ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಕೆರೆ: ಮೀನುಗಾರರು ಕಂಗಾಲು

ತಿಂಗಳೊಳಗೆ ಶುಲ್ಕ ಪಾವತಿಸುವಂತೆ ಮೀನುಗಾರಿಕಾ ಇಲಾಖೆ ನೋಟಿಸ್‌
Last Updated 7 ಏಪ್ರಿಲ್ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿಲಿನ ಬೇಗೆಯಿಂದಾಗಿ ನಗರದ ಬಹುತೇಕ ಕೆರೆಗಳ ಒಡಲು ಬರಿದಾಗಿದ್ದು, ಇವುಗಳಲ್ಲಿನ ಜಲಚರಗಳಿಗೂ ಕುತ್ತು ಬಂದೊದಗಿದೆ. ಈ ಕೆರೆಗಳಲ್ಲಿ ಮೀನು ಕೃಷಿ ನಡೆಸಲು ಗುತ್ತಿಗೆ ಪಡೆದ ಮೀನುಗಾರಿಕಾ ಕುಟುಂಬಗಳು ಗುತ್ತಿಗೆಯ ಶುಲ್ಕವನ್ನೂ ಪಾವತಿಸಲಾಗದೆ ಕಂಗಾಲಾಗಿವೆ.

ನಗರದಲ್ಲಿ ಸಣ್ಣ ಹಾಗೂ ದೊಡ್ಡ ಕೆರೆಗಳು ಸೇರಿದಂತೆ ಒಟ್ಟು 210 ಕೆರೆಗಳಿವೆ. ಪುಟ್ಟೇನಹಳ್ಳಿ, ವರ್ತೂರು, ದೇವರಬೀಸನಹಳ್ಳಿ, ಹುಳಿಮಾವು, ಸಿಂಗಸಂದ್ರ, ಕೆಂಪಾಂಬುಧಿ, ಹೇರೋಹಳ್ಳಿ, ಉಲ್ಲಾಳ, ಯಲಹಂಕ, ಕೋಡಿಗೆಹಳ್ಳಿ ಕೆರೆ ಸೇರಿದಂತೆ ವಿವಿಧ ಕೆರೆಗಳಲ್ಲಿ 350 ಜನ ಗುತ್ತಿಗೆದಾರರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ಕೆರೆಗಳಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡಿದೆ. ಈ ಪೈಕಿ ಹಲವು ಕೆರೆಗಳು ಕಲುಷಿತವಾಗಿವೆ. ಮೀನುಗಳು ಸತ್ತ ಪ್ರಕರಣಗಳೂ ವರದಿಯಾಗಿವೆ.

ಮೀನು ಮಾರಾಟದಿಂದ ಬರುವ ಅಲ್ಪ ಆದಾಯದಲ್ಲಿಯೇ ಈ ಗುತ್ತಿಗೆದಾರರ ಕುಟುಂಬಗಳು ಬದುಕುತ್ತಿವೆ. ಇತ್ತೀಚೆಗೆ ಮೀನುಗಾರಿಕಾ ಇಲಾಖೆ ಗುತ್ತಿಗೆ ಶುಲ್ಕ ಪಾವತಿಸುವಂತೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಿದೆ. ಗುತ್ತಿಗೆದಾರರು ಶುಲ್ಕ ‍ಪಾವತಿಸದಿದ್ದರೆ, ನೇರ ಗುತ್ತಿಗೆ ಕರೆಯಬೇಕು ಎನ್ನುವ ನಿಯಮವಿದೆ. ಆದ್ದರಿಂದ ಮೀನುಗಾರರ ಕುಟುಂಬಗಳು ಚಿಂತೆಗೀಡಾಗಿವೆ.

‘ಈಗ ನಗರದ ಕೆರೆಗಳಲ್ಲಿ ನೀರಿಲ್ಲ. ಮೀನಿಗೆ ಬೇಕಾದ ಗೊಬ್ಬರ ಹಾಗೂ ಅಕ್ಕಿ, ಗೋಧಿಯನ್ನು ಕೆರೆಯಲ್ಲಿಹಾಕಬಾರದು ಎನ್ನುವ ಸರ್ಕಾರದ ನಿಯಮವಿದೆ. ಇದರಿಂದ ಮೀನುಗಳು ಬೆಳೆಯುತ್ತಿಲ್ಲ. ಚಿಕ್ಕ ಮೀನುಗಳಿಗೆ ಬೆಲೆ ಇಲ್ಲ.ಕೆರೆಯಲ್ಲಿ ಸಿಗುವ ಅಲ್ಪಸ್ವಲ್ಪ ಮೀನು ಮಾರಿ ಬದುಕಿನ ಬಂಡಿಯನ್ನು ಎಳೆಯುತ್ತಿದ್ದೇವೆ’ ಎಂದು ಮೀನುಗಾರರು ಅಳಲು ತೋಡಿಕೊಳ್ಳುತ್ತಾರೆ.

‘ಈ ಬಾರಿ ಬೇಸಿಗೆಯಲ್ಲಿ ಒಂದು ಮಳೆಯೂ ಆಗಿಲ್ಲ. ಕೆರೆಯಲ್ಲಿ ನೀರು ಬತ್ತಿ ಹೋಗಿದ್ದು, ಬರದ ಛಾಯೆ ಆವರಿಸಿದೆ. ಈ ನಡುವೆಗುತ್ತಿಗೆ ಶುಲ್ಕವನ್ನು ತಿಂಗಳೊಳಗೆ ಪಾವತಿಸುವಂತೆ ಮೀನುಗಾರಿಕಾ ಇಲಾಖೆ ತಾಕೀತು ಮಾಡಿದೆ. ಮೀನು ಮಾರಾಟದಿಂದ ಬರುವ ಹಣ ಜೀವನ ನಿರ್ವಹಣೆಗೂ ಸಾಕಾಗುವುದಿಲ್ಲ. ಹೀಗಿರುವಾಗ ಗುತ್ತಿಗೆ ಕಟ್ಟಲುಹಣ ಎಲ್ಲಿಂದ ತರುವುದು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೀನುಗಾರರೊಬ್ಬರು ಪ್ರಶ್ನಿಸಿದರು.

‘ತಿಂಗಳೊಳಗಾಗಿ ಶುಲ್ಕ ಪಾವತಿಸಿ, ಮೀನು ಹಿಡಿಯುವ ಹಕ್ಕನ್ನು ನವೀಕರಿಸಿಕೊಳ್ಳಬೇಕು. ಇಲ್ಲದಿದ್ದರೆ, ನಿಮ್ಮ ಗುತ್ತಿಗೆಯನ್ನು ರದ್ದುಪಡಿಸಿ, ನೇರ ಗುತ್ತಿಗೆ ಕರೆಯಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಎಲ್ಲಿ ಮೀನು ಹಿಡಿಯುವ ಹಕ್ಕನ್ನು ಕಳೆದುಕೊಳ್ಳುತ್ತೇವೋ ಎಂಬ ಭಯ ಉಂಟಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ಕಳೆದ ವರ್ಷ ಸಾಲ ಮಾಡಿ ಗುತ್ತಿಗೆ ಶುಲ್ಕ ಪಾವತಿಸಿದ್ದೆವು. ಕೊನೆಗೆ ನಮಗೆ ನಷ್ಟ ಉಂಟಾಯಿತು.ಮೀನು ಮಾರಾಟದಿಂದ ಬಂದ ಹಣ ಸಾಲ ತೀರಿಸಲೂ ಸಾಕಾಗಲಿಲ್ಲ’ ಎಂದು ಮತ್ತೊಬ್ಬ ಮೀನುಗಾರರು ಅಳಲು ತೋಡಿಕೊಂಡರು.

‘ಕೆರೆಗಳು ಬತ್ತಿ ಹೋದ್ದರಿಂದ ಬೆಂಗಳೂರು ನಗರ ಜಿಲ್ಲೆಯನ್ನೂ ಬರಗಾಲ ಪೀಡಿತ ಎಂದು ಘೋಷಿಸ ಬೇಕು. ಮೀನುಕೃಷಿಗೆ ಕೆರೆ ಹಂಚಿಕೆ ಮಾಡಲು ನೇರ ಗುತ್ತಿಗೆ ಕರೆಯಬಾರದು. ಗುತ್ತಿಗೆ ಶುಲ್ಕದ ಪಾವತಿಯಿಂದ ಒಂದು ವರ್ಷದ ಮಟ್ಟಿಗೆ ವಿನಾಯಿತಿ ನೀಡಬೇಕು. ಗುತ್ತಿಗೆ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT