ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ವಿದ್ಯಾರ್ಥಿ ನಿಲಯ ನಿರ್ವಹಣೆ ಲೋಪ: ಅಧಿಕಾರಿಗಳಿಗೆ ನೋಟಿಸ್‌

Published 26 ಮೇ 2024, 15:55 IST
Last Updated 26 ಮೇ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಕಲಾ ಕಾಲೇಜು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯದ ನಿರ್ವಹಣೆಯಲ್ಲಿ ಲೋಪ ಎಸಗಿರುವ ಆರೋಪದಡಿ ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಜಂಟಿ ನಿರ್ದೇಶಕ ಲಕ್ಷ್ಮಣ್‌ ರೆಡ್ಡಿ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ಸಹಾಯಕ ನಿರ್ದೇಶಕ ಹರೀಶ್‌ ರೆಡ್ಡಿ ಅವರಿಗೆ ಇಲಾಖೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದೆ.

ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಏಪ್ರಿಲ್‌ 27ರಂದು ವಿದ್ಯಾರ್ಥಿ ನಿಲಯಕ್ಕೆ ದಿಢೀರ್‌ ಭೇಟಿ ನೀಡಿದ್ದರು. ಆಗ, ವಿದ್ಯಾರ್ಥಿ ನಿಲಯದ ನಿರ್ವಹಣೆಯಲ್ಲಿ ವ್ಯಾಪಕ ಲೋಪಗಳಿರುವುದು ಕಂಡುಬಂದಿತ್ತು.

ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವುದು, ಅಡುಗೆ ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿರುವುದು, ಕೀಲಿ ಕೈಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದಿರುವುದು, ಭದ್ರತಾ ಸಿಬ್ಬಂದಿಗೆ ವೇತನ ಪಾವತಿ ರಸೀದಿ ನೀಡದಿರುವುದು, ಸಿವಿಲ್‌ ಕಾಮಗಾರಿ ನಡೆಯುತ್ತಿದ್ದರೂ ಇಬ್ಬರೂ ಅಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸದೇ ಇರುವುದು ಪ್ರಧಾನ ಕಾರ್ಯದರ್ಶಿ ಭೇಟಿ ವೇಳೆ ಪತ್ತೆಯಾಗಿತ್ತು.

ಈ ಸಂಬಂಧ ಲಕ್ಷ್ಮಣ್‌ ರೆಡ್ಡಿ ಮತ್ತು ಹರೀಶ್‌ ರೆಡ್ಡಿ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯ ಅಧಿಕಾರಿಗಳ ತಂಡವೊಂದು ಏ. 29 ರಂದು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು.

ಹಿಂದಿನ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದ ವಿಷಯಗಳ ಕುರಿತು ಕ್ರಮ ಕೈಗೊಳ್ಳದೇ ಇರುವುದರ ಜತೆಗೆ ಮತ್ತಷ್ಟು ಲೋಪಗಳಿರುವುದು ಅಧಿಕಾರಿಗಳ ತಂಡದ ತಪಾಸಣೆಯಲ್ಲಿ ಪತ್ತೆಯಾಗಿದೆ. ಈ ಕಾರಣದಿಂದ ಜಂಟಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಶಿಸ್ತುಕ್ರಮ ಜರುಗಿಸಲು ಮುಂದಾಗಿರುವ ಇಲಾಖೆ, ಕಾರಣ ಕೇಳಿ ಇಬ್ಬರಿಗೂ ಗುರುವಾರ (ಮೇ 23) ಕಾರಣ ಕೇಳುವ ನೋಟಿಸ್‌ ಜಾರಿಗೊಳಿಸಿದೆ.

‘ಮೆನು ಪಟ್ಟಿಯ ಪ್ರಕಾರ ಆಹಾರ ಸಿದ್ಧಪಡಿಸದೇ ಇರುವುದು, ಮಧ್ಯಾಹ್ನ ವಿಳಂಬವಾಗಿ ಅಡುಗೆ ಸಿದ್ಧಪಡಿಸುತ್ತಿರುವುದು, ಮಕ್ಕಳ ಹಾಜರಾತಿ ಪಡೆಯದಿರುವುದು, ಸೋಪ್‌ ಕಿಟ್‌ಗಳನ್ನು ವಿತರಿಸದೇ ಉಳಿಸಿಕೊಂಡಿರುವುದು ಮತ್ತು ದಾಸ್ತಾನು ವಹಿ ನಿರ್ವಹಿಸದೇ ಇರುವುದು ಸೇರಿದಂತೆ ಹಲವು ಲೋಪಗಳು ಅಧಿಕಾರಿಗಳ ತಂಡದ ತಪಾಸಣೆಯಲ್ಲಿ ಪತ್ತೆಯಾಗಿವೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT