ಬೆಂಗಳೂರು: ‘ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಮತ್ತು ಜಾತಿಗಳಲ್ಲಿ ಹಂಚಿ ಹೋಗಿರುವ ಅಲೆಮಾರಿ ಸಮುದಾಯಗಳು ಅಸ್ಪೃಶ್ಯರಷ್ಟೇ ಅಲ್ಲ, ಅಗೋಚರರೂ ಆಗಿದ್ದಾರೆ. ಎಲ್ಲರ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಅಲೆಮಾರಿಗಳ ಅಭಿವೃದ್ಧಿಗಾಗಿ ಶಾಶ್ವತ ಅಲೆಮಾರಿ ಆಯೋಗ ಸ್ಥಾಪಿಸಬೇಕು’ ಎಂದು ಪತ್ರಕರ್ತ ಇಂದೂಧರ ಹೊನ್ನಾಪುರ ಆಗ್ರಹಿಸಿದರು.
‘ದಮನಿತ ಅಲೆಮಾರಿಗಳ ಸವಾಲುಗಳು ಮತ್ತು ಪರಿಹಾರ’ ಕುರಿತು ನಡೆದ ರಾಜ್ಯಮಟ್ಟದ ಚಿಂತನಾ ಮಂಥನ ವಿಚಾರಗೋಷ್ಠಿಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಎಂದು ಎರಡು ವರ್ಗಗಳಿವೆ. ಅಲೆಮಾರಿಗಳ ಅಭಿವೃದ್ಧಿಗಾಗಿ ಮೂರನೇ ವರ್ಗ ಮಾಡಬೇಕು. ರಾಜಕೀಯ ಮೀಸಲಾತಿ ಸಹಿತ ಎಲ್ಲ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.
ದಲಿತ ಚಳವಳಿಗಳು ಅಸ್ಪೃಶ್ಯ ಸಮುದಾಯಗಳಲ್ಲಿ ಅರಿವು ಮೂಡಿಸಿವೆ. ಆದರೆ, ತಬ್ಬಲಿ ಸಮುದಾಯಗಳಾದ ಅಲೆಮಾರಿಗಳಲ್ಲಿ ಇನ್ನೂ ಅರಿವು ಮೂಡಿಸಲು ಸಾಧ್ಯವಾಗಿಲ್ಲ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಯಲ್ಲಿ ಯಾವ ಅಲೆಮಾರಿ ಸಮುದಾಯಗಳಿವೆ ಎಂಬುದು ಅಲೆಮಾರಿಗಳಿಗೆ ಗೊತ್ತಿಲ್ಲ. ಭಿಕ್ಷೆ ಬೇಡಿದ್ದು ಸಾಕು. ಇನ್ನಾದರೂ ಹಕ್ಕುಗಳನ್ನು ಕೇಳಿ, ಸೌಲಭ್ಯ ಪಡೆದು ಮುಂದಕ್ಕೆ ಬರಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ಬಂದ ಬಳಿಕ 1950ರಲ್ಲಿ ಪರಿಶಿಷ್ಟ ಜಾತಿಯ ಪಟ್ಟಿ ಮಾಡಿದಾಗ ಆದಿದ್ರಾವಿಡ, ಆದಿಕರ್ನಾಟಕ, ಕೊರಚ, ಕೊರಮ, ಲಂಬಾಣಿ, ಭೋವಿ ಇಷ್ಟೇ ಜಾತಿಗಳಿದ್ದವು. ಆದಿದ್ರಾವಿಡ, ಆದಿಕರ್ನಾಟಕ ಎಂಬುದೆಲ್ಲ ಒಂದೊಂದು ಜಾತಿ ಅಲ್ಲ. ಹಲವು ಜಾತಿಗಳು ಸೇರಿವೆ. ತಮ್ಮ ಜಾತಿಯನ್ನು ಹೇಳಿಕೊಳ್ಳಲಾರದೇ ಹೀಗೆ ಆಗಿವೆ ಎಂದು ಗೊತ್ತಾದ ಮೇಲೆ ಮತ್ತೆ 1956ರಲ್ಲಿ ಪಟ್ಟಿ ಮಾಡಲಾಯಿತು. ಆಗ ಎಸ್‌ಸಿ ಜಾತಿಗಳ ಸಂಖ್ಯೆ 76ಕ್ಕೆ ಏರಿತು. ಈಗ 101 ಇವೆ. ಒಬಿಸಿ, ಎಸ್‌ಸಿ, ಎಸ್‌ಟಿ ಹೀಗೆ ಯಾವುದೇ ವರ್ಗದಲ್ಲಿ ಜಾತಿಗಳು ಎಷ್ಟೇ ಇದ್ದರೂ ಆಯಾ ಗುಂಪಿನಲ್ಲಿ ಪ್ರಬಲವಾಗಿರುವ ಜಾತಿಗಳೇ ಸೌಲಭ್ಯಗಳನ್ನು ಪಡೆಯುತ್ತಿವೆ. ಎಸ್‌ಸಿಯಲ್ಲಿರುವ 101 ಸಮುದಾಯಗಳಲ್ಲಿ ಐದಾರು ಜಾತಿಗಳನ್ನು ಬಿಟ್ಟರೆ ಉಳಿದ ಸಮುದಾಯಗಳಿಗೆ ಸೌಲಭ್ಯ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಲೆಮಾರಿ ಸಮುದಾಯಗಳು ಸಣ್ಣತನ, ಅಸೂಯೆಗಳನ್ನು ಬಿಟ್ಟು ಪರಸ್ಪರ ಹೊಂದಾಣಿಕೆ, ಗೌರವ ಮತ್ತು ವಿಶ್ವಾಸ ಬೆಳೆಸಿಕೊಂಡು ಒಗ್ಗಟ್ಟಾಗಿ ಧ್ವನಿ ಎತ್ತಿದರಷ್ಟೇ ಸೌಲಭ್ಯ ಸಿಗಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ರವಿ ಮಾಕಳಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜು ತಂಗಡಗಿ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ, ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಅಧ್ಯಕ್ಷ ವೆಂಕಟರಮಣಯ್ಯ, ಆದರ್ಶ್ ಯಲ್ಲಪ್ಪ, ರಾಜಾನಾಯ್ಕ, ಕಿರಣ್ ಕುಮಾರ್ ಸಹಿತ ವಿವಿಧ ಅಲೆಮಾರಿ ಸಮುದಾಯಗಳ ಮುಖಂಡರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.