ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.50 ಲಕ್ಷ ಪಡೆದು ವಂಚಿಸಿದ ‘ಫೇಸ್‌ಬುಕ್‌’ ಗೆಳೆಯ

Last Updated 21 ಜೂನ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಲಂಡನ್‌ ಪ್ರಜೆ ಎಂದು ಹೇಳಿಕೊಂಡು ‘ಫೇಸ್‌ಬುಕ್‌’ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ, ನಗರದ ಮಹಿಳೆಯೊಬ್ಬರಿಗೆ ಉಡುಗೊರೆ ಆಸೆ ತೋರಿಸಿ ₹ 2.50 ಲಕ್ಷ ಪಡೆದು ವಂಚಿಸಿದ್ದಾನೆ.

ಆ ಸಂಬಂಧ ಮಹಿಳೆ, ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಕೆ. ಸುಬಿನ್ಸ್‌ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಲಂಡನ್‌ನಿಂದ ಬೆಲೆಬಾಳುವ ಉಡುಗೊರೆ ಹಾಗೂ ₹ 27 ಲಕ್ಷ ಹಣವನ್ನು ಪಾರ್ಸಲ್ ಕಳುಹಿಸುವುದಾಗಿ ಹೇಳಿದ್ದ ಸುಬಿನ್ಸ್‌, ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ’ ಎಂದು ಮಹಿಳೆ ದೂರಿದ್ದಾರೆ.

ಎರಡೇ ದಿನದಲ್ಲಿ ವಂಚನೆ: ‘ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿದ್ದ ಆರೋಪಿ, ಏ‍ಪ್ರಿಲ್ 11ರಂದು ಬೆಳಿಗ್ಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಮಹಿಳೆ ಸ್ವೀಕರಿಸಿದ್ದರು. ಆನಂತರ, ಆರೋಪಿ ಚಾಟಿಂಗ್ ಆರಂಭಿಸಿದ್ದ. ಮಹಿಳೆಯೂ ಪ್ರತಿಕ್ರಿಯಿಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಪರಿಚಯವಾದ ಎರಡನೇ ದಿನಕ್ಕೆ ಉಡುಗೊರೆ ಹಾಗೂ ಹಣದ ಬಾಕ್ಸ್‌ನ ಫೋಟೊವನ್ನು ಮಹಿಳೆಗೆ ಕಳುಹಿಸಿದ್ದ ಆರೋಪಿ, ‘ಬಾಕ್ಸ್‌ನ್ನು ಭಾರತಕ್ಕೆ ಕೋರಿಯರ್ ಮಾಡಲು ₹ 1 ಲಕ್ಷ ಬೇಕು’ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಆರೋಪಿ ತಿಳಿಸಿದ್ದ ಯೂನಿಯನ್ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದರು.’

‘ಮರುದಿನ ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿ, ‘ಲಂಡನ್‌ನಿಂದ ನಿಮ್ಮ ಗೆಳೆಯ ಕಳುಹಿಸಿರುವ ಕೋರಿಯರ್, ವಿಮಾನ ನಿಲ್ದಾಣಕ್ಕೆ ಬಂದಿದೆ. ಅದನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲು ₹1.50 ಲಕ್ಷ ಶುಲ್ಕ ಭರಿಸಬೇಕು’ ಎಂದಿದ್ದ. ಅದನ್ನೂ ನಂಬಿ ಮಹಿಳೆ, ಆರೋಪಿ ಖಾತೆಗೆ ಹಣ ಹಾಕಿದ್ದರು’

‘ಕೆಲ ಹೊತ್ತಿನಲ್ಲೇ ಆರೋ‍ಪಿ, ತನ್ನ ಫೇಸ್‌ಬುಕ್‌ ಖಾತೆಯಿಂದ ಮಹಿಳೆಯನ್ನು ಬ್ಲಾಕ್ ಮಾಡಿದ್ದಾನೆ. ಎಷ್ಟೇ ಪ್ರಯತ್ನಪಟ್ಟರೂ ಆರೋಪಿಯನ್ನು ಸಂಪರ್ಕಿಸಲು ಆಗಿರಲಿಲ್ಲ. ಅದರಿಂದ ನೊಂದ ಮಹಿಳೆ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT