ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ

ನಗರದಲ್ಲಿ ಪ್ರತಿಭಟನೆ– ರಸ್ತೆ ತಡೆ * ಸುಗ್ರೀವಾಜ್ಞೆ ವಾಪಸ್‌ ಪಡೆಯಲು ಆಗ್ರಹ
Last Updated 25 ಸೆಪ್ಟೆಂಬರ್ 2020, 22:19 IST
ಅಕ್ಷರ ಗಾತ್ರ

ಬೆಂಗಳೂರು:ಭೂ ಸುಧಾರಣೆ, ಎಪಿಎಂಸಿ ಸೇರಿದಂತೆ ಹಲವು ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿವೆ. ಇವುಗಳನ್ನು ವಾಪಸ್‌ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ನೂರಾರು ರೈತರು, ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಕೆಲವು ರೈತರು ಉರುಳು ಸೇವೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಅರೆಬೆತ್ತಲೆಯಾಗಿ ತಲೆ ಕೆಳಗಾಗಿ ನಿಲ್ಲುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಕೆಲವರು ಮಾಡಿದರು.

ರೈತರು ವಶಕ್ಕೆ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಮ್ಮ ಸಂಘದ ಸದಸ್ಯರ ಜೊತೆ ಸೇರಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೂ, ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಭಟನಕಾರರು ಕಂಡುಬರಲಿಲ್ಲ. ರೈತರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಈ ಪ್ರತಿಭಟನೆಗೆ ಸುಮಾರು 5000 ಜನ ಸೇರುತ್ತಾರೆ ಎಂದು ಐಕ್ಯಹೋರಾಟ ಸಮಿತಿಯ ಸದಸ್ಯರು ಹೇಳಿದ್ದರು. ಆದರೆ, 500ಕ್ಕಿಂತ ಕಡಿಮೆ ರೈತರು ಇದ್ದರು. ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. 11ಕ್ಕೆ ಪ್ರಾರಂಭವಾದ ಪ್ರತಿಭಟನೆ, 12.30ರ ವೇಳೆಗೆ ಮುಕ್ತಾಯವಾಯಿತು.

ಎಂಟು ಬಸ್‌ಗಳಲ್ಲಿ ರೈತರನ್ನು ಕರೆದೊಯ್ದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು ಸಂಜೆ ಬಿಡುಗಡೆ ಮಾಡಿದರು.

ಸಂಚಾರ ದಟ್ಟಣೆ:ಬೆಂಗಳೂರು–ಮೈಸೂರು, ಬೆಂಗಳೂರು–ಪುಣೆ ಹೆದ್ದಾರಿ ತಡೆದ ರೈತರು,ಗೊರಗುಂಟೆಪಾಳ್ಯ, ನಾಯಂಡಹಳ್ಳಿ ಬಳಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಮತ್ತು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಅಕ್ಕ–ಪಕ್ಕದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಕಾಯ್ದೆಯಲ್ಲಿ ಅಲ್ಪ ಬದಲಾವಣೆ:ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ತಿದ್ದುಪಡಿ ಮಸೂದೆಗಳಲ್ಲಿ ಅಲ್ಪ ಬದಲಾವಣೆ ಮಾಡಲು ಚಿಂತಿಸಲಾಗುತ್ತಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ರಾಜ್ಯ ಸರ್ಕಾರವು ವಿರೋಧಿಸಬೇಕು. ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ಮಾಡಿ, ಕೃಷಿ ಪಂಪ್‌ಸೆಟ್‌ ಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ಮಾಡಲಾಗುತ್ತಿದೆ. ತೆಲಂಗಾಣ ಮತ್ತು ಇತರೆ ರಾಜ್ಯಗಳು ಈ ಮಸೂದೆಯನ್ನು ವಿರೋಧಿಸಿವೆ. ರಾಜ್ಯಸರ್ಕಾರವೂ ಈ ತಿದ್ದುಪಡಿಯನ್ನು ಒಪ್ಪಬಾರದು’ ಎಂದು ನಿಯೋಗ ಮನವಿ ಮಾಡಿತು.

ನಿಯೋಗವು, ಈ ಮಸೂದೆಗಳಿಂದ ರೈತರು, ಕಾರ್ಮಿಕರು ಮತ್ತು ದಲಿತರಿಗೆ ಆಗುವ ಅಪಾಯಗಳ ಬಗ್ಗೆ ವಿವರಿಸಿದರೆ, ಮುಖ್ಯಮಂತ್ರಿಯವರು, ಕಾಯ್ದೆಯಲ್ಲಿನ ಉತ್ತಮ ಅಂಶಗಳ ಬಗ್ಗೆ ವಿವರಣೆ ನೀಡಿದರು.

ಬಂದ್ ತೀವ್ರಗೊಳಿಸಲು ಸಮಿತಿ ನಿರ್ಧಾರ’:‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಂದ ಸ್ಪಷ್ಟ ಭರವಸೆ ಸಿಗದ ಕಾರಣ, ಸೆ.28ರ ರಾಜ್ಯ ಬಂದ್‌ ಅನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ’ ಎಂದು ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಹೇಳಿದೆ.

ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ಮಾರುತಿ ಮಾನ್ಪಡೆ, ಕುರುಬೂರು ಶಾಂತಕುಮಾರ್,ಗುರುಪ್ರಸಾದ್‌ ಕೆರೆಗೋಡು, ವಿ. ಗಾಯತ್ರಿ, ಕವಿತಾ ಕುರುಗುಂಟಿ, ಟಿ. ಯಶವಂತ, ಪ್ರಕಾಶ್ ಕಮ್ಮರಡಿ ಅವರಿದ್ದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ಪ್ರಕಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT