ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ತುಳುಕುತಿದೆ ಹೆಸರಘಟ್ಟ ಕೆರೆ ಒಡಲು, ಮತ್ತೆ ಬೆಂಗಳೂರಿಗೆ ನೀರು ಪೂರೈಕೆ

35 ವರ್ಷದ ನಂತರ ಕೋಡಿ; ಮತ್ತೆ ನಗರಕ್ಕೆ ನೀರು ಪೂರೈಕೆ l 3 ದಶಕದ ನಂತರ ತುಂಬಿರುವ ಕೆರೆ ನೋಡಲು ಜನರ ಆಗಮನ
Last Updated 24 ಅಕ್ಟೋಬರ್ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಗೆ ಮೊದಲು ಹೊರಭಾಗದಿಂದ ಕುಡಿಯುವ ನೀರು ಸರಬರಾಜು ಮಾಡಿದ್ದ ಹೆಸರಘಟ್ಟ ಜಲಾಶಯ 35 ವರ್ಷಗಳ ನಂತರ ತುಂಬಿ ತುಳುಕುತ್ತಿದೆ. ಯಾವುದೇ ಸಂದರ್ಭದಲ್ಲಿ ಕೋಡಿ ಬೀಳುವ ಸಂಭವವಿದೆ.

ಹೆಸರಘಟ್ಟ ಕೆರೆಗೆ ಕಾಕೋಳು ಹಾಗೂ ಬ್ಯಾತಾ ಕೆರೆಗಳಿಂದ ನೀರು ಸತತವಾವಾಗಿ ಹರಿದು ಬರುತ್ತಿದ್ದು, ಗರಿಷ್ಠ ಮಟ್ಟ 71 ಅಡಿಯನ್ನು ಕೆಲವು ದಿನಗಳಲ್ಲಿ ಮುಟ್ಟುವ ಸಾಧ್ಯತೆ ಇದೆ. 70 ಅಡಿ ನೀರು ತುಂಬಿದ ಮೇಲೆ ಕೆರೆ ಸ್ವಯಂಚಾಲಿತ ‘ಸೈಫೋನ್‌’ ವ್ಯವಸ್ಥೆಯಿಂದ ಕೋಡಿ ಹರಿಯುತ್ತದೆ. ಸೋಮವಾರ ಕೆರೆಯಲ್ಲಿ ನೀರಿನ ಮಟ್ಟ 69.5 ಅಡಿಯಾಗಿತ್ತು. 197 ಕೆರೆಗಳಿಂದ ನೀರಿನ ಹರಿವು ಬರು ವುದರಿಂದ ಹೆಸರಘಟ್ಟದ ನೀರಿನ ಸಂಗ್ರಹ ಸಾಮರ್ಥ್ಯ ಒಂದು ಟಿಎಂಸಿ ಅಡಿಯಾಗಿದೆ. 3 ದಶಕದ ನಂತರ ತುಂಬಿರುವ ಕೆರೆಯನ್ನು ನೋಡಲು ನಾಗರಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ನಂದಿ ಬೆಟ್ಟದಲ್ಲಿ ಉಗಮವಾಗುವ ಅರ್ಕಾವತಿ ನದಿಯ ಹರಿವು ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ವ್ಯಾಪ್ತಿಯಿಂದ ಹೆಸರಘಟ್ಟ ತಲುಪುತ್ತದೆ. ಕಳೆದವಾರ ನೀರು ಅತಿ ಹೆಚ್ಚಾಗಿ ಹರಿದುಬಂದಿತ್ತು. ಎರಡು ದಿನಗಳಿಂದ ಮಳೆ ಕಡಿಮೆ ಯಾಗಿರುವುದರಿಂದ ನೀರಿನ ಹರಿವು ಕಡಿಮೆಯಾಗಿದೆ. ಮಧುರೈ ಕೆರೆಯಲ್ಲಿ ನೀರು ಕೋಡಿಯಾಗುವ ಸಂಭವವಿದ್ದು, ಯಾವ ಸಂದರ್ಭದಲ್ಲಾದರೂ ನೀರು ಜಲಾಶಯಕ್ಕೆ ಬರುವ ಸಾಧ್ಯತೆ ಇದೆ. ಆ ನೀರು ಬಂದರೆ ಹೆಚ್ಚು ನೀರು ಕೋಡಿಯಾಗುತ್ತದೆ. ಈ ಹಿಂದೆ 1987ರಲ್ಲಿ ಜಲಾಶಯ ಕೋಡಿಯಾಗಿತ್ತು ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ಜಲಾಶಯ ತುಂಬಿದಾಗ ಕೋಡಿ ಹರಿಯುವ ವ್ಯವಸ್ಥೆಯನ್ನು (ಸೈಫೋನ್‌) ಸರ್ ಎಂ. ವಿಶ್ವೇಶ್ವರಯ್ಯ ಅವರು ಇಲ್ಲಿ ಒದಗಿಸಿದ್ದಾರೆ. ಕೋಡಿ ಹರಿಯುವಾಗ ನೀರು ಹಳ್ಳದಲ್ಲಿ ಹರಿದು ಮೇಲೆ ಬರುವಂತಿದೆ. ಇದರಿಂದ ಜೋರಾದ ಶಬ್ದ ಬಂದು ಅಕ್ಕಪಕ್ಕದವರನ್ನು ಎಚ್ಚರಿಸುವ ವ್ಯವಸ್ಥೆ ಇದು. ಇದಕ್ಕೆ ವಿದ್ಯುತ್‌ ಅಥವಾ ಯಾವುದೇ ಚಾಲನೆ ಮಾಡುವುದು ಬೇಡ.

ಡಿಪಿಆರ್‌ ಸಿದ್ಧ: ಹೆಸರಘಟ್ಟ ಜಲಾಶಯದಿಂದ ನಗರಕ್ಕೆ ಮತ್ತೆ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಿತ್ಯವೂ 35 ದಶಲಕ್ಷ ಲೀಟರ್‌ (ಎಂಎಲ್‌ಡಿ) ನೀರು ಪೂರೈಸುವ ಈ ಯೋಜನೆಗೆ ₹180 ಕೋಟಿ ವೆಚ್ಚವಾಗಲಿದೆ. ಸೋಲ ದೇವನಹಳ್ಳಿಯಲ್ಲಿ ಹಿಂದಿದ್ದ ಪಂಪಿಂಗ್‌ ಸ್ಟೇಷನ್‌ನಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತದೆ. ಹೊಸದಾಗಿ ಕೊಳವೆ ಮಾರ್ಗಗಳನ್ನು ಹಾಕಿ, ನಗರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದೆ.

ತುಮಕೂರಿನ ಕೊರಟಗೆರೆ ಬಳಿಯ ಬೈರಗೊಂಡಲು ಜಲಾಶಯದಲ್ಲಿ ಸಂಗ್ರಹವಾಗುವ ಎತ್ತಿನಹೊಳೆ ನೀರಿನಲ್ಲಿ ಹೆಸರಘಟ್ಟಕ್ಕೆ 0.8 ಟಿಎಂಸಿ ನೀರು ಹರಿಸುವ ಯೋಜನೆಯೂ ಇದೆ. ಈ ಮೂಲಕ ನಗರಕ್ಕೆ ಕುಡಿಯುವ ನೀರು ಪೂರೈಸಲು ಯೋಜಿಸಲಾಗಿದೆ. ಆದರೆ, ಎತ್ತಿನಹೊಳೆ ನೀರು ಬರುವುದಕ್ಕೆ ಮುನ್ನವೇ ಸೆ.5ರಂದು ತಿಪ್ಪಗೊಂಡನಹಳ್ಳಿ ಜಲಾಶಯವೂ ತುಂಬಿಕೊಂಡಿದ್ದು, ಇದೀಗ ಹೆಸರಘಟ್ಟವೂ ತುಂಬಿದೆ. ಹೀಗಾಗಿ, ಎತ್ತಿನಹೊಳೆ ನೀರಿಗೆ ಕಾಯು ವಂತೆಯೂ ಇಲ್ಲ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಏಪ್ರಿಲ್‌ ವೇಳೆಗೆ ನೀರು ಪೂರೈಕೆಯಾಗಿದೆ. ಆದರೆ, ಹೆಸರಘಟ್ಟದಿಂದ ಸದ್ಯಕ್ಕೆ ನಗರಕ್ಕೆ ನೀರು ಬರುವುದಿಲ್ಲ. ಸರ್ಕಾರದ ಮಟ್ಟದಲ್ಲಿರುವ ಯೋಜನೆಗೆ ಅನುಮತಿ ದೊರೆತು, ಅದಾದ ನಂತರ ಕಾಮಗಾರಿ ಆರಂಭವಾಗಬೇಕಿದೆ. ಇದಾದರೆ 40 ವರ್ಷಗಳ ನಂತರ ಹೆಸರಘಟ್ಟದಿಂದ ನಗರಕ್ಕೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗುತ್ತದೆ.

1894ರಿಂದ ನೀರು ಪೂರೈಕೆ

ಬೆಂಗಳೂರಿನ ಜನಸಂಖ್ಯೆ 1891ರಲ್ಲಿ 1.8 ಲಕ್ಷ. ಈ ಸಂದರ್ಭದಲ್ಲಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅರ್ಕಾವತಿ ನದಿಗೆ ಅಡ್ಡಲಾಗಿ 1894ರಲ್ಲಿ ಹೆಸರಘಟ್ಟ ಕೆರೆ ಜಲಾಶಯವನ್ನು ಅಂದಿನ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್‌ ಅವರು ನಿರ್ಮಿಸಿದರು. ಪ್ರತಿ ದಶಕಕ್ಕೆ ಶೇ 16ರಷ್ಟು ಜನಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಿ, ಚಾಮರಾಜೇಂದ್ರ ವಾಟರ್‌ ವರ್ಕ್ಸ್‌ನಿಂದ ಪೈಪ್‌ಮಾರ್ಗದಲ್ಲಿ ಸೋಲದೇವನಹಳ್ಳಿಯಿಂದ ಮಲ್ಲೇಶ್ವರಕ್ಕೆ ನೀರು ಪಂಪ್‌ ಮಾಡಲಾಗಿತ್ತು. ಅಲ್ಲಿ ನೀರು ಸಂಸ್ಕರಿಸಿ, ಪ್ರತಿನಿತ್ಯ 36 ದಶಲಕ್ಷ ಲೀಟರ್‌ ಪೂರೈಸಲಾಗುತ್ತಿತ್ತು.

1918ಕ್ಕೇ ಬೆಂಗಳೂರು ಜನಸಂಖ್ಯೆ ‌2.5 ಲಕ್ಷವಾಯಿತು. ಹೆಸರಘಟ್ಟದ ನೀರು ನಗರಕ್ಕೆ ಕಡಿಮೆಯಾಯಿತು. ನಂತರದ ದಿನಗಳಲ್ಲಿ ತಿಪ್ಪಗೊಂಡನಹಳ್ಳಿ, ಕಾವೇರಿಯಿಂದ ನೀರು ಪೂರೈಕೆ ಆರಂಭವಾಯಿತು. 1983ರಲ್ಲಿ ಹೆಸರಘಟ್ಟದಿಂದ ನಗರಕ್ಕೆ ನೀರು ಪಂಪ್‌ ಮಾಡುವ ಕಾರ್ಯ ನಿಂತುಹೋಯಿತು. ಹೆಸರಘಟ್ಟ ಜಲಾಶಯದ ಸೌಂದರ್ಯಕ್ಕೆ ಮಾರುಹೋಗಿದ್ದ ಯುರೋಪಿಯನ್ನರು ಈಜು, ಪೆಡ್ಲಿಂಗ್‌, ರೋವಿಂಗ್ ಕ್ರೀಡೆಗಳ ರಾಷ್ಟ್ರೀಯ ಕ್ರೀಡಾಕೂಟವನ್ನೂ ನಡೆಸಿದ್ದರು. ರೋವಿಂಗ್‌ ಕ್ಲಬ್‌ ಅನ್ನೂ ಇಲ್ಲಿ ಸ್ಥಾಪಿಸಿದ್ದರು.

ಹೆಸರಘಟ್ಟ ಜಲಾಶಯ

71 ಅಡಿ:ಜಲಾಶಯದ ಎತ್ತರ

1,620 ಹೆಕ್ಟೇರ್‌:ವಿಸ್ತೀರ್ಣ

1 ಟಿಎಂಸಿ ಅಡಿ:ಸಂಗ್ರಹ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT