ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹಕ್ಕೆ ಹೆದರಿ ಮನೆಯನ್ನೇ ಎತ್ತರಿಸಿದರು!

ಕೆ.ಆರ್.ಪುರದಲ್ಲಿ ಮೂರು ಅಡಿ ಎತ್ತರವಾದ ಕಟ್ಟಡ
Last Updated 29 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಳೆ ಬಂದರೆ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಯಿಂದ ಭಯಗೊಂಡಿರುವ ಬೆಂಗಳೂರಿನ ನಿವಾಸಿಗಳು, ಮನೆ ಎತ್ತರಿಸುವ (ಹೌಸ್ ಲಿಫ್ಟಿಂಗ್‌) ತಂತ್ರಜ್ಞಾನದ ಕಂಪನಿಗಳನ್ನು ಸಂಪರ್ಕಿಸುತ್ತಿದ್ದಾರೆ.ಮೂರು ತಿಂಗಳಲ್ಲಿ 400ಕ್ಕೂ ಹೆಚ್ಚು
ಮಂದಿ ಈ ಕಂಪನಿಗಳನ್ನು ಸಂಪರ್ಕಿಸಿದ್ದು, ಕೆ.ಆರ್‌.ಪುರದಲ್ಲಿ ಮನೆಯೊಂದನ್ನು 3 ಅಡಿ ಎತ್ತರಿಸಲಾಗಿದೆ.

ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದ್ದು, ಈ ವರ್ಷದ ಮಳೆ ನಗರದ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ವೆಚ್ಚ ದುಬಾರಿ ಎನಿಸಿದರೂ ಬೇರೆ ಮಾರ್ಗವಿಲ್ಲದೆ ಮನೆಗಳನ್ನು ಎತ್ತರಿಸಿಕೊಳ್ಳಲು ಜನ ಮುಂದಾಗುತ್ತಿದ್ದಾರೆ. ‘ಒಂದೇ ವರ್ಷದಲ್ಲಿ 10ಕ್ಕೂ ಹೆಚ್ಚು ಬಾರಿ ಮನೆ ಜಲಾವೃತಗೊಂಡಿದೆ. ಆ ಸಂದರ್ಭದ ಸಂಕಷ್ಟಕ್ಕೆ ಹೋಲಿಸಿದರೆ ಮನೆ ಎತ್ತರಿಸಿಕೊಳ್ಳಲು ತಗಲುವ ವೆಚ್ಚ ದುಬಾರಿ ಎನಿಸುವುದಿಲ್ಲ’ ಎನ್ನುತ್ತಾರೆ ಕೋಡಿಚಿಕ್ಕನಹಳ್ಳಿ ನಿವಾಸಿ ಸೌಮ್ಯಾ.

‘ಕಳೆದ ಮೂರು ತಿಂಗಳಲ್ಲೇ ಬೆಂಗಳೂರಿನಿಂದ 400ಕ್ಕೂ ಹೆಚ್ಚು ಮಂದಿ ನಮ್ಮನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದಾರೆ’ ಎಂದು ಕೇರಳದ ಶ್ರೀರಾಮ್‌ ಬಿಲ್ಡಿಂಗ್ ಲಿಫ್ಟಿಂಗ್ ವರ್ಕ್ಸ್‌ನ ವಿಕಾಸ್ ರಾಣಾ ಹೇಳುತ್ತಾರೆ.

ಮನೆಗಳು ಜಲಾವೃತಗೊಳ್ಳುವುದು ಹೆಚ್ಚಾದಂತೆ ಸುರಕ್ಷಿತ ಮಾಡಿಕೊಳ್ಳಲು ಹೌಸ್ ಲಿಫ್ಟಿಂಗ್ ಕಂಪನಿಗಳ ವೆಬ್‌ಸೈಟ್ ಜಾಲಾಡುತ್ತಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ 2022ರಲ್ಲಿ ಈ ಸೇವೆ ಹುಡುಕುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ‘ಕಳೆದ ವರ್ಷ ಈ ಬಗ್ಗೆ ವಿಚಾರಿಸಿ ಸುಮ್ಮನಾಗಿದ್ದವರು ಈಗ ಭಾರಿ ತೊಂದರೆ ಅನುಭವಿಸಿದ ಬಳಿಕ ಮತ್ತೆ ಸಂಪರ್ಕಿಸುತ್ತಿದ್ದಾರೆ. ಬನ್ನೇರುಘಟ್ಟ ರಸ್ತೆ, ಕೋಡಿಚಿಕ್ಕನಹಳ್ಳಿ, ಜೆ.ಪಿ. ನಗರ, ಕೆ.ಆರ್. ಪುರ, ಕೋಣನಕುಂಟೆ ಭಾಗಗಳಿಂದಲೇ ಹೆಚ್ಚು ಕರೆಗಳು ಬರುತ್ತಿವೆ’ ಎಂದು ಬೆಂಗಳೂರಿನಲ್ಲಿರುವ ಟಿಡಿಬಿಡಿ ಎಂಜಿನಿಯರಿಂಗ್ ವರ್ಕ್ಸ್‌ನ ಸುಶೀಲ್ ಸಿಸೋಡಿಯಾ ವಿವರಿಸಿದರು. 2019ರಿಂದ ಈಚೆಗೆ ಕನಿಷ್ಠ 150 ಮನೆಗಳನ್ನು ಎತ್ತರಿಸಲಾಗಿದೆ ಎಂದು ಸಾಯಿ ಹೌಸ್ ಲಿಫ್ಟಿಂಗ್ ಸರ್ವಿಸಸ್‌ನ ನವೀನ್ ಸಿಂಗ್ ಹೇಳಿದರು.

ಮನೆಗಳನ್ನು ಎತ್ತರಿಸುವುದು ಹೀಗೆ...

ಮನೆ ಎತ್ತರಿಸುವುದೆಂದರೆ ಜಾಕ್‌ಗಳ ಮೂಲಕ ಮನೆಗಳನ್ನು ಎತ್ತಿ ಅಡಿಪಾಯ ಎತ್ತರಿಸುವ ತಂತ್ರಜ್ಞಾನ. ಇದಕ್ಕೆ ತಗಲುವ ವೆಚ್ಚ ಕಟ್ಟಡದ ತೂಕ ಮತ್ತು ಎತ್ತರವನ್ನು ಅವಲಂಬಿಸುತ್ತದೆ.

ಮೊದಲಿಗೆ ನೆಲಹಾಸನ್ನು ತೆಗೆದು ಗೋಡೆಗಳಿಗೆ ಕಂದಕ ಕೊರೆದು ಜಾಕ್‌ಗಳನ್ನು ಇರಿಸಲಾಗುತ್ತದೆ. ನಂತರ ನಿಧಾನವಾಗಿ ಮೇಲೆಕ್ಕೆ ಏರಿಸಲಾಗುತ್ತದೆ. ಕಟ್ಟಡ ಒಂದೊಂದು ಅಡಿ ಮೇಲಕ್ಕೆ ಹೋದಂತೆ ಅಡಿಪಾಯ ಹಾಕಲಾಗುತ್ತದೆ. 1,200 ಚದರ ಅಡಿ ಮನೆಯನ್ನು ಮೂರು ಅಡಿಗಳಷ್ಟು ಎತ್ತರಿಸಲು ಕನಿಷ್ಠ 30ರಿಂದ 45 ದಿನಗಳು ಬೇಕಾಗುತ್ತದೆ. ಕನಿಷ್ಠ ₹5 ಲಕ್ಷ ವೆಚ್ಚವಾಗಲಿದೆ ಎಂದು ಕಂಪನಿಯೊಂದು ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

‘ತಜ್ಞರ ಸಲಹೆ ಪಡೆಯುವುದು ಸೂಕ್ತ’

ಮನೆ ಎತ್ತರಿಸುವುದು ಸರಕ್ಷಿತವೇ ಎಂಬುದರ ಬಗ್ಗೆ ಮೊದಲು ಸ್ಟ್ರಕ್ಚರಲ್ ಎಂಜಿನಿಯರ್‌ಗಳ ಅಭಿಪ್ರಾಯ ಪಡೆಯುವುದು ಸೂಕ್ತ ಎನ್ನುತ್ತಾರೆ ಸಿವಿಲ್ ಎಂಜಿನಿಯರ್‌ಗಳು. ‘ಪ್ರವಾಹ ತಡೆಗಟ್ಟಲು ಮನೆ ಎತ್ತರಿಸುವುದು ಉತ್ತಮ ಪರಿಹಾರ. ಆದರೆ, ಇದು ಅಪಾಯಕಾರಿ ವ್ಯವಹಾರ. ಪ್ರತಿಯೊಂದು ಕಟ್ಟಡವೂ ವಿಭಿನ್ನವಾಗಿರುತ್ತವೆ. ಕಟ್ಟಡ ಬಲವಾಗಿ ಉಳಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ’ ಎಂದು ಅಸೋಷಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಸಂಸ್ಥೆಯ ಬೆಂಗಳೂರು ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಚನ್ನಾಳ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT