ಬೆಂಗಳೂರು: ರಂಗಚಂದಿರ ಸಂಸ್ಥೆಯ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ 17ರಂದು ಸಂಜೆ ಉಪನ್ಯಾಸ, ಅಭಿನಂದನೆ ಹಾಗೂ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 6 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಸಂಗೀತ ವಿದ್ವಾಂಸ ವಿದ್ಯಾಭೂಷಣ ಅವರು ಅಭಿನಂದಿಸಲಿದ್ದಾರೆ. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ, ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್, ರಂಗಚಂದಿರದ ಗೌರವಾಧ್ಯಕ್ಷ ಆರ್. ಕೆ. ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಸಂಜೆ 6.30 ಗಂಟೆಗೆ ಲಕ್ಷ್ಮೀಶ ತೋಳ್ಪಾಡಿ ಅವರಿಂದ ’ಮಹಾಭಾರತದಲ್ಲಿ ಮಾತು ಮತ್ತು ಮೌನ‘ ಉಪನ್ಯಾಸ ನಡೆಯಲಿದೆ. ಸಂಜೆ 7 ರಿಂದ 8ರವರೆಗೆ ಉಡುಪಿಯ ಥಿಯೇಟರ್ ಯಕ್ಷ ತಂಡದವರು ‘ಚಕ್ರವ್ಯೂಹ‘ ಯಕ್ಷಗಾನ ಪ್ರಸ್ತುತಪಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸುಂದರ್ ಸರುಕ್ಕೈ, ಎ.ನಾರಾಯಣ, ಶಶಿಧರ ಅಡಪ, ಸಚ್ಚಿದಾನಂದ ಹೆಗಡೆ, ಎಂಎಎನ್ ಇಸ್ಮಾಯಿಲ್, ಪುರುಷೋತ್ತಮ ಅವರು ಭಾಗವಹಿಸಲಿದ್ದಾರೆ ಎಂದು ರಂಗಚಂದಿರ ಕಾರ್ಯದರ್ಶಿ ಜಿಪಿಒ ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.