ಬುಧವಾರ, ಜನವರಿ 27, 2021
18 °C

ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಸಂದೇಶ: ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯೆ ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿರುವ ಅಪರಿಚಿತರು, ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 

ಆರೋಪಿಯಿಂದ ಕಿರುಕುಳ ಅನುಭವಿಸಿರುವ ಮಹಿಳೆಯೊಬ್ಬರು, ನಕಲಿ ಖಾತೆ ಬಗ್ಗೆ ಪದ್ಮಿನಿ ಪ್ರಸಾದ್ ಅವರಿಗೆ ಮಾಹಿತಿ ನೀಡಿದ್ದಾರೆ. ಖಾತೆ ನಿಷ್ಕ್ರಿಯಗೊಳಿಸುವಂತೆ ಫೇಸ್‌ಬುಕ್‌ ಸಹಾಯವಾಣಿಗೆ ಈಗಾಗಲೇ ದೂರು ಸಲ್ಲಿಸಿರುವ ಪದ್ಮಿನಿ, ಸೈಬರ್ ಪೊಲೀಸರಿಗೆ ಸದ್ಯದಲ್ಲೇ ದೂರು ನೀಡುವುದಾಗಿ ತಿಳಿಸಿದ್ದಾರೆ.

‘ಲೈಂಗಿಕ ಆರೋಗ್ಯ ವಿಷಯದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ವಾಹಿನಿಗಳಲ್ಲೂ ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತೇನೆ. ದಿನಪತ್ರಿಕೆಗಳಲ್ಲೂ ಲೇಖನ ಬರೆಯುತ್ತೇನೆ. ಅದನ್ನೇ ಬಂಡವಾಳ ಮಾಡಿಕೊಂಡ ಅಪರಿಚಿತರು, ಈ ಹಿಂದೆಯೂ ನಾಲ್ಕೈದು ನಕಲಿ ಖಾತೆ ತೆರೆದಿದ್ದರು. ಅವುಗಳನ್ನು ಫೇಸ್‌ಬುಕ್‌ ಸಹಾಯವಾಣಿ ಮೂಲಕ ನಿಷ್ಕ್ರಿಯಗೊಳಿಸಿದ್ದೆ. ಆದರೀಗ ಪುನಃ 2 ನಕಲಿ ಖಾತೆ ತೆರೆದಿರುವ ಅಪರಿಚಿತರು, ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಮಹಿಳೆಯರು ಎಚ್ಚರಿಕೆ ವಹಿಸಬೇಕು’ ಎಂದು ಪದ್ಮಿನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೈಜ ಖಾತೆ ಎಂದು ತಿಳಿದ ಹಲವು ಮಹಿಳೆಯರು, ಲೈಂಗಿಕ ಸಮಸ್ಯೆ ಹೇಳಿಕೊಂಡು ನಕಲಿ ಖಾತೆಗೆ ಸಂದೇಶ ಕಳುಹಿಸಿದ್ದಾರೆ. ಅದಕ್ಕೆ ಉತ್ತರಿಸುತ್ತಿದ್ದ ಆರೋಪಿ, ಅಶ್ಲೀಲವಾಗಿ ಮಾತನಾಡಿದ್ದಾರೆ. ಅಸಭ್ಯ ಪದಗಳನ್ನು ಬಳಸಿ ಸಂದೇಶವನ್ನೂ ಕಳುಹಿಸುತ್ತಿದ್ದಾರೆ. ಅಂಗಾಂಗಗಳ ವಿಡಿಯೊ ಮಾಡಿ ಕಳುಹಿಸುವಂತೆಯೂ ಪೀಡಿಸಿದ್ದಾರೆ. ಆಸ್ಪತ್ರೆಗೆ ಬಂದು ಭೇಟಿಯಾಗುವುದಾಗಿ ಕೆಲ ಮಹಿಳೆಯರು ಹೇಳಿದಾಗ, ಕೊರೊನಾ ಸೋಂಕಿನ ಕಾರಣ ನೀಡಿ ಅವರ ದಿಕ್ಕು ತಪ್ಪಿಸಲಾಗಿದೆ. ಆರೋಪಿ ವರ್ತನೆಯಿಂದ ಅನುಮಾನಗೊಂಡಿದ್ದ ಮಹಿಳೆ ನನಗೆ ವಿಷಯ ತಿಳಿಸಿದ್ದಾರೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು