಬರ್ 2, 2022
22 °C

ಚುನಾವಣಾ ಆಯೋಗ ಇನ್ನಷ್ಟು ಬಿಗಿಯಾಗಲಿ: ನಾಗರಿಕ ಸಂಘಟನೆಗಳ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆಯನ್ನು ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದೊಳಗೆ ನಡೆಸಬೇಕು’ ಎಂದು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶಿಸಿರುವುದರಿಂದ ಎರಡು ವರ್ಷಗಳ ಸುದೀರ್ಘ ಕಾನೂನು ಹೋರಾಟ ಒಂದು ಘಟ್ಟಕ್ಕೆ ಬಂದು ನಿಂತಂತೆ ಕಾಣುತ್ತಿದೆ.

2020ರ ಸೆಪ್ಟೆಂಬರ್‌ನಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಿಕೊಂಡು ಬರಲು ಸರ್ಕಾರ ಹಲವು ಕಾರಣಗಳನ್ನು ನೀಡುತ್ತಾ ಬಂದಿದೆ. ಸದ್ಯಕ್ಕೆ ಕಾರ್ಪೊರೇಟರ್‌ ಗಳಿಲ್ಲದೆ ಬಿಬಿಎಂಪಿ ಚಟುವಟಿಕೆ ನಡೆಯುತ್ತಿದ್ದು, ಸಾರ್ವಜನಿಕರ ಅಹವಾಲುಗಳನ್ನು ಕೇಳುವ ಕಿವಿಗಳೇ ಕಡಿಮೆಯಾದ ಹಾಗೆ ಆಗಿದೆ.

ಮಹಾನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲು ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರಗಳನ್ನು ಹೆಣೆಯುತ್ತಿವೆ. ಇದನ್ನು ತಪ್ಪಿಸಲು ಚುನಾವಣಾ ಆಯೋಗ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಾಜಿ ಸದಸ್ಯರು ಹಾಗೂ ವಿವಿಧ ನಾಗರಿಕರ ಸಂಘಟನೆಗಳವರು
ಆಗ್ರಹಿಸಿದ್ದಾರೆ.

‘ವಾರ್ಡ್ ಮರುವಿಂಗಡಣೆ ಹಾಗೂ ವಾರ್ಡ್‌ಗಳ ಮೀಸಲಾತಿ ನಿಗದಿಯ ಹೊಣೆಯನ್ನು ಸರ್ಕಾರದಿಂದ ಹೊರತೆಗೆಯಬೇಕು. ಸ್ವತಂತ್ರ ಸಂಸ್ಥೆಯೊಂದಕ್ಕೆ ಅದರ ಜವಾಬ್ದಾರಿ ವಹಿಸಿಕೊಡಬೇಕು. ಆ ಸಂಸ್ಥೆಯು ನೇರವಾಗಿ ಚುನಾವಣಾ ಆಯೋಗಕ್ಕೆ ವರದಿಗಳನ್ನು ಸಲ್ಲಿಸುವಂತಾಗಬೇಕು’ ಎಂದು ಬೆಂಗಳೂರು ಪ್ರಜಾ ವೇದಿಕೆಯ ಸಂಸ್ಥಾಪಕ ಎನ್‌.ಎಸ್‌. ಮುಕುಂದ್‌ ಅಭಿಪ್ರಾಯಪಡುತ್ತಾರೆ.

ಚುನಾವಣೆ ಬೇಗ ನಡೆಸಬೇಕು ಎಂದು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವರಲ್ಲಿ ಒಬ್ಬರಾಗಿದ್ದ, ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ವಜೀದ್ ಈಗ ಹೈಕೋರ್ಟ್ ಚುನಾವಣೆ ನಡೆಸಲು ಆದೇಶಿಸಿರುವುದನ್ನು ಸ್ವಾಗತಿಸಿದರು. ‘ವಾರ್ಡ್ ಮರುವಿಂಗಡಣೆ ಮಾಡಲು ಎರಡು ವರ್ಷಗಳಷ್ಟು ಸುದೀರ್ಘ ಅವಧಿಯ ಅಗತ್ಯವಿಲ್ಲ. ಸರ್ಕಾರ ವಿನಾ ಕಾರಣ ಚುನಾವಣೆ ಮುಂದೂಡಲು ಇಂತಹ ತಂತ್ರ ಅನುಸರಿಸಿದೆ. ಅಷ್ಟೇ ಅಲ್ಲದೆ, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗೆ ಬೇರೆ ಬೇರೆ ವಾರ್ಡ್ ಮರುವಿಂಗಡಣಾ ವರದಿಗಳನ್ನು ಸಲ್ಲಿಸಿ ಇನ್ನಷ್ಟು ಗೋಜಲು ಸೃಷ್ಟಿಸಿತು’ ಎಂದು ಅವರು
ದೂರಿದರು.

‘ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೂ ಮೂರನೇ ಹಂತದ ಸ್ಥಳೀಯ ಆಡಳಿತ ವ್ಯವಸ್ಥೆ ಬಗ್ಗೆ ಒಲವಿಲ್ಲ. ಕಾನೂನಿನಲ್ಲಿ ಇರುವ ಲೋಪಗಳನ್ನೇ ಅವಕಾಶಗಳನ್ನಾಗಿ ಮಾಡಿಕೊಂಡು ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ವಿಪರೀತ ಮಳೆ ಸುರಿದು, ಎಷ್ಟೋ ಪ್ರದೇಶಗಳು ಜಲಾವೃತಗೊಂಡವು. ರಸ್ತೆಗಳಲ್ಲಿ ವಿಪರೀತ ಗುಂಡಿಗಳಾದವು. ಹೀಗೆ ಆದಾಗ ಪ್ರಶ್ನಿಸುವುದಾದರೂ ಯಾರನ್ನು? ಬೆಂಗಳೂರಿನಲ್ಲಿ 28 ಶಾಸಕರಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ನಿರ್ಲಕ್ಷಿಸಿದ ಮಾತ್ರಕ್ಕೆ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ಬಂದೀತು ಎಂಬ ಆತಂಕ ಮುಖ್ಯಮಂತ್ರಿಗೆ ಇರುವುದಿಲ್ಲ. ಈ ಬಾರಿ ಬಿಬಿಎಂಪಿ ಚುನಾವಣೆಯನ್ನು ಇಷ್ಟು ಮುಂದೂಡಿರುವುದು ಜನರಿಗೆ ಪಾಠವಾಗಬೇಕು’ ಎನ್ನುವುದು ‘ಜನಾಗ್ರಹ’ ಸಂಸ್ಥೆಯ ಶ್ರೀನಿವಾಸ ಅಲವಿಲ್ಲಿ ಅವರ ಪ್ರತಿಕ್ರಿಯೆ.

ಹೈಕೋರ್ಟ್‌ ನಿರ್ದೇಶನದಂತೆ ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆದೀತೆ ಎಂಬ ಪ್ರಶ್ನೆ ಈಗಲೂ ನಾಗರಿಕ ಸಂಘಟನೆಗಳಿಗೆ
ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು