ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರಗಾಲ: ರೈತರ ನೆರವಿಗೆ ಧಾವಿಸಲು ಆಗ್ರಹ

ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದಿಂದ ಮನವಿ ಸಲ್ಲಿಕೆ
Published 15 ಏಪ್ರಿಲ್ 2024, 15:55 IST
Last Updated 15 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಎಲ್ಲ ಬ್ಯಾಂಕ್‌ಗಳೂ ಬಡ್ಡಿ ರಹಿತ ಸಾಲ ಸೌಲಭ್ಯ ಕಲ್ಪಿಸಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಸದಸ್ಯರು ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯವು ಭೀಕರ ಬರದಿಂದ ತತ್ತರಿಸುತ್ತಿದೆ. ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದ್ದು ರೈತರು ಚಿಂತಿತರಾಗಿದ್ದಾರೆ. ಸರ್ಕಾರವು ತಕ್ಷಣವೇ ರೈತರು ನೆರವಿಗೆ ಧಾವಿಸಬೇಕು ಎಂದು ರೈತರ ನಿಯೋಗವು ಆಗ್ರಹಿಸಿತು.

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಬೇಕು. ಅಲ್ಲದೇ ರಾಜ್ಯದ ಎಲ್ಲ ಜಲಾಶಯಗಳಿಂದಲೂ ಆಯಾ ವ್ಯಾಪ್ತಿಯ ನದಿಗಳಿಗೆ ನೀರು ಹರಿಸಬೇಕು ಎಂದು ರೈತರು ಕೋರಿದರು.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ಸಮಸ್ಯೆ ಕಾಡುತ್ತಿದೆ. ಚುನಾವಣೆ ನೆಪ ಹೇಳಿಕೊಂಡು ವಿವಿಧ ಎಸ್ಕಾಂಗಳ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು. 

ಸರ್ಕಾರ ರಾಜ್ಯದ 224 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ, ಪರಿಹಾರವಾಗಿ ರೈತರ ಖಾತೆಗೆ ₹ 2 ಸಾವಿರ ಹಣವನ್ನು ವರ್ಗಾಯಿಸಲಾಗಿತ್ತು. ಇದರಿಂದ ಯಾವುದೇ ಅನುಕೂಲ ಆಗಿಲ್ಲ. ಪರಿಹಾರದ ಮೊತ್ತ ಹೆಚ್ಚಿಸಬೇಕು. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾನದಂಡದಂತೆ ಹಣ ಬಿಡುಗಡೆಗೊಳಿಸಿ, ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸಬೇಕು ಎಂದು ಕೋರಿದರು.

ಬರದಿಂದ ಕೊಳವೆಬಾವಿಗಳು ಬತ್ತಿ ಹೋಗಿವೆ. ತೆಂಗು ಹಾಗೂ ಅಡಿಕೆ ಗಿಡಗಳು ಒಣಗಿವೆ. ತಕ್ಷಣವೇ ಬೆಳೆಗಾರರ ನೆರವಿಗೆ ಬರಬೇಕು ಎಂದು ಕೋರಿದರು.

ಕಾಡಂಚು ಹಾಗೂ ಅರಣ್ಯ ಪ್ರದೇಶದಲ್ಲೂ ನೀರಿನ ಕೊರತೆ ಎದುರಾಗಿದೆ. ಕುಡಿಯುವ ನೀರನ್ನು ಅರಸಿ ಕಾಡುಪ್ರಾಣಿಗಳು ನಾಡಿಗೆ ಧಾವಿಸುತ್ತಿವೆ. ಇದರಿಂದ ಬೆಳೆ ನಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯದಾದ್ಯಂತ ಬೆಳೆವಿಮೆ ನೋಂದಾಯಿಸಿಕೊಂಡಿರುವ ರೈತರಿಗೆ ಪರಿಹಾರ ಹಣ ಬಂದಿಲ್ಲ. ಇದಕ್ಕೆ ಯಾವುದೇ ಕಂಪನಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ದೂರಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸಿಲ್ಲ. ₹2,600 ಕೋಟಿಯಷ್ಟು ಬಾಕಿಯಿದೆ. ಸಂಬಂಧಪಟ್ಟ ಅಧಿಕಾರಿಯನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಿರುವ ಕಾರಣಕ್ಕೆ ಯಾವುದೇ ಪ್ರಕ್ರಿಯೆ ಸಹ ನಡೆಯುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷ್ಯ ವಹಿಸುತ್ತಿವೆ. ಬಾಕಿ ಹಣ ಪಾವತಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ರಾಜ್ಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ್, ಹತ್ತಳ್ಳಿ ದೇವರಾಜು, ನಾಗಾರ್ಜುನ್, ಬರಡನಪುರ ನಾಗರಾಜ್, ಧರ್ಮರಾಜ್, ಮಾದಪ್ಪ ಅವರ ನೇತೃತ್ವದಲ್ಲಿ ಮನವಿ ಸಲ್ಲಿಕೆ ಮಾಡಲಾಯಿತು.

ಜಲಾಶಯ ವ್ಯಾಪ್ತಿಯ ನದಿಗಳಿಗೆ ನೀರು ಹರಿಸಿ ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ವಿಮೆ ಪರಿಹಾರ ಶೀಘ್ರ ಬಿಡುಗಡೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT