ಬುಧವಾರ, ಮಾರ್ಚ್ 3, 2021
29 °C
ಹೆಸರಘಟ್ಟದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಪರಿಸರವಾದಿಗಳ ವಿರೋಧ

ಪರಿಸರ ಸೂಕ್ಷ್ಮಪ್ರದೇಶದಲ್ಲಿ ಚಿತ್ರರಂಗದ ಚಟುವಟಿಕೆ ಬೇಡ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರಘಟ್ಟದ 150 ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿರುವ ರಾಜ್ಯಸರ್ಕಾರದ ನಿಲುವಿಗೆ ಪರಿಸರವಾದಿಗಳು, ವಿಜ್ಞಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

‘ನಗರದ ವಾಯವ್ಯ ಭಾಗದಲ್ಲಿರುವ ಹೆಸರಘಟ್ಟ ಹುಲ್ಲುಗಾವಲು ಪ್ರದೇಶ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳಿಗೆ ಆಶ್ರಯತಾಣ ಇದು. ಹವಾಮಾನ ಬದಲಾವಣೆ ಮತ್ತು ನಗರೀಕರಣದ ದುಷ್ಪರಿಣಾಮವನ್ನು ಎದುರಿಸಲು ನಮಗಿರುವ ಏಕೈಕ ಅಸ್ತ್ರ ಈ ಹುಲ್ಲುಗಾವಲು ಪ್ರದೇಶ. ಇಲ್ಲಿ ಚಿತ್ರನಗರಿ ನಿರ್ಮಿಸಿದರೆ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ’ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಮಹೇಶ್‌ ಭಟ್. 

‘ಈ ಪ್ರದೇಶದಲ್ಲಿ ಹಲವು ಜಾತಿಯ ಪಕ್ಷಿಗಳು, ಸಸ್ತನಿಗಳು ಮತ್ತು ಸರೀಸೃಪಗಳಿವೆ. ಈ ಹಿಂದೆಯೂ ಇಲ್ಲಿ ಚಿತ್ರನಗರಿ ನಿರ್ಮಾಣದ ಪ್ರಸ್ತಾವ ಬಂದಿದ್ದಾಗ, ಈ ಹುಲ್ಲುಗಾವಲು ಪ್ರದೇಶದಲ್ಲಿ ಕೈಗೊಳ್ಳುವ ಯಾವುದೇ ಅಭಿವೃದ್ಧಿಯು ಈ ಪ್ರದೇಶದ ವಿವಿಧ ಪ್ರಾಣಿ ಸಾಕಣೆ ಕೇಂದ್ರಗಳಿಗೆ ಜೈವಿಕ ಅಸುರಕ್ಷತೆಯ ಅಪಾಯ ಉಂಟಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆಯೇ ಹೇಳಿತ್ತು’ ಎಂದು ನೆನಪಿಸಿಕೊಂಡರು. 

‘ಹೆಸರಘಟ್ಟ ಕೆರೆಯು 1994ರವರೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು.  ಅಲ್ಲದೇ, ಅರ್ಕಾವತಿ ನದಿಯ ಪ್ರಮುಖ ಜಲಾನಯನ ಪ್ರದೇಶವಾಗಿದ್ದರಿಂದ ಇಲ್ಲಿ ಚಿತ್ರನಗರಿ ನಿರ್ಮಾಣ ಪ್ರಸ್ತಾವವನ್ನು ವಿರೋಧಿಸಿ, ಅರ್ಕಾವತಿ ಮತ್ತು ಕುಮುದ್ವತಿ ನದಿ ಪುನಃಶ್ಚೇತನ ಸಮಿತಿಯು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಹೇಳಿತ್ತು. ಇದನ್ನು ಆಗಲೂ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರೇ ಸದನದಲ್ಲಿ ಹೇಳಿದ್ದರು’ ಎಂದರು. 

‘ಈ ಪ್ರಸ್ತಾವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದೂ ನ್ಯಾಯಾಲಯ ಹೇಳಿತ್ತು. ಆದರೆ, ಈಗ ಅದೇ ಯಡಿಯೂರಪ್ಪನವರ ಸರ್ಕಾರ ಮತ್ತೆ ಹೆಸರಘಟ್ಟದಲ್ಲಿಯೇ ಚಿತ್ರನಗರಿ ನಿರ್ಮಾಣ ಮಾಡುವ ಮಾತನಾಡಿರುವುದು ಅಚ್ಚರಿ ತಂದಿದೆ. ಇದೊಂದು ಮೂರ್ಖತನದ ನಿರ್ಧಾರ’ ಎಂದು ಮಹೇಶ್‌ ಭಟ್‌ ಅಸಮಾಧಾನ ವ್ಯಕ್ತಪಡಿಸಿದರು. 

’ಹೆಸರಘಟ್ಟದಲ್ಲಿ ಪಶು ಸಂಗೋಪನಾ ಇಲಾಖೆಯ 450 ಎಕರೆ ಭೂಮಿ ಇದ್ದು, ಅದರಲ್ಲಿ 150 ಎಕರೆಯನ್ನು ಫಿಲಂ ಸಿಟಿ ನಿರ್ಮಾಣಕ್ಕೆ ನೀಡಲಾಗುವುದು. ಅಲ್ಲಿ ಸಂಪರ್ಕ ರಸ್ತೆಯೊಂದನ್ನು ನಿರ್ಮಿಸಿ ಆ ಜಾಗವನ್ನು ಫಿಲಂ ಸಿಟಿಗೆ ಹಸ್ತಾಂತರ ಮಾಡಲಾಗುವುದು. ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ತ್ವರಿತವಾಗಿ ಫಿಲಂ ಸಿಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು‘ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಇತ್ತೀಚೆಗೆ ಹೇಳಿದ್ದರು. 

‘ಕೋವಿಡ್‌ನಂತಹ ರೋಗಗಳಿಗೆ ಮೂಲ’
‘ಪರಿಸರ ಎಂದರೆ ಮರ–ಗಿಡಗಳು ಮಾತ್ರವಲ್ಲ. ಭೂಮಿಯ ಮೇಲಿನಂತೆ, ಭೂಮಿಯ ಒಳಗೂ ನದಿ ಹರಿಯಲು ಅಥವಾ ಅಂತರ್ಜಲ ವೃದ್ಧಿಯಾಗಲು ಹೆಸರಘಟ್ಟದಂತಹ ಹುಲ್ಲುವಾಗವಲು ಪ್ರದೇಶ ಅತಿ ಅವಶ್ಯಕ. ಇಂತಹ ಪ್ರದೇಶದಲ್ಲಿ ಮಾನವ ಚಟುವಟಿಕೆ ಹೆಚ್ಚಾದರೆ, ಕೊರೊನಾದಂತಹ ಸೋಂಕು ಹರಡುವುದಕ್ಕೆ ಅವಕಾಶ ನೀಡಿದಂತಾಗುತ್ತದೆ’ ಎನ್ನುತ್ತಾರೆ ಪರಿಸರ ವಿಜ್ಞಾನಿ ಕೆ.ಎಸ್. ಶೇಷಾದ್ರಿ. 

‘ಗಿಡ–ಮರಗಳನ್ನು ಕಡಿದು ಮನುಷ್ಯ ಅರಣ್ಯಪ್ರದೇಶದೊಳಗೆ ಹೋದಾಗ, ಪ್ರಾಣಿಗಳಲ್ಲಿನ ರೋಗಗಳು ಅವನಿಗೂ ಕಾಣಿಸಿಕೊಳ್ಳುತ್ತವೆ. ಎಬೊಲಾ ರೋಗ ಹರಡಿದ್ದು ಹೀಗೆಯೇ. ಇತಿಹಾಸದಿಂದ ನಾವು ಪಾಠ ಕಲಿಯಬೇಕಾದ ಅವಶ್ಯಕತೆ ಇದೆ’ ಎಂದು ಅವರು ಹೇಳುತ್ತಾರೆ.

ಹೆಸರಘಟ್ಟ ಪ್ರದೇಶದ ಮಹತ್ವ 

* ಹೆಸರಘಟ್ಟದ ಹುಲ್ಲುಗಾವಲು ಪರಿಸರ ಸೂಕ್ಷ್ಮ ವಲಯ 

* ಅಂತರ್ಜಲ ವೃದ್ಧಿಗೆ ಇಂತಹ ಹುಲ್ಲುಗಾವಲು ಪ್ರದೇಶ ತೀರಾ ಅವಶ್ಯಕ 

* ದಕ್ಷಿಣ ಭಾರತದ ಪ್ರಮುಖ ಕನ್ನೌಲ್‌ ಹಕ್ಕಿ (ಲೆಸ್ಸೆರ್‌ ಫ್ಲೊರಿಕನ್), ಜವುಗು ಸೆಳೆವ (ಮಾರ್ಷ್‌ ಹ್ಯಾರಿಯರ್), ಮೊಂಟಾಗು ಹ್ಯಾರಿಯರ್, ನೆಲಗುಬ್ಬಿ (ಲಾರ್ಕ್‌‌) ಸೇರಿದಂತೆ 120ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಇಲ್ಲಿವೆ 

* ರಷ್ಯಾ–ಮಧ್ಯ ಏಷ್ಯಾದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ

* ಕಾಡುಪಾಪ, ಗುಳ್ಳೇನರಿ, ಮುಂಗುಸಿಯಂತಹ ಹಲವು ವನ್ಯಜೀವಿಗಳ ವಾಸಸ್ಥಾನ

* ಅಪರೂಪದ ಲೈಲ್ಯಾಕ್‌ ಸಿಲ್ವರ್‌ ಲೈನ್‌ ಚಿಟ್ಟೆಗಳು ಈ ಪ್ರದೇಶದಲ್ಲಿವೆ

ಚಿತ್ರನಗರಿ ಏಕೆ ಬೇಕು?

* ಈಗಲೂ ಹಲವು ಸಿನಿಮಾ ಚಿತ್ರೀಕರಣಕ್ಕೆ ಹೈದರಾಬಾದ್‌ಗೆ ಹೋಗಬೇಕಾಗಿದೆ 

* ಎಲ್ಲ ನಿರ್ಮಾಪಕರಿಗೂ ಹೈದರಾಬಾದ್‌ಗೆ ಹೋಗಲು ಸಾಧ್ಯವಿಲ್ಲ

* ಚಿತ್ರೀಕರಣಕ್ಕೆ ಬೇರೆ ರಾಜ್ಯಕ್ಕೆ ಹೋಗುವುದು ಆರ್ಥಿಕವಾಗಿ ಹೊರೆ

* ಕಂಠೀರವ ಸ್ಟುಡಿಯೊದಲ್ಲಿ ಹೆಚ್ಚು ಸೌಕರ್ಯ ಕೊರತೆ ಇದೆ

* ಒಂದು ದೊಡ್ಡ ಸೆಟ್‌ ಹಾಕಲು ವಿಶಾಲವಾದ ಜಾಗವಿಲ್ಲ 

* ಸಿನಿಮಾ ಚಿತ್ರೀಕರಣಕ್ಕೆ ಉದ್ಯಾನದಂತಹ ವಾತಾವರಣವೂ ಬೇಕಾಗುತ್ತದೆ.

**
ಪರಿಸರ ಸಂರಕ್ಷಣೆ ಮತ್ತು ಕಾನೂನು ಎರಡನ್ನೂ ಗಮನದಲ್ಲಿಟ್ಟುಕೊಂಡೇ ಮುಂದುವರಿಯಬೇಕಾಗುತ್ತದೆ. ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದಾದರೆ, ಚರ್ಚಿಸಿ ತೀರ್ಮಾನಿಸಲಾಗುವುದು.
–ಡಾ. ಸಿ.ಎನ್. ಅಶ್ವತ್ಥನಾರಾಯಣ, ಉಪಮುಖ್ಯಮಂತ್ರಿ 

*
ಹೆಸರಘಟ್ಟದಲ್ಲಿಯೇ ಚಿತ್ರನಗರಿ ನಿರ್ಮಾಣವಾಗಲಿ ಎಂಬ ಒತ್ತಾಯ ನಮ್ಮದಲ್ಲ. ಬೇರೆ ಎಲ್ಲಿಯೇ ಆಗಲಿ, ಆದರೆ ಶೀಘ್ರವಾಗಿ ಚಿತ್ರನಗರಿ ನಿರ್ಮಾಣವಾಗಬೇಕು ಎಂಬ ಬೇಡಿಕೆ ನಮ್ಮದು. 
–ಡಿ.ಆರ್. ಜಯರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು