ಭಾನುವಾರ, ಜನವರಿ 19, 2020
25 °C
ಬಿಬಿಎಂಪಿ: ಆಡಳಿತ ಪಕ್ಷಕ್ಕೆ ತಲೆನೋವು

ಉಚ್ಚಾಟಿತ ಸದಸ್ಯರಿಗೆ ಸ್ಥಾಯಿ ಸಮಿತಿ ಮೇಲೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಉಪಚುನಾವಣೆ ನಡೆದ ನಾಲ್ಕು ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಮೂವರ ಬೆಂಬಲಿಗರಾಗಿರುವ ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಕ್ಷೇತರ ಸದಸ್ಯರಿಗೆ ಸ್ಥಾಯಿ ಸಮಿತಿಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆಯನ್ನು ಪಕ್ಷ ನೀಡಿತ್ತು. ಈಗ ಪಕ್ಷೇತರ ಸದಸ್ಯರ ಜೊತೆಗೆ, ಹೊಸ ಶಾಸಕರ ಬೆಂಬಲಿಗ ಸದಸ್ಯರಿಗೂ ಸಮಿತಿಗಳಲ್ಲಿ ಆದ್ಯತೆ ನೀಡಿದರೆ ಬಿಜೆಪಿಯ ಸದಸ್ಯರಿಗೆ ಅನ್ಯಾಯವಾಗಲಿದೆ ಎಂದು ಕೆಲ ಸದಸ್ಯರು ಆತಂಕ ತೋಡಿಕೊಂಡಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ ಐದು ವಾರ್ಡ್‌ಗಳಲ್ಲಿ ಮೂವರು ಕಾಂಗ್ರೆಸ್‌ ಸದಸ್ಯರಿದ್ದರು. ಈ ಪೈಕಿ ಎಸ್‌.ಟಿ.ಸೋಮಶೇಖರ್ ಜೊತೆ ಗುರುತಿಸಿಕೊಂಡಿದ್ದ ಹೇರೋಹಳ್ಳಿ ವಾರ್ಡ್‌ ಸದಸ್ಯ ರಾಜಣ್ಣ, ಹೆಮ್ಮಿಗೆಪುರ ವಾರ್ಡ್‌ ಸದಸ್ಯ ಆರ್ಯ ಶ್ರೀನಿವಾಸ್ ಅವರನ್ನು ಕಾಂಗ್ರೆಸ್‌ ಉಚ್ಚಾಟನೆ ಮಾಡಿತ್ತು.  ಕೆ.ಆರ್‌.ಪುರ ಕ್ಷೇತ್ರದಲ್ಲಿ ಒಂಬತ್ತು ವಾರ್ಡ್‌ಗಳಿದ್ದು ಆರರಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರತಿನಿಧಿಸು
ತ್ತಿದ್ದರು. ಇವರಲ್ಲಿ ಬೈರತಿ ಬಸವರಾಜು ಜೊತೆ ಗುರುತಿಸಿಕೊಂಡ ಕಾರಣಕ್ಕೆ ಬಸವನಪುರ ವಾರ್ಡ್ ಸದಸ್ಯ ಜಯಪ್ರಕಾಶ್, ದೇವಸಂದ್ರ ವಾರ್ಡ್‌ನ ಶ್ರೀಕಾಂತ್, ಎ.ನಾರಾಯಪುರದ ಸುರೇಶ್, ವಿಜ್ಞಾನ ನಗರ ವಾರ್ಡ್‌ನ ಎಚ್.ಜಿ.ನಾಗರಾಜ್ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ.

ಶಿವಾಜಿನಗರ ಕ್ಷೇತ್ರದ ಜಯಮಹಲ್ ವಾರ್ಡ್‌ನ ಸದಸ್ಯ ಎಂ.ಕೆ.ಗುಣಶೇಖರ್, ರಾಮಸ್ವಾಮಿಪಾಳ್ಯ ವಾರ್ಡ್‌ನ ನೇತ್ರಾವತಿ ಕೃಷ್ಣೇಗೌಡ ಅವರನ್ನು ಕಾಂಗ್ರೆಸ್‌ ಪಕ್ಷವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಚಾಟನೆ ಮಾಡಲಾಗಿದೆ.

ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ವೃಷಭಾವತಿನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಎಸ್‌.ಪಿ.ಹೇಮಲತಾ (ಕೆ.ಗೋಪಾಲಯ್ಯ ಅವರ ಪತ್ನಿ) ಹಾಗೂ ಮಾರಪ್ಪನಪಾಳ್ಯ ವಾರ್ಡ್‌ನ ಎಂ.ಮಹಾದೇವ ಅವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಲಾಗಿದೆ.

‘ನಮ್ಮ ನಾಯಕರನ್ನು ಬೆಂಬಲಿಸಿ ಬಂದಿದ್ದರಿಂದ ನಮ್ಮನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅವರ ಗೆಲುವಿಗಾಗಿ ಶ್ರಮಿಸಿದ ನಮಗೂ ಸಹಜವಾಗಿಯೇ ಸ್ಥಾಯಿ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನ ಪಡೆಯುವ ಆಕಾಂಕ್ಷೆ ಇದ್ದೇ ಇರುತ್ತದೆ. ನಮ್ಮ ನಾಯಕರ ಮೂಲಕ ನಾವೂ ಒತ್ತಡ ಹಾಕುತ್ತಿದ್ದೇವೆ. ನಾವು ನಿರ್ದಿಷ್ಟವಾಗಿ ಇಂತಹದ್ದೇ ಸ್ಥಾಯಿ ಸಮಿತಿ ಸ್ಥಾನ ನೀಡಿ ಎಂದು ಕೇಳುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಅಸ್ತಿತ್ವದಲ್ಲಿಲ್ಲ ಸ್ಥಾಯಿ ಸಮಿತಿ

ಪಾಲಿಕೆಯ 12 ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಡಿ.5ಕ್ಕೆ ಕೊನೆಗೊಂಡಿದ್ದರೂ ಹೊಸ ಸಮಿತಿಗಳು ರಚನೆಯಾಗಿಲ್ಲ. ಹಾಗಾಗಿ ಪಾಲಿಕೆಯಲ್ಲಿ ಸದ್ಯಕ್ಕೆ ಯಾವುದೇ ಸ್ಥಾಯಿಸಮಿತಿಗಳು ಅಸ್ತಿತ್ವದಲ್ಲಿಲ್ಲ.

‘ಸ್ಥಾಯಿ ಸಮಿತಿಗಳು ಅಸ್ತಿತ್ವದಲ್ಲಿಲ್ಲದ ಕಾರಣ ಅವುಗಳ ಅಧಿಕಾರವೆಲ್ಲವೂ ಪಾಲಿಕೆ ಕೌನ್ಸಿಲ್‌ಗೆ ವರ್ಗಾವಣೆಯಾಗುತ್ತದೆ. ನೇರವಾಗಿ ಮೇಯರ್‌ ಅವರು ಈ ಅಧಿಕಾರ ಚಲಾಯಿಸಬಹುದು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಾಯಿ ಸಮಿತಿಗಳಿಗೆ ದಿನಾಂಕ ನಿಗದಿಪಡಿಸಲು ಚುನಾವಣಾಧಿಕಾರಿ
ಯಾಗಿರುವ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ಡಿ.4ರಂದು ದಿನ ಗೊತ್ತು ಮಾಡಿದ್ದರು. ಆದರೆ, ಯಾವುದೇ ನಾಮಪತ್ರ ಸಲ್ಲಿಕೆ ಆಗದ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು. ಸಮಿತಿಗಳ ಅಧ್ಯಕ್ಷರ ಹಾಗೂ ಸದಸ್ಯರ ಸ್ಥಾನ ಹಂಚಿಕೆ ವಿಚಾರದಲ್ಲಿ ಗೊಂದಲ ಇದ್ದುದರಿಂದಲೇ ಆಡಳಿತ ಪಕ್ಷವೂ ಸ್ಥಾಯಿ ಸಮಿತಿ ಚುನಾವಣೆ ಮುಂದೂಡುವಂತೆ ಒತ್ತಡ ಹೇರಿತ್ತು. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು