ಶುಕ್ರವಾರ, ಫೆಬ್ರವರಿ 26, 2021
20 °C
ಕಿರಿಯ ವಯಸ್ಸಿನಲ್ಲಿಯೇ ಬರುತ್ತಿದೆ ಕನ್ನಡಕ

ಮೊಬೈಲ್ ಬಳಕೆಯಿಂದ ಕಣ್ಣಿಗೆ ಹಾನಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತಿಯಾಗಿ ಮೊಬೈಲ್‌ ಬಳಸುವುದೂ ಸೇರಿದಂತೆ ಆಧುನಿಕ ಉಪಕರಣಗಳ ಬಳಕೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುತ್ತಿರುವ ಆತಂಕಕಾರಿ ಸಂಗತಿ ಪತ್ತೆಯಾಗಿದೆ.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ (ಎನ್‌ಪಿಸಿಬಿ) ಅಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ದೃಷ್ಟಿದೋಷ ಸಮಸ್ಯೆಯನ್ನು ಪತ್ತೆ ಮಾಡಿ, ಅಗತ್ಯ ಚಿಕಿತ್ಸೆ ಒದಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ಶಾಲಾ ಮಕ್ಕಳ ಕಣ್ಣಿನ ಪ್ರಾಥಮಿಕ ತಪಾಸಣೆ ಕೂಡಾ ಒಂದಾಗಿದ್ದು, ಐದು ವರ್ಷದಲ್ಲಿ 5.67 ಲಕ್ಷ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಇರುವುದು ದೃಢಪಟ್ಟಿದೆ. 

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ (ಎನ್‌ಪಿಸಿಬಿ) 2020ರ ವೇಳೆಗೆ ಅಂಧತ್ವದ ಹರಡುವಿಕೆ ಪ್ರಮಾಣವನ್ನು ಶೇ 0.3ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ರಾಜ್ಯದಲ್ಲಿ ಇದಕ್ಕೆ ವಿರುದ್ಧವಾದ ಸನ್ನಿವೇಶ ನಿರ್ಮಾಣವಾಗಿದ್ದು, ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಏರಿಕೆಯತ್ತ ಮುಖ ಮಾಡಿದೆ. 

ಎನ್‌ಪಿಸಿಬಿಯಡಿ ಶಾಲೆಗಳಲ್ಲಿ ಶಿಕ್ಷಕರಿಗೆ ಕಣ್ಣಿನ ತಪಾಸಣೆ ತರಬೇತಿಯನ್ನು ನೀಡಲಾಗಿದೆ.  ಓದಿನಲ್ಲಿ ಸಮಸ್ಯೆ ಎದುರಿಸುತ್ತಿರುವ ಮಕ್ಕಳನ್ನು ಶಿಕ್ಷಕರು ಗುರುತಿಸಿ, ಹೆಚ್ಚಿನ ತಪಾಸಣೆಗೆ ನೇತ್ರಾಧಿಕಾರಿ ಬಳಿ ಕಳುಹಿಸುತ್ತಿದ್ದಾರೆ. ಆದರೆ, ಈ ರೀತಿ ನೇತ್ರಾಧಿಕಾರಿಗಳ ಬಳಿ ಹೋದ ಮಕ್ಕಳಲ್ಲಿ ಬಹುತೇಕರಿಗೆ ವೈದ್ಯರು ಕನ್ನಡಕ ಸೂಚಿಸುತ್ತಿರುವುದು ಎನ್‌ಪಿಸಿಬಿ ವರದಿಯಿಂದ ಬೆಳಕಿಗೆ ಬಂದಿದೆ.

ಕಲಿಕೆಗೆ ಅಡ್ಡಿ: ಕಣ್ಣಿನ ಸಮಸ್ಯೆಯಿಂದ ಓದಲು ಹಾಗೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 

ಇದಕ್ಕೆ ಪೂರಕ ಎಂಬಂತೆ ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಡಾ. ಅಗರವಾಲ್ಸ್ ಐ ಹಾಸ್ಪಿಟಲ್, ಶಂಕರ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಕಣ್ಣಿನ ಸಮಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದಾರೆ. 

‘ನಿರಂತರ ಓದು, ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶಾಲೆಗೆ ಸೇರುವ ಪ್ರತಿ ಮಗುವಿಗೂ ಕಡ್ಡಾಯವಾಗಿ ಕಣ್ಣಿನ ಪರೀಕ್ಷೆ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ನೀಡಲಾಗಿದೆ. ಕಣ್ಣು ಉರಿ, ಆಯಾಸ, ತಲೆನೋವು, ಕಣ್ಣು ಕೆಂಪಾಗುವುದು ಸೇರಿದಂತೆ ವಿವಿಧ ಲಕ್ಷಣಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದರೆ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ತಿಳಿಸಿದರು. 

‘ಪ್ರತಿನಿತ್ಯ ಮಕ್ಕಳು ಕನಿಷ್ಠ ಒಂದು ಗಂಟೆ ಹೊರಗಡೆ ಆಟ ಆಡಬೇಕು. ಇದರಿಂದ ಕಣ್ಣಿನ ಮೇಲಿನ ಆಯಾಸ ಕಡಿಮೆ ಆಗುತ್ತದೆ. ಮನೆ ಹಾಗೂ ಶಾಲೆಯ ಒಳಗೆ ಸಮಯವನ್ನು ಕಳೆಯುತ್ತಿರುವುದು ಕಣ್ಣಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಚಿಕ್ಕ ವಯಸ್ಸಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ’‌ ಎಂದರು.

‘ಮಕ್ಕಳು ಹೊರಗಡೆ ಆಟ ಆಡುತ್ತಿಲ್ಲ. ಇದರಿಂದ ದೃಷ್ಟಿದೋಷ ಸಮಸ್ಯೆ ಬರುತ್ತಿದೆ. ಮಕ್ಕಳ ಬರವಣಿಗೆಯಲ್ಲಿ ದೋಷ, ಓದಿನಲ್ಲಿ ಸಮಸ್ಯೆ ಉಂಟಾದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳು ಟಿ.ವಿಯನ್ನು ಹತ್ತಿರದಿಂದ ನೋಡುತ್ತಿದ್ದರೆ ಪಾಲಕರು ನಿರ್ಲಕ್ಷಿಸಬಾರದು. ಕಣ್ಣಿನ ಸಮಸ್ಯೆ ಬಂದಿರುವ ಸಾಧ್ಯತೆ ಇರುತ್ತದೆ. ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಮಕ್ಕಳು ಬರುತ್ತಾರೆ’ ಎಂದು ಡಾ. ಅಗರವಾಲ್ಸ್ ಐ ಹಾಸ್ಪಿಟಲ್‌ನ ವೈದ್ಯ ಡಾ. ರವಿ  ತಿಳಿಸಿದರು.

ಸಮಸ್ಯೆ ಹೆಚ್ಚಳಕ್ಕೆ ಏನು ಕಾರಣ? 

*ಅತಿಯಾದ ಮೊಬೈಲ್ ಫೋನ್ ಬಳಕೆ

*ಟಿ.ವಿ, ಕಂಪ್ಯೂಟರ್ ವೀಕ್ಷಣೆ

*ನಿರಂತರವಾಗಿ ಓದುವುದು

*ಧೂಳು, ಪರಿಸರ ಮಾಲಿನ್ಯ

*ವಿಡಿಯೊ ಗೇಮ್‌ ಆಡುವುದು

*ಕಣ್ಣಿಗೆ ವಿಶ್ರಾಂತಿ ನೀಡದಿರುವುದು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು