ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಡಾರ್‌ನಿಂದ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಳ: ಅಶೀಶ್‌ ವರ್ಮ ಎಚ್ಚರಿಕೆ

Last Updated 19 ಫೆಬ್ರುವರಿ 2020, 21:33 IST
ಅಕ್ಷರ ಗಾತ್ರ

ಬೆಂಗಳೂರು: ‘ಎಲಿವೇಟೆಡ್‌ ಕಾರಿಡಾರ್‌ ಯೋಜನೆ ನಗರದ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದಿಲ್ಲ. ಅದರ ಬದಲು ಈ ಸಮಸ್ಯೆ ಮತ್ತಷ್ಟು ಹೆಚ್ಚುವುದಕ್ಕೆ ಕಾರಣವಾಗಲಿದೆ’ ಎಂದು ಭಾರತೀಯ ವಿಜ್ಞಾನ ಸ‌ಂಸ್ಥೆಯ (ಐಐಎಸ್ಸಿ)ವಿಜ್ಞಾನಿ ಅಶೀಶ್‌ ವರ್ಮ ಎಚ್ಚರಿಸಿದ್ದಾರೆ.

‘ದಟ್ಟಣೆ ಕಡಿಮೆ ಮಾಡಲು ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಖಾಸಗಿ ವಾಹನ ರಸ್ತೆಗಿಳಿಯುವುದನ್ನು ತಪ್ಪಿಸುವುದು. ಆದರೆ, ಈ ಯೋಜನೆ ಖಾಸಗಿ ವಾಹನ ಬಳಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದರು.

‘ಇಂತಹ ಯೋಜನೆಗಳು ಸಂಚಾರದಟ್ಟಣೆ ಸಮಸ್ಯೆ ಬಗೆಹರಿಸುವುದಿಲ್ಲ ಎಂಬುದನ್ನು ನಗರದಲ್ಲಿ 20 ವರ್ಷಗಳಲ್ಲಿ ಜಾರಿಯಾಗಿರುವ ಯೋಜನೆಗಳೇ ತೋರಿಸಿಕೊಟ್ಟಿವೆ. ಇಂತಹ ಸೌಕರ್ಯಗಳು ಸಂಚಾರ ದಟ್ಟಣೆಗೆ ಪರಿಹಾರ ಒದಗಿಸುತ್ತಿದ್ದರೆ ಬೆಂಗಳೂರಿಗೆ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ನಗರ ಎಂಬ ಹಣೆಪಟ್ಟಿ ಏಕೆ ಬರುತ್ತಿತ್ತು’ ಎಂದು ಪ್ರಶ್ನಿಸಿದರು.

‘ಆಡಳಿತ ಪಕ್ಷದ ಶಾಸಕರು ಈ ಯೋಜನೆ ಜಾರಿಗೆ ಒತ್ತಾಯಿಸಿರುವುದು ತೀರಾ ದುರದೃಷ್ಟಕರ. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಇಂತಹ ಭಾರಿ ಯೋಜನೆಗಳಿಗೆ ಏಕೆ ಆಸಕ್ತಿ ತೋರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಎಲ್ಲರಿಗೂ ಬೆಂಗಳೂರು ಕಾಮಧೇನು. ಅದರಿಂದ ಗರಿಷ್ಠ ಲಾಭ ಮಾಡಿಕೊಳ್ಳಲು ಎಲ್ಲರೂ ಮುಂದಾಗುತ್ತಾರೆ’ ಎಂದರು.

‘ಸರ್ಕಾರದ ಮೇಲೆ ಭರವಸೆ ಉಳಿದಿಲ್ಲ’
‘ಬಿಜೆಪಿಯವರು ಈ ಹಿಂದೆ ಈ ಯೋಜನೆಗೆ ವಿರೋಧ ಪಡಿಸಿದ್ದರು. ಹಾಗಾಗಿ ಸರ್ಕಾರ ಈ ಯೋಜನೆಯನ್ನು ಮುಂದುವರಿಸುವುದಿಲ್ಲ ಎಂದು ಭಾವಿಸಿದ್ದೆವು. ಈಗ ಈ ಸರ್ಕಾರದ ಮೇಲೂ ಭರವಸೆ ಉಳಿದಿಲ್ಲ. ಬಿಜೆಪಿಯವರು ಸರ್ಕಾರದಲ್ಲಿ ಇಲ್ಲದಿರುವಾಗ ಒಂದು ರೀತಿ ಹಾಗೂ ಇರುವಾಗ ಒಂದು ರೀತಿ ಮಾತನಾಡುತ್ತಾರೆ’ ಎಂದು ಸಿಟಿಜನ್ಸ್‌ ಫಾರ್ ಬೆಂಗಳೂರು ಸಂಘಟನೆ ದೂರಿದೆ.

‘ಎಲಿವೇಟೆಡ್‌ ಕಾರಿಡಾರ್‌ ಜನರಿಗೆ ಬೇಕಿಲ್ಲ. ಆದರೆ, ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ.. ಈ ಮೂರು ಪಕ್ಷಗಳಿಗೂ ಕಾರಿಡಾರ್‌ ಬೇಕು. ಜನರಿಗೆ ಬೇಕಿರುವ ಸಾರ್ವಜನಿಕ ಸಾರಿಗೆ ಮೇಲೆ ಹೂಡಿಕೆ ಮಾಡಲು ಸರ್ಕಾರಗಳ ಬಳಿ ಹಣವಿಲ್ಲ.ಪ್ರಯೊಜನಕ್ಕೆ ಬಾರದ ಇಂತಹ ಯೋಜನೆಗಳಿಗೆ ಖರ್ಚು ಮಾಡಲು ಹಣದ ಕೊರತೆ ಎದುರಾಗುವುದಿಲ್ಲ’ ಎಂದು ಸಿಎಫ್‌ಬಿ ಸಂಚಾಲಕಿಶಿಲ್ಪಾ ರಾವ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಿಜೆಪಿಯಲ್ಲೇ ಅಸಮಾಧಾನ
ಬಿಜೆಪಿ ನಗರ ದಕ್ಷಿಣ ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಅವರು ಎಲಿವೇಟೆಡ್ ಕಾರಿಡಾರ್‌ ಯೋಜನೆಯನ್ನು ಈ ಹಿಂದೆ ಬಲವಾಗಿ ವಿರೋಧಿಸಿದ್ದರು. ಈಗ ತಮ್ಮ ಪಕ್ಷದ ಶಾಸಕರೇ ಈ ಯೋಜನೆ ಜಾರಿಗೆ ಒತ್ತಾಯಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಯೋಜನೆಯ ಅಂದಾಜುಪಟ್ಟಿಯೇ ಲೋಪಗಳಿಂದ ಕೂಡಿದೆ. ಅದನ್ನು ಸರಿಪಡಿಸಿ, ಆಮೇಲೆ ಇದನ್ನು ಜಾರಿಗೊಳಿಸಬೇಕೋ ಬೇಡವೋ ಎಂಬ ಬಗ್ಗೆ ಜನರ ಅಭಿಪ್ರಾಯ ಪಡೆದ ಬಳಿಕವೇ ಈ ಯೋಜನೆ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನಾವು ಮೇಖ್ರಿ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಯೋಜನೆಗಷ್ಟೇ ವಿರೋಧ ವ್ಯಕ್ತಪಡಿಸಿದ್ದೆವು. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಲಿವೇಟೆಡ್‌ ಕಾರಿಡಾರ್‌ ಅನಿವಾರ್ಯ’ ಎಂದು ಶಾಸಕ ಸತೀಶ ರೆಡ್ಡಿ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT